ಕನ್ನಡಪ್ರಭ ವಾರ್ತೆ ಚೇಳೂರು ಪ್ರಕೃತಿ ಮುನಿಸಿದರೆ ಒಂದು ಸಂಕಷ್ಟ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಬದುಕು ನಾಶವಾದರೆ ಅದು ದುರಂತ. ಚೇಳೂರು ತಾಲೂಕಿನ ಚಿಲಕಲನೇರ್ಪು ಗ್ರಾಮದ ರೈತರು ಇದೀಗ ಇಂತಹ ದುರಂತಕ್ಕೆ ಸಾಕ್ಷಿಯಾಗಿದ್ದಾರೆ.
ಕುಶಾವತಿ ನದಿ ಪ್ರವಾಹದಿಂದಲ್ಲ, ಬದಲಿಗೆ ನದಿಗೆ ನಿರ್ಮಿಸಲಾದ ಎರಡು ಅವೈಜ್ಞಾನಿಕ ಚೆಕ್ ಡ್ಯಾಂಗಳ ನಿರ್ಮಾಣದಿಂದಾಗಿ ರಾಜಕಾಲುವೆ ನೀರು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.ಈ ಹಿನ್ನೆಲೆಯಲ್ಲಿ, ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ ಶಿಡ್ಲಘಟ್ಟ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ ಗೌಡ ಅವರು ಕುಶಾವತಿ ನದಿಗೆ ಬಾಗಿನ ಅರ್ಪಿಸಿ, ನಂತರ ಬೆಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಚಿಂತಾಮಣಿ ಮತ್ತು ಶಿಡ್ಲಘಟ್ಟ ಕೃಷಿ ಇಲಾಖೆ ಅಧಿಕಾರಿಗಳು ಆಗಮಿಸಿದ್ದರು.
ಚೆಕ್ ಡ್ಯಾಂನಲ್ಲಿ ತಲೆಕೆಳಗಾದ ತರ್ಕಕಣ್ಣಿಗೆ ಕಾಣುವಂತೆ ಅಧಿಕಾರಿಗಳು ಇಂಜಿನಿಯರಿಂಗ್ ತತ್ವಗಳನ್ನು ಗಾಳಿಗೆ ತೂರಿದ್ದಾರೆ. ಮುಂದೆ ನಿರ್ಮಿಸಿರುವ ಚೆಕ್ ಡ್ಯಾಂ ಅನ್ನು ಅತಿ ಎತ್ತರಕ್ಕೆ ಕಟ್ಟಿದ್ದು, ಹಿಂದೆ ಇರುವ ಚೆಕ್ ಡ್ಯಾಂನ ಎತ್ತರವನ್ನು ಕಡಿಮೆ ಮಾಡಿದ್ದಾರೆ. ಇದರ ಪರಿಣಾಮವಾಗಿ ನೀರು ಮುಂದಕ್ಕೆ ಸರಾಗವಾಗಿ ಹರಿಯುವ ಬದಲು ಹಿಂದಕ್ಕೇ ತಳ್ಳುತ್ತಿದೆ. ಈ ಬ್ಯಾಕ್ ವಾಟರ್ ಎಫೆಕ್ಟ್‌ನಿಂದಾಗಿ ರಾಜಕಾಲುವೆ ಪಕ್ಕದ ರೈತರ ಬೆಳೆದ ಬೆಳೆಗಳು ನಾಶವಾಗಿವೆ. ತಕ್ಷಣವೇ ಈ ಅವೈಜ್ಞಾನಿಕ ಡ್ಯಾಂಗಳ ದೋಷ ಸರಿಪಡಿಸಿ, ನೀರು ಸರಾಗವಾಗಿ ಹರಿಯಲು ಕ್ರಮ ಜರುಗಿಸಬೇಕು. ರೈತರಿಗೆ ಉಂಟಾಗಿರುವ ಬೆಳೆ ನಷ್ಟಕ್ಕೆ ಸರ್ಕಾರ ಕೂಡಲೇ ಪರಿಹಾರ ಘೋಷಿಸಬೇಕು ಎಂದು ಆನಂದಗೌಡ ಒತ್ತಾಯಿಸಿದರು.ಕೃಷಿ ಇಲಾಖೆ ಭರವಸೆಸ್ಥಳಕ್ಕೆ ಬಂದಿದ್ದ ಕೃಷಿ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೆ ನಡೆಸಿ ಹಾನಿಯ ನಿಖರ ವರದಿ ಸಿದ್ಧಪಡಿಸಲಾಗುವುದು. ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಿ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಲು ಶ್ರಮಿಸುವುದಾಗಿ ರೈತರಿಗೆ ಭರವಸೆ ನೀಡಿದರು.