ಯಶಸ್ಸು ತಂದ 15 ಅಂಶಗಳ ಕ್ರಿಯಾ ಯೋಜನೆ

KannadaprabhaNewsNetwork |  
Published : May 10, 2024, 01:36 AM IST
ಪೋಟೋ: 9ಎಸ್‌ಎಂಜಿಕೆಪಿ01: ಸಿ.ಆರ್‌.ಪರಮೇಶ್ವರಪ್ಪ  | Kannada Prabha

ಸಾರಾಂಶ

ಫಲಿತಾಂಶದಲ್ಲಿ ತಳಮಟ್ಟ ಕಂಡಿರುವ ಜಿಲ್ಲೆಯನ್ನು 10ರೊಳಗಿನ ಸ್ಥಾನಕ್ಕೆ ತರಲು ನಿರಂತರ ಕಲಿಕೆ, ಗುಣಮಟ್ಟದ ಶಿಕ್ಷಣ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮುಂದಾಗಿತ್ತು. ಜಿಲ್ಲೆಯಲ್ಲಿ ಕೆಲ ವರ್ಷದಿಂದ ಫಲಿತಾಂಶ ಕುಸಿತಕ್ಕೆ ಕಾರಣಗಳನ್ನು ಆಲೋಚಿಸಿದ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಶಿಕ್ಷಣ ಕ್ಷೇತ್ರದಲ್ಲಿ ಫಲಿತಾಂಶ ಸುಧಾರಣೆಗೆ 15 ಅಂಶಗಳ ಸೂತ್ರಗಳ ಯೋಜನೆ ಸಿದ್ದಪಡಿಸಿ, ಅವುಗಳನ್ನು ಯಥಾವತ್ತು ಜಾರಿಗೆ ತಂದಿತ್ತು.

ಗಣೇಶ್‌ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ಈ ಬಾರಿ ಅಚ್ಚರಿಯ ಫಲಿತಾಂಶ ಸಾಧಿಸಿದ್ದು, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಅವಿರತ ಪರಿಶ್ರಮದಿಂದ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಭಾರೀ ಪ್ರಮಾಣದ ಸುಧಾರಣೆ ಕಂಡಿರುವ ಶಿವಮೊಗ್ಗ ಜಿಲ್ಲೆ ಜಿಲ್ಲಾವಾರು ಪಟ್ಟಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದೆ.

ಕಳೆದ ಬಾರಿ ರಾಜ್ಯದಲ್ಲಿ 28ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 25 ಸ್ಥಾನಗಳ ಜಿಗಿತ ಕಂಡಿದ್ದು, 3ನೇ ಸ್ಥಾನಕ್ಕೇರಿದೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 23,028 ವಿದ್ಯಾರ್ಥಿಗಳ ಪೈಕಿ, 20,420 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.88.67ರಷ್ಟು ಫಲಿತಾಂಶ ಪಡೆದಿದೆ. 2022ರಲ್ಲಿ ಶೇ.84.60ರಷ್ಟು ಫಲಿತಾಂಶದ ಮೂಲಕ 26ನೇ ಸ್ಥಾನದಲ್ಲಿ ಶಿವಮೊಗ್ಗ ಜಿಲ್ಲೆ 2023ರಲ್ಲಿ ಶೇ.84.04ರಷ್ಟು ಫಲಿತಾಂಶದ ಮೂಲಕ 28ನೇ ಸ್ಥಾನಕ್ಕೆ ಕುಸಿದಿತ್ತು.

