ಗೌರಿಬಿದನೂರು: ಪೌಷ್ಟಿಕಾಂಶದ ಕೊರತೆ ಹೊರತುಪಡಿಸಿ ಪೂರಕ ಆಹಾರಗಳಿಗಿಂತ ಸಹಜ ಆಹಾರಗಳಿಂದ ಸಿಗುವ ಪೋಷಕಾಂಶಗಳು ಯಾವಾಗಲೂ ಉತ್ತಮವಾಗಿರುತ್ತವೆ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.
ಆಹಾರದ ಅವಶ್ಯಕತೆಗಳನ್ನು ಪೂರೈಸಲು ಮತ್ತು ಮಗುವಿನ ಆರೋಗ್ಯ ಪೋಷಣೆಯನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರವು ಅತ್ಯಗತ್ಯ. ಮಗುವಿನ ದೇಹವು ಸೂಕ್ಷ್ಮವಾಗಿರುತ್ತದೆ. ಅವರನ್ನು ಶಕ್ತಿಯುತ ಮತ್ತು ಆರೋಗ್ಯಕರವಾಗಿಸಲು ಅವರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವ ಅಗತ್ಯವಿದೆ ಎಂದರು.
ಸರ್ಕಾರಿ, ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಶೇಂಗಾ ಚೆಕ್ಕಿ, ಬಾಳೆಹಣ್ಣು ಹಣ್ಣು ವಿತರಿಸಲಾಗುತ್ತದೆ. ಈ ಮೊದಲು ಸರ್ಕಾರ 2 ದಿನ ಮಾತ್ರ ನೀಡುತ್ತಿದ್ದ ಮೊಟ್ಟೆಯನ್ನು ಆಜೀಮ್ ಪ್ರೇಮ್ ಜಿ ಯವರ ಸಹಕಾರದಿಂದ ಇಂದು ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ನೀಡಲಾಗುತ್ತದೆ, ಇದರಿಂದ ಶಾಲೆಯ ಬಡ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆ.ಕೆ ಹೊನ್ನಯ್ಯ ಮಾತನಾಡಿ, ಹಳ್ಳಿಗಳಲ್ಲಿನ ಕೂಲಿ ಕಾರ್ಮಿಕರ ಮಕ್ಕಳಿಗೆ ಈ ಕಾರ್ಯಕ್ರಮದಿಂದ ಬಹಳ ಅನುಕೂಲವಾಗಲಿದೆ. ಹಳ್ಳಿಗಳಲ್ಲಿ ಬಡವರ ಪರಿಸ್ಥಿತಿ ಚಿಂತಾಜನಕವಾಗಿದೆ. ಇಂತಹ ಕೆಲಸಗಳು ಬಡ ಮಕ್ಕಳಿಗೆ ಪ್ರಾಮಾಣಿಕವಾಗಿ ತಲುಪಬೇಕು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಶ್ ಪತ್ರಿ, ಬಿಇಒ ಶ್ರೀನಿವಾಸ ಮೂರ್ತಿ, ಪೌರಾಯುಕ್ತೆ ಡಿಎಂ ಗೀತಾ, ನಗರಸಭೆ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಶ್ರೀನಿವಾಸ್ ಗೌಡ ಮತ್ತು ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.