ಕೈಗೆ ಬಂದ ತುತ್ತು ಬಾಯಿಗೆ ಬೀಳದ ಸ್ಥಿತಿ

KannadaprabhaNewsNetwork |  
Published : Sep 21, 2024, 01:45 AM IST
ಉತ್ಕೃಷ್ಟವಾಗಿ ಬಂದಿದ್ದ ರಾಗಿ ಬೆಳೆ ಮಳೆ ಇಲ್ಲದೆ ಒಣಗುತ್ತಿರುವುದು. | Kannada Prabha

ಸಾರಾಂಶ

ತಿಪಟೂರು ತಾಲೂಕಿನಲ್ಲಿ ಸಕಾಲಕ್ಕೆ ಬಿದ್ದ ಮುಂಗಾರು ಮಳೆಗೆ ರೈತರು ರಾಗಿ ಬಿತ್ತನೆ ಮಾಡಿದ್ದು ಪೈರು ಹುಲುಸಾಗಿ ಬೆಳೆದು ಬಂದಿದ್ದು ಈ ವರ್ಷವಾದರೂ ಬಂಪರ್ ಬೆಳೆ ಪಡೆಯಬೇಕೆಂಬ ನಿರೀಕ್ಷೆಯಲ್ಲಿದ್ದು ಆದರೆ ಮಳೆಯಿಲ್ಲದೆ ರಾಗಿ ಪೈರು ಒಣಗುವ ಹಂತದಲ್ಲಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂಬಂತಾಗಿದೆ.

ಬಿ.ರಂಗಸ್ವಾಮಿ,

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನಲ್ಲಿ ಸಕಾಲಕ್ಕೆ ಬಿದ್ದ ಮುಂಗಾರು ಮಳೆಗೆ ರೈತರು ರಾಗಿ ಬಿತ್ತನೆ ಮಾಡಿದ್ದು ಪೈರು ಹುಲುಸಾಗಿ ಬೆಳೆದು ಬಂದಿದ್ದು ಈ ವರ್ಷವಾದರೂ ಬಂಪರ್ ಬೆಳೆ ಪಡೆಯಬೇಕೆಂಬ ನಿರೀಕ್ಷೆಯಲ್ಲಿದ್ದು ಆದರೆ ಮಳೆಯಿಲ್ಲದೆ ರಾಗಿ ಪೈರು ಒಣಗುವ ಹಂತದಲ್ಲಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂಬಂತಾಗಿದೆ.

ಮುಂಗಾರು ಮಳೆ ಸಕಾಲದಲ್ಲಿ ಆರಂಭವಾಗಿ ರೈತರು ಭೂಮಿ ಹದಮಾಡಿಕೊಂಡು ರಾಗಿ ಬಿತ್ತನೆ ಮಾಡಿದ್ದರು. ಬಿತ್ತನೆ ನಂತರ ಎರಡು ಮೂರು ಹಂತದ ಬೆಳವಣಿಗೆಯ ಸಮಯದಲ್ಲಿಯೂ ಉತ್ತಮ ಮಳೆ ಬಂದ ಪರಿಣಾಮ ಪೈರು ಹುಲುಸಾಗಿ ಬೆಳೆಯುತ್ತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದಲೂ ಮಳೆರಾಯ ಸಂಪೂರ್ಣ ಕೈಕೊಟ್ಟಿರುವ ಕಾರಣ ಪೈರು ಬಾಡಿ ಒಣಗುವ ಹಂತದಲ್ಲಿದೆ. ಕೆರೆಕಟ್ಟೆಗಳಿಗೆ ನೀರು ಬರುವಂತ ಈ ಸಮಯದಲ್ಲಿ ಮಳೆ ಮುನಿಸಿಕೊಂಡಿದ್ದು ತಾಲೂಕಿನಾದ್ಯಂತ ಬರದ ವಾತಾವರಣ ಸೃಷ್ಟಿಯಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ವಿಪರೀತ ಗಾಳಿ, ಬಿಸಿಲು ಪ್ರಾರಂಭವಾಗಿರುವುದರಿಂದ ಭೂಮಿಯಲ್ಲಿ ಹಾಗೂ ವಾತಾವರಣದಲ್ಲಿ ಸ್ವಲ್ಪವೂ ತೇವಾಂಶವಿಲ್ಲದಂತಾಗಿದೆ. ಹಾಗಾಗಿ ರಾಗಿ ಸೇರಿದಂತೆ ಹಚ್ಚ ಹಸಿರಾಗಿದ್ದ ತೊಗರಿ, ಹುರುಳಿ, ಹುಚ್ಚಳ್ಳು, ಸಿರಿಧಾನ್ಯಗಳ ಬೆಳೆಗಳು ಸೇರಿದಂತೆ ಎಲ್ಲ ಪೈರುಗಳು ಸಂಪೂರ್ಣ ಒಣಗಿ ಹೋಗುತ್ತಿರುವುದರಿಂದ ರೈತರಿಗೆ ದಿಕ್ಕೇ ತೋಚದಂತಾಗಿದೆ.