ಫಲ ನೀಡಿದ ಶಿಕ್ಷಣ ಇಲಾಖೆಯ ಕ್ರಿಯಾ ಯೋಜನೆ:

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಳಪೆ ಸಾಧನೆ ನಿವಾರಣೆಗೆ ಶಿಕ್ಷಣ ಇಲಾಖೆ ಆರಂಭದಲ್ಲೆ ಎಚ್ಚೆತ್ತಿಕೊಂಡಿತ್ತು. ಫಲಿತಾಂಶದಲ್ಲಿ ತಳಮಟ್ಟ ಕಂಡಿರುವ ಜಿಲ್ಲೆಯನ್ನು 10ರೊಳಗಿನ ಸ್ಥಾನಕ್ಕೆ ತರಲು ನಿರಂತರ ಕಲಿಕೆ, ಗುಣಮಟ್ಟದ ಶಿಕ್ಷಣ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮುಂದಾಗಿತ್ತು. ಜಿಲ್ಲೆಯಲ್ಲಿ ಕೆಲ ವರ್ಷದಿಂದ ಫಲಿತಾಂಶ ಕುಸಿತಕ್ಕೆ ಕಾರಣಗಳನ್ನು ಆಲೋಚಿಸಿದ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಶಿಕ್ಷಣ ಕ್ಷೇತ್ರದಲ್ಲಿ ಫಲಿತಾಂಶ ಸುಧಾರಣೆಗೆ 15 ಅಂಶಗಳ ಸೂತ್ರಗಳ ಯೋಜನೆ ಸಿದ್ದಪಡಿಸಿ, ಅವುಗಳನ್ನು ಯಥಾವತ್ತು ಜಾರಿಗೆ ತಂದಿತ್ತು.

ತಾಯಂದಿರ ಸಭೆ:

ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ತಾಯಂದಿರ ಸಭೆ ನಡೆಸಿ ಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕೆಯ ಬಗ್ಗೆ ಗಮನವಹಿಸಲು ಮಾರ್ಗದರ್ಶನ ಮಾಡಲಾಗುತ್ತಿದೆ. ಅದೇ ರೀತಿ ತಿಂಗಳಿಗೊಮ್ಮೆ ಪೋಷಕರ ಸಭೆ ಕರೆದು ಪೋಷಕರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಮಾರ್ಗದರ್ಶನ ನೀಡಲಾಗಿತ್ತು.

ವಿಷಯವಾರು ಶಿಕ್ಷಕರ ವೇದಿಕೆ: ಜಿಲ್ಲಾ ಮಟ್ಟದಲ್ಲಿ ಪ್ರತಿ ವಿಷಯವಾರು ಸಂಪನ್ಮೂಲ ಶಿಕ್ಷಕರನ್ನು ಆಯ್ಕೆಮಾಡಿ ಎಸ್ಸೆಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿದ್ದು, ಪ್ರತಿ ತಾಲೂಕಿನಿಂದ ವಿಷಯವಾರು ಸಂಪನ್ಮೂಲ ಶಿಕ್ಷಕರನ್ನು ಗುರುತಿಸಲಾಗಿದ್ದು, ಅವರಿಂದ ಪ್ರತಿ ವಿಷಯದಲ್ಲಿ 5 ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ, ಈ ಪ್ರಶ್ನೆ ಪತ್ರಿಕೆಗಳನ್ನು ಪ್ರತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಬಿಡಿಸಲಾಗುತ್ತಿದೆ. ಇದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಉತ್ತೀರ್ಣ ಮಟ್ಟಕ್ಕೆ ತರಲು ಈ ಪ್ರಯತ್ನ ಮಾಡಲಾಗಿತ್ತು.

ಉರ್ದು ಶಾಲೆಯಲ್ಲಿ ಫಲಿತಾಂಶ ಸುಧಾರಣೆಗೆ ಕ್ರಮ:

