ಹಿರಿಯರ ಮಾರ್ಗದರ್ಶನದಿಂದ ಸುಂದರ ಬದುಕು ಸಾಧ್ಯ-ಅಂಬಿಗೇರ

KannadaprabhaNewsNetwork | Published : Jul 21, 2024 1:18 AM

ಸಾರಾಂಶ

ನಮ್ಮ ವಿದ್ಯಾರ್ಥಿ ಜೀವನದಲ್ಲಿ ಹಿರಿಯರು ತಮ್ಮ ಮಾರ್ಗದರ್ಶನದ ಮೂಲಕ ನಮ್ಮ ಸುಂದರ ಬದುಕಿಗೆ ರೆಕ್ಕೆಗಳಾಗಲು ಭಯಸುತ್ತಾರೆ. ರೆಕ್ಕೆಗಳನ್ನು ಮನಸ್ಸಿನಲ್ಲಿ ಅಂಟಿಸಿಕೊಂಡು ಬಳಸಿದವನು ಮಾತ್ರ ಸುಂದರ ಬದಕನ್ನು ತನ್ನದಾಗಿಸಿಕೊಳ್ಳುತ್ತಾನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.

ಶಿಗ್ಗಾಂವಿ: ನಮ್ಮ ವಿದ್ಯಾರ್ಥಿ ಜೀವನದಲ್ಲಿ ಹಿರಿಯರು ತಮ್ಮ ಮಾರ್ಗದರ್ಶನದ ಮೂಲಕ ನಮ್ಮ ಸುಂದರ ಬದುಕಿಗೆ ರೆಕ್ಕೆಗಳಾಗಲು ಭಯಸುತ್ತಾರೆ. ರೆಕ್ಕೆಗಳನ್ನು ಮನಸ್ಸಿನಲ್ಲಿ ಅಂಟಿಸಿಕೊಂಡು ಬಳಸಿದವನು ಮಾತ್ರ ಸುಂದರ ಬದುಕನ್ನು ತನ್ನದಾಗಿಸಿಕೊಳ್ಳುತ್ತಾನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳಿಗಾಗಿ ರೆಕ್ಕೆಗಳಾಗೋಣ ಎಂಬ ಕಾರ್ಯಕ್ರಮದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನೊಬ್ಬರು ನಮಗಾಗಿ ಏನು ಮಾಡಬೇಕಿತ್ತು ಅನಿಸುತ್ತೋ ಅದನ್ನು ನಾವು ಬೇರೆಯವರಿಗೆ ಮಾಡಬೇಕು, ನಮಗೆ ಬೇರೆಯವರು ಏನು ಮಾಡಬಾರದಿತ್ತು ಅನಿಸೊತ್ತೋ ಅದನ್ನು ನಾವು ಬೇರೆಯವರಿಗೆ ಮಾಡಬಾರದು ಎಂಬುದನ್ನು ಅರಿತವನು ಉತ್ತಮ ಜೀವನ ಮಾಡುತ್ತಾನೆ. ಶಿಕ್ಷಕರಾದವರಿಗೆ ಅವರ ಎದುರಿಗೆ ಕುಳಿತ ಮಕ್ಕಳು ಕೇವಲ ವಿದ್ಯಾರ್ಥಿಗಳಲ್ಲಾ, ಅವರು ಅನ್ನದಾತರೆಂದು ಭಾವಿಸಿಕೊಂಡು ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವರ ಋಣ ತೀರಿಸಬೇಕು. ನಮ್ಮೊಳಗಿನ ನಮ್ಮನ್ನು ನಾವು ಗುರುತಿಸಿಕೊಂಡಾಗ ಮಾತ್ರ ವಿಶಿಷ್ಟವಾದ ವ್ಯಕ್ತಿಯಾಗಿ ಹೊರಹೊಮ್ಮುತ್ತಾನೆ. ಬದುಕಿನಲ್ಲಿ ಗೌರವ ಮುಖ್ಯನಾ? ಜೀವನ ಮುಖ್ಯಾನ? ಎಂಬ ಪ್ರಶ್ನೆ ಎದುರಾದಾಗ ಕೆಲವರಿಗೆ ಜೀವನ ಮುಖ್ಯವಾಗುತ್ತದೆ, ಇನ್ನು ಕೆಲವರಿಗೆ ಗೌರವ ಮುಖ್ಯವಾಗಿರುತ್ತದೆ, ಗೌರವ ಮುಖ್ಯ ಎಂದು ಭಾವಿಸಿದವನು ಸಾಧಿಸುತ್ತಾನೆ, ಜೀವನ ಮುಖ್ಯ ಎಂದು ಭಾವಿಸಿದವನು ಕೇವಲ ಬದುಕುತ್ತಾನೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿ, ಉತ್ತಮ ಸಮಾಜವನ್ನು ಕಟ್ಟುವ ದೃಷ್ಟಿಕೋನದಿಂದ ನಿಸ್ವಾರ್ಥ ಸೇವೆ ಸಲ್ಲಿಸಲು ಮಕ್ಕಳನ್ನು ಸಿದ್ಧಗೊಳಿಸುವ ಕಾರ್ಯಕ್ರಮ ಮಕ್ಕಳಿಗಾಗಿ ರೆಕ್ಕೆಗಳಾಗೋಣ ಎಂಬ ಸುಂದರ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡಿದೆ. ಈ ಮೂಲಕ ಸಂತರ ಒಂದೊಂದು ವಚನಗಳು ಸುಮಧುರವಾದ ಬದುಕನ್ನು ಕಟ್ಟಿಕೊಡುವಲ್ಲಿ ಅಡಿಗಲ್ಲಾಗಿದ್ದು ಅವುಗಳ ಅಧ್ಯಾಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸ್ವಚ್ಛ ಹೃದಯದ ಮಾತುಗಳು ಮಾತ್ರ ಸಮಾಜದಲ್ಲಿ ಬಾಂಧವ್ಯವನ್ನು ಸೃಷ್ಟಿಸುವ ಶಕ್ತಿ ಹೊಂದಿರುತ್ತದೆ. ರಾಜ್ಯಕ್ಕೆ ಭಾವೈಕ್ಯತೆಯ ತೇರನ್ನು ಕಾಣಿಕೆಕೊಟ್ಟ ಎಂಕೆ ತಹಿಶೀಲ್ದಾರ ಅವರಿಗೆ ಸನ್ಮಾನ ಮಾಡುತ್ತಿರುವುದು ವಿಶೇಷವಾಗಿದೆ. ಹುಟ್ಟುವಾಗ ಅಳುತ್ತಾ ಹುಟ್ಟಿದ ನಾವು ಸತ್ತಾಗ ಅಳಕಿಸಲಾಗದ ಸಾಧನೆಯನ್ನು ಮಾಡಬೇಕು ಎಂದರು.

ಪಟ್ಟಣದ ವಿರಕ್ತಮಠದ ಸಂಗನಬಸವ ಶ್ರೀಗಳ ಸಾನಿಧ್ಯದಲ್ಲಿನಡೆದ ಕಾರ್ಯಕ್ರಮದಲ್ಲಿ, ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವಾನಂದ ಮ್ಯಾಗೇರಿ, ಎಂಕೆ ತಹಶೀಲ್ದಾರ, ಕಸಾಪ ತಾಲೂಕು ಅಧ್ಯಕ್ಷ ನಾಗಪ್ಪಾ ಬೆಂತೂರ, ರಮೇಶ ಹರಿಜನ, ಎಂಆರ್ ಚೂರಿ, ನಾಗರಾಜ ದ್ಯಾಮನಕೊಪ್ಪಾ, ಬಸವರಾಜ ಹೆಸರೂರ, ಉಮೇಶ ಎ.ಆರ್., ಶಂಭು ಕೇರಿ ಇತರರಿದ್ದರು.

Share this article