ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಯಂತ್ರ ಕಳವು

KannadaprabhaNewsNetwork | Published : Oct 16, 2024 12:53 AM

ಸಾರಾಂಶ

A blood test machine was stolen from a public hospital

-ದಸರಾ ಪ್ರಯುಕ್ತ ಯಂತ್ರಗಳಿಗೆ ಪೂಜೆ ಸಲ್ಲಿಸುವಾಗ ಯಂತ್ರ ನಾಪತ್ತೆ ಬೆಳಕಿಗೆ

----

ಕನ್ನಡಪ್ರಭ ವಾರ್ತೆ ದೇವದುರ್ಗ

ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ಸಂಬಂಧಿಸಿದ 3 ಯಂತ್ರಗಳು ಕಳವು ಮಾಡಲಾಗಿದ್ದು, 20ಲಕ್ಷ ಬೆಲೆಬಾಳುವ ಯಂತ್ರಗಳು ಎಂದು ಹೇಳಲಾಗುತ್ತಿದೆ.

ಈ ಆಸ್ಪತ್ರೆಯಲ್ಲಿ ಅನೇಕ ವರ್ಷಗಳಿಂದ ಸರ್ಕಾರಿ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಸಿಬ್ಬಂದಿ ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವದು, ಆಗಾಗ್ಗೆ ಈ ರೀತಿಯ ಯಂತ್ರಗಳನ್ನು,ಸಾಮಗ್ರಿಗಳನ್ನು ಕಳವು ಮಾಡಲಾಗುತ್ತದೆ ಎಂಬ ಶಂಕೆ ಇತ್ತು. ಇದೀಗ ಕಳುವಿನ ಜಾಲ ಇರುವದು ಈ ಘಟನೆ ಮೂಲಕ ಸಾಬೀತಾದಂತಾಗಿದೆ.

ದಸರಾ ಪ್ರಯುಕ್ತ ಯಂತ್ರಗಳಿಗೆ ಪೂಜೆ ಸಲ್ಲಿಸುವಾಗ ಯಂತ್ರಗಳು ನಾಪತ್ತೆಯಾಗಿರುವದು ಬೆಳಕಿಗೆ ಬಂದಿದೆ. ಸುಮಾರು 20ರಿಂದ 30 ಕೆಜೆ ಇರುವ ಒಂದೊಂದು ಯಂತ್ರಗಳನ್ನು ಹೊತ್ತುಕೊಂಡು ಹೋಗುವದು ಸರಳವಿಲ್ಲ. ಲಾರಿಯಲ್ಲಿಯೇ ತೆಗೆದುಕೊಂಡು ಹೋಗಬೇಕು. ದಿನ 24ಗಂಟೆ ಸೇವೆ ಸಲ್ಲಿಸುವ ಈ ಸಾರ್ವಜನಿಕ ಆಸ್ಪತ್ರೆ ಸದಾ ಜನಜಂಗುಳಿ ಸಾಮಾನ್ಯವಾಗಿರುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಯಂತ್ರಗಳ ಕಳವಾಗಿರುವದು ಅಚ್ಚರಿ ಮೂಡಿಸಿದೆ. ಈ ಪ್ರಕರಣದಲ್ಲಿ ಆಸ್ಪತ್ರೆಯ ಸಿಬ್ಬಂದಿಯ ಕೈಚಳಕವಿದೆ ಎಂದು ಅಂದಾಜಿಸಲಾಗಿದೆ.

ಸುದ್ದಿ ತಿಳಿಯುತ್ತಲೇ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಂದ್ರಬಾಬು, ಸಿಪಿಐ ಎನ್.ವೈ.ಗುಂಡುರಾವ್ ಭೇಟಿ ನೀಡಿ ಸ್ಥಳಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಜಿ.,ಮುಖ್ಯ ಆರೋಗ್ಯ ಅಧಿಕಾರಿ ಡಾ.ಶಿವಾನಂದ ಇದ್ದರು.

ಪ್ರಕರಣ ದಾಖಲು:ಕಳುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವದು. ರಕ್ತಪರೀಕ್ಷೆ ವಿಭಾಗದ ಸಿಬ್ಬಂದಿಯೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಳ್ಳಲು ಸಿಎಂಒ ಅವರಿಗೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರಬಹುದಾದ ಸಿಬ್ಬಂದಿ ಮೇಲೆ ಆಡಳಿತಾತ್ಮಕ ಕ್ರಮಕೈಗೊಳ್ಳಲಾಗುವದು ಎಂದು ಡಿಹೆಚ್ಒ ಡಾ.ಸುರೇಂದ್ರ ಬಾಬು ತಿಳಿಸಿದರು.

10ವರ್ಷದ ತನಿಖೆ: ಸರ್ಕಾರಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಯಂತ್ರಗಳು, ಕುರ್ಚಿ ಟೇಬಲ್‌ ಗಳು, ಮಂಚಗಳು, ಬ್ಯಾಟರಿ ಸಾಮಗ್ರಿಗಳು, ಎಸಿ ಯಂತ್ರಗಳು ಹೀಗೆ ಸಾಲು ಸಾಲು ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗಿ ಕೆಲ ಸಿಬ್ಬಂದಿ ಮನೆಯಲ್ಲಿಟ್ಟುಕೊಂಡಿದ್ದಾರೆ ಎಂಬ ಆರೋಪಗಳು ಸಾಮಾನ್ಯವಾಗಿವೆ.

ಆಗಾಗ್ಗೆ ಬೆಲೆ ಬಾಳುವ ಯಂತ್ರಗಳನ್ನು,ಔಷಧಿ, ಸಂಗ್ರಹಿಸಲಾದ ರಕ್ತವನ್ನು ಮಾರಾಟ ಮಾಡುವ, ಕಳವು ಮಾಡುವ ಜಾಲವಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಕೂಡಲೇ ಉನ್ನತ ಮಟ್ಟದ ತನಿಖಾ ತಂಡ ನೇಮಿಸಿ ಕಳೆದ 10ವರ್ಷಗಳಿಂದ ಈ ಆಸ್ಪತ್ರೆಗೆ ಪೂರೈಕೆಯಾದ ಸಾಮಗ್ರಿಗಳ ಸಮಗ್ರ ತನಿಖೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

-----------------------

15ಕೆಪಿಡಿವಿಡಿ01: ದೇವದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುನ್ನೋಟ

Share this article