ಇಂದು ಸಂತ ಸೇವಾಲಾಲ್‌ರ 286ನೇ ಜಯಂತಿ । ಭಾವಚಿತ್ರ ಮೆರವಣಿಗೆ
ದಾರ್ಶನಿಕ ಮಹಾಪುರುಷ ಸೇವಾಲಾಲ್ ಅವರ ವೈಚಾರಿಕತೆ, ದೂರದೃಷ್ಟಿ ಮತ್ತು ಅವರ ವಿಚಾರ ಸಂದೇಶಗಳನ್ನು ಮಾನವ ಕುಲಕ್ಕೆ ತಲುಪಿಸಿ ಅವರ ಮಾರ್ಗದರ್ಶನದಲ್ಲಿ ನಡೆದಾಗ ಉತ್ತಮವಾದ ಸಮಾಜ ನಿರ್ಮಾಣವಾಗಲಿದೆ ಎಂದು ತಾಲೂಕು ಬಂಜಾರ ಸಂಘದ ಅಧ್ಯಕ್ಷ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ವಿರೇಶ್ ನಾಯ್ಕ್ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಂತ ಸೇವಾಲಾಲ್ ಅವರ 286ನೇ ಜಯಂತ್ಯುತ್ಸವ ಹಾಗೂ ಬಂಜಾರ ಸಮಾವೇಶವನ್ನು ಚನ್ನಗಿರಿ ತಾಲೂಕು ಬಂಜಾರ ಸಂಘದ ವತಿಯಿಂದ ಏಪ್ರೀಲ್ 7ರ ಸೋಮವಾರ ದಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದುತಾಲೂಕಿನಲ್ಲಿ ಬಂಜಾರ ಸಮಾಜ ಸಾವಿರಾರು ಸಂಖ್ಯೆಯಲ್ಲಿದ್ದು ತಾಲೂಕಿನ ಸಮಾಜದ ಬಂಧುಗಳನ್ನು ಒಂದೆಡೆ ಸೇರಿಸಿ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಮಾಡುವ ಜತೆಗೆ ಬಂಜಾರ ಜಾಗೃತಿ ಸಮಾವೇಶವನ್ನು ನಡೆಸಲಾಗುವುದು ಎಂದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಮಹಾಶ್ವಾಮಿಗಳು ವಹಿಸುವರು. ಮೆರವಣಿಗೆಯ ಉದ್ಘಾಟನೆಯನ್ನು ಕರ್ನಾಟಕ ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷ ಎನ್.ಜಯದೇವನಾಯ್ಕ್ ನೆರವೇರಿಸಲಿದ್ದು, ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನೆರವೇರಿಸುವರು. ಸೇವಾಲಾಲ್ ಅವರ ಭಾವಚಿತ್ರದ ಅನಾವರಣವನ್ನು ಕ್ಷೇತ್ರದ ಶಾಸಕ ಬಸವರಾಜ ವಿ.ಶಿವಗಂಗಾ ಮಾಡಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಬಿ.ಎನ್.ವಿರೇಶ್ ನಾಯ್ಕ್ ವಹಿಸುವರು.
ಈ ಸಮಾರಂಭಕ್ಕೆ ಜಿ.ಟಿವಿ ಸರಿಗಮಪ ಪ್ರಶಸ್ತಿ ವಿಜೇತ ಗಾಯಕ ರಮೇಶ್ ಎಂ.ಲಮಾಣಿ ಭಾಗವಹಿಸುವರು ಎಂದರು.