ಕಳೆದ ಸಾಲಿನಲ್ಲಿ ಉರ್ದು ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್‌ ಭಾಷೆಗಳಲ್ಲಿ ಫಲಿತಾಂಶ ಕುಂಠಿತವಾಗಿದ್ದು, ಈ ಸಂಬಂಧ ಈ ಬಾರಿ ಈ ಎರಡು ವಿಷಯದಲ್ಲಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಭಾಷಾ ಶಿಕ್ಷಕರಿಗೆ ಸಂಪನ್ಮೂಲ ಶಿಕ್ಷಕರಿಂದ ಕಾರ್ಯಾಗಾರಗಳ ಏರ್ಪಡಿಸಿ ಫಲಿತಾಂಶ ಸುಧಾರಿಸಲು ಕ್ರಮ ಕೈಗೊಳ್ಳಲಾಗಿತ್ತು. ಗ್ರಾಮಾಂತರ ಹಾಗೂ ನಗರ ಶಾಲೆಗಳಲ್ಲಿ ಇಂಗ್ಲಿಷ್‌ ಹಾಗೂ ಕೋರ್‌ ವಿಷಯಗಳಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ವಿಶೇಷ ತರಗತಿಗಳ ನಡೆಸಿ ಪರೀಕ್ಷೆಗೆ ಸಿದ್ಧಗೊಳಿಸುವಲ್ಲಿ ತರಬೇತಿ ನಡೆಸಲಾಗುತ್ತಿದೆ.

ದತ್ತು ಅಧಿಕಾರಿಗಳ ನೇಮಕ:

ಕಳೆದ ಬಾರಿ ಪರೀಕ್ಷೆಯಲ್ಲಿ ಸಿ ಗ್ರೇಡ್‌ ಬಂದಿರುವ ಶಾಲೆಗಳಿಗೆ ಶೈಕ್ಷಣಿಕ ಮಾರ್ಗದರ್ಶನ, ಮೇಲುಸ್ತುವಾರಿ ಮಾಡಲು ಉಪನಿರ್ದೇಶಕರ ಕಚೇರಿ ಮತ್ತು ಡಯಟ್‌ನ ಎ ಮತ್ತು ಬಿ ದರ್ಜೆಯ ಎಲ್ಲ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗಿತ್ತು.

ನಿರಂತರ ಘಟಕ ಪರೀಕ್ಷೆಗಳು:

ಪ್ರತಿ ವಿಷಯದಲ್ಲಿ ಪ್ರತಿ ಘಟಕಗಳ ಕಲಿಕೆ ನಂತರ ಪರೀಕ್ಷೆಗಳನ್ನು ನಡೆಸಿ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳ ಫಲಿತಾಂಶ ವಿಶ್ಲೇಷಿಸಿ ಕಲಿಕಾ ಕೊರತೆ ಎದುರಿಸುವ ಅಂಶಗಳಿಗೆ ಪುನರ್‌ ಬೋಧನೆ ಮಾಡಿ ಕಲಿಕಾಂಶಗಳನ್ನು ಕಲಿಸುವ ಬಗ್ಗೆ ಕ್ರಮವಹಿಸುವಂತೆ ಯೋಜಿಸಲಾಗಿತ್ತು.

ಸಂಪನ್ಮೂಲ ಶಿಕ್ಷಕರ ನಿಯೋಜನೆ:

ಕಲಿಕೆಯಲ್ಲಿ ಅತೀ ಕಡಿಮೆ ಸಾಧನೆ ಮಾಡಿದ ಶಾಲೆಗಳಲ್ಲಿ ಕಡಿಮೆ ಫಲಿತಾಂಶ ಪಡೆದ ವಿಷಯಗಳ ಪಟ್ಟಿ ಮಾಡಿ ವಿಷಯ ಸಂಪನ್ಮೂಲ ಶಿಕ್ಷಕರನ್ನು ಪ್ರತಿ ಶನಿವಾರ ಅಂತಹ ಶಾಲೆಗಳಿಗೆ ನಿಯೋಜಿಸಿ ಫಲಿತಾಂಶ ಉತ್ತಮಪಡಿಸಲು ಕ್ರಮವಹಿಸಲಾಗಿತ್ತು.