ಜಾನುವಾರುಗಳ ಮೇವಿಗೆ ಸಂಕಷ್ಟ : ಕಲ್ಪತರು ನಾಡಿನ ರೈತರು ಪಶುಸಂಗೋಪನೆಯನ್ನೇ ಹೆಚ್ಚು ಆಶ್ರಯಿಸಿರುವುದರಿಂದ ಜಾನುವಾರುಗಳಿಗೆ ರಾಗಿ ಹುಲ್ಲು ಪ್ರಮುಖ ಆಹಾರವಾಗಿದ್ದು ರಾಗಿ ಬೆಳೆ ಕೈಕೊಟ್ಟರೆ ಜೀವನದ ಗತಿ ಹೇಗೆ ಎಂಬ ಚಿಂತೆ ರೈತರನ್ನ ಆವರಿಸಿದೆ. ಸಕಾಲಕ್ಕೆ ಬಾರದ ಮಳೆ, ಬಿಟ್ಟೂಬಿಡದೆ ಕಾಡುತ್ತಿರುವ ರೋಗಬಾಧೆಗಳು ಸೇರಿದಂತೆ ದುಬಾರಿ ಕೃಷಿ ವೆಚ್ಚಗಳನ್ನು ಭರಿಸಲಾಗದ ಸ್ಥಿತಿಯಲ್ಲಿ ರೈತರಿದ್ದಾರೆ. ಸಾವಿರಾರು ರುಪಾಯಿ ಸಾಲ ಮಾಡಿ ಉತ್ತು, ಬಿತ್ತನೆ ಮಾಡಿ ಈ ಬಾರಿ ಬಂಪರ್ ಬೆಳೆ ಬರುವುದೆಂಬ ನಿರೀಕ್ಷೆಯಲ್ಲಿದ್ದ ಕಲ್ಪತರು ನಾಡಿನ ರೈತರಿಗೆ ರಾಗಿ ಬೆಳೆ ಈ ವರ್ಷವೂ ಕೈಕೊಡುತ್ತಿರುವುದು ನೋಡುತ್ತಿದ್ದರೆ ಭವಿಷ್ಯದಲ್ಲಿ ಕೃಷಿ ಯಾವತ್ತೂ ಲಾಭದಾಯಕವಲ್ಲ ಅನ್ನುವುದನ್ನು ಮತ್ತೆ ಮತ್ತೆ ನಿಜ ಮಾಡುತ್ತಿದೆ. ಇದರಿಂದಾಗಿ ಜಾನುವಾನುರುಗಳಿಗೆ ವರ್ಷಪೂರ್ತಿ ಮೇವಿನ ಸಮಸ್ಯೆ ಎದುರಾಗುವ ಆತಂಕವಿದೆ.

ಕೋಟ್ 1:

ಈ ವರ್ಷ ಸಕಾಲಕ್ಕೆ ಬಂದ ಮಳೆಗೆ ರೈತರು ಖುಷಿಯಿಂದಲೇ ರಾಗಿ ಬಿತ್ತನೆ ಮಾಡಿದ್ದರು. ಮಳೆಗೆ ರಾಗಿ ಪೈರು ಉತ್ಕೃಷ್ಟವಾಗಿಯೇ ಇತ್ತು. ಇನ್ನೇನು ತೆನೆ ಹೊಡೆಯುವ ಸಮಯದಲ್ಲಿ ಮಳೆರಾಯನ ಮುನಿಸಿನಿಂದ ರೈತರಲ್ಲಿ ಆತಂಕವನ್ನುಂಟು ಮಾಡಿದೆ. ರಾಗಿ ಬೆಳೆ ಒಣಗುತ್ತಿರುವುದರಿಂದ ಜನ ಜಾನುವಾರುಗಳಿಗೆ ಮೇವು ಮತ್ತು ರಾಗಿ ಎರಡೂ ಕೈಕೊಡುತ್ತಿದ್ದು ಮಳೆ ತಕ್ಷಣಕ್ಕೆ ಬಾರದಿದ್ದರೆ, ರೈತರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ.

-- - ಮನು, ನಾಗರಘಟ್ಟ, ಕೃಷಿಕ

ಕೋಟ್ 2 : ರಾಗಿ ಬಿತ್ತನೆ ವೇಳೆ ಉತ್ತಮ ಮಳೆಯಾದ ಕಾರಣ ತಾಲೂಕಿನಲ್ಲಿ ೨೦,೯೦೦ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಬಿತ್ತನೆ ಮಾಡಲಾಗಿದೆ. ಜೊತೆಗೆ ಹುರುಳಿ, ತೊಗರಿ, ಉದ್ದು ಅವರೆ ಸೇರಿದಂತೆ ಸಿರಿಧಾನ್ಯಗಳು ಬಿತ್ತನೆಯಾಗಿದೆ. ಆದರೆ ಮಳೆಯಾಗದ ಕಾರಣ ಬೆಳೆಗಳು ಒಣಗುತ್ತಿದ್ದು ತೆನೆಯಾಗುವ ಈ ಸಂದರ್ಭದಲ್ಲಿ ಉತ್ತಮ ಮಳೆ ಅವಶ್ಯಕವಾಗಿದ್ದು ಸಕಾಲದಲ್ಲಿ ಮಳೆ ಬಂದರೆ ಅನುಕೂಲವಾಗಲಿದೆ.

- ಡಾ. ಪವನ್ ಸಹಾಯಕ ಕೃಷಿ ನಿರ್ದೇಶಕರು, ತಿಪಟೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳದಿ ಮಾರ್ಗ: 9 ಮೆಟ್ರೋ ನಿಲ್ದಾಣ ಬಳಿ ಹೊಸ ಬಿಎಂಟಿಸಿ ನಿಲ್ದಾಣ
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