ಹೊಸಪೇಟೆ: ಯಾವುದೇ ಸಮಾಜ ಪ್ರಗತಿಯಾಗಬೇಕಾದರೆ ಆ ಸಮಾಜದ ಮಕ್ಕಳು ವಿದ್ಯಾವಂತರಾಗಬೇಕು. ಈ ನಿಟ್ಟಿನಲ್ಲಿ ಯೋಚಿಸಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡುವುದು ಪಾಲಕರಾದ ನಮ್ಮ ಜವಾಬ್ದಾರಿಯಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೊಸಪೇಟೆ ನಗರಸಭೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಮಾಜದಲ್ಲಿ ಕಡಿಮೆ ಜನಸಂಖ್ಯೆಯ ಸಮುದಾಯಗಳು ಸಾಕಷ್ಟಿವೆ. ಇವುಗಳ ಅಭಿವೃದ್ಧಿಗಾಗಿ ಸರ್ಕಾರವು ಹಲವಾರು ನಿಗಮಗಳನ್ನು ರಚಿಸಿ ಅನುದಾನ ಮೀಸಲಿರಿಸಿ ಅಂತಹ ಸಮುದಾಯಗಳ ಏಳ್ಗೆಗೆ ಶ್ರಮಿಸಲಾಗುತ್ತಿದೆ. ಆಯಾ ನಿಗಮಗಳಲ್ಲಿ ಇರುವ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ವಿವಿಧ ಯೋಜನೆಗಳ ಸದುಪಯೋಗ ಪಡೆದು ಸಣ್ಣ ಸಣ್ಣ ಸಮುದಾಯದ ಜನರು ಮುಂದೆ ಬರಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಸರ್ಕಾರವು ಹಲವಾರು ಜಯಂತಿಗಳನ್ನು ಆಚರಣೆ ಮಾಡುತ್ತಿದೆ. ಈ ಮೂಲಕ ಮಹಾತ್ಮರ ಆಶಯಗಳು, ಸಿದ್ಧಾಂತ ಹಾಗೂ ಅವರ ಸಮಾಜಮುಖಿ ಕಾರ್ಯಗಳನ್ನು ಜನತೆಗೆ ತಿಳಿಸುವ ಕಾರ್ಯವಾಗುತ್ತಿದೆ. ಬ್ರಹ್ಮಶ್ರೀ ನಾರಾಯಣ ಗುರು ಅವರ ಕಾರ್ಯಗಳು ಸದಾಕಾಲ ಸ್ಮರಣೀಯವಾಗಿವೆ ಎಂದರು.ಪ್ರತಿಭಾ ಪುಸ್ಕಾರ ಪ್ರದಾನ:
ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಈಡಿಗ ಸಮಾಜದ ಅಧ್ಯಕ್ಷ ಚಂದ್ರಣ್ಣ ಮತ್ತಿತರರಿದ್ದರು.