ಜೊತೆಗೆ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದ ಸುಧಾರಣೆಗೆ ಪ್ರತಿ ವಿದ್ಯಾರ್ಥಿಯ ಹಾಗೂ ಶಾಲೆ ಫಲಿತಾಂಶದ ಗುರಿ ನಿಗದಿಪಡಿಸಿ, ಅದನ್ನು ಸಾಧಿಸಲು ಮುಖ್ಯಶಿಕ್ಷಕರ ಸಭೆಯಲ್ಲಿ ಮಾರ್ಗದರ್ಶನ ನೀಡಲಾಗಿತ್ತು. ಈ ಎಲ್ಲ ಕಾರ್ಯಕ್ರಮಗಳ ಫಲವಾಗಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೂರನೇ ಸ್ಥಾನದಲ್ಲಿರುವುದು ಸಂತಸವನ್ನು ಹೆಚ್ಚಿಸಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಉಪನಿದೇಶಕ ಸಿ.ಆರ್‌.ಪರಮೇಶ್ವರಪ್ಪ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದರು.

ಎಸ್ಸೆಸ್ಸೆಲ್ಸಿ ಫಲತಾಂಶ ಹೆಚ್ಚಳಕ್ಕೆ ಜಿಲ್ಲಾ, ತಾಲೂಕುವಾರು ಕ್ರಿಯಾ ಯೋಜನೆ ರಚಿಸಲಾಗಿತ್ತು. ಜೊತೆಗೆ ಕಡಿಮೆ ಫಲಿತಾಂಶ ಪಡೆದಿದ್ದ ಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಪ್ರತಿ ಮೂರನೇ ಶನಿವಾರ ಸಭೆ ನಡೆಸಲಾಗುತ್ತಿತ್ತು. ಈ ಶಾಲೆಗಳಲ್ಲಿ ನಿರಂತರವಾಗಿ ಘಟಕ ಪರೀಕ್ಷೆಗಳ ಮಾಡಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರ ಮೇಲೆ ಹೆಚ್ಚಿನ ನಿಗಾ ಇಡಲಾಗಿತ್ತು. ಈ ಮಕ್ಕಳಲ್ಲಿ ಕಲಿಕೆ ಆಸಕ್ತಿಯನ್ನು ಹೆಚ್ಚಿಸುವ ವಿಶೇಷ ಯೋಜನೆಗಳನ್ನು ರೂಪಿಸಲಾಗಿತ್ತು. ಈ ಎಲ್ಲದರ ಪರಿಣಾಮ ಇಂದು ಫಲಿತಾಂಶದಲ್ಲಿ ಯಶಸ್ಸು ಕಂಡಿದ್ದೇವೆ.

- ಸಿ.ಆರ್‌.ಪರಮೇಶ್ವರಪ್ಪ, ಡಿಡಿಪಿಐ, ಶಿವಮೊಗ್ಗ.ಕಡಿಮೆ ಫಲಿತಾಂಶ ಬಂದಿದ್ದ ಶಾಲೆಗಳ ಮೇಲೆ ಹೆಚ್ಚಿನ ನಿಗಾ

ಜಿಲ್ಲೆಯಲ್ಲಿ ಕಳೆದ ಬಾರಿ ಕಡಿಮೆ ಫಲಿತಾಂಶ ಬಂದಿದ್ದ 99 ಸರ್ಕಾರಿ ಶಾಲೆಗಳ ಮೇಲೆ ಈ ಬಾರಿ ಹೆಚ್ಚಿನ ನಿಗಾ ಇಡಲಾಗಿತ್ತು. ಈ ಶಾಲೆಗಳಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಈ ಅಧಿಕಾರಿಗಳು ವಾರಕ್ಕೊಮ್ಮೆ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕಾ ಸುಧಾರಣೆಯನ್ನು ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಜೊತೆಗೆ ತಾಲೂಕುವಾರು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಮಾರ್ಗದರ್ಶನ ನೀಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