ಕನ್ನಡಪ್ರಭ ನಾಡಿನ ಪ್ರಬುದ್ಧ ಪತ್ರಿಕೆಯಾಗಿದ್ದು, ಸುದ್ದಿ ನಿಷ್ಠತೆ ಜೊತೆಗೆ ಸಾಮಾಜಿಕ ಬದ್ಧತೆ ಮತ್ತು ಮಹತ್ತರ ಹೊಣೆಗಾರಿಕೆ ನಿಭಾಯಿಸುತ್ತ ಅನೇಕ ವಿಭಾಗಗಳಲ್ಲಿನ ಸಾಧಕರನ್ನು ಗುರುತಿಸಿ ರಾಜ್ಯದೆಲ್ಲೆಡೆ ಜನತೆಗೆ ಪರಿಚಯಿಸುತ್ತಿದೆ ಎಂದು ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಂ.ಎನ್.ಪಾಟೀಲ ಬಣ್ಣಿಸಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ಕನ್ನಡಪ್ರಭ ನಾಡಿನ ಪ್ರಬುದ್ಧ ಪತ್ರಿಕೆಯಾಗಿದ್ದು, ಸುದ್ದಿ ನಿಷ್ಠತೆ ಜೊತೆಗೆ ಸಾಮಾಜಿಕ ಬದ್ಧತೆ ಮತ್ತು ಮಹತ್ತರ ಹೊಣೆಗಾರಿಕೆ ನಿಭಾಯಿಸುತ್ತ ಅನೇಕ ವಿಭಾಗಗಳಲ್ಲಿನ ಸಾಧಕರನ್ನು ಗುರುತಿಸಿ ರಾಜ್ಯದೆಲ್ಲೆಡೆ ಜನತೆಗೆ ಪರಿಚಯಿಸುತ್ತಿದೆ ಎಂದು ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಂ.ಎನ್.ಪಾಟೀಲ ಬಣ್ಣಿಸಿದರು.ಪಟ್ಟಣದ ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ಸಹಾಯ ಹಾಗೂ ಚಿತ್ರಕಲಾ ಪರಿಷತ್ ಸಹಕಾರದೊಂದಿಗೆ ಕನ್ನಡಪ್ರಭ, ಏಷಿಯಾ ನೆಟ್ ಸುವರ್ಣನ್ಯೂಸ್ ಆಯೋಜಿಸಿರುವ ಬಾಗಲಕೋಟೆ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುದ್ದಿ ಮಾಧ್ಯಮಗಳು ಕೇವಲ ಸುದ್ದಿಮನೆಗಳಾಗದೇ ಜೊತೆಗೆ ಸಮುದಾಯದ ಉಳಿವಿಗೆ ಅರಣ್ಯ ಮತ್ತು ವನ್ಯಜೀವಿಗಳ ಮಹತ್ತರ ಪಾತ್ರದ ಬಗ್ಗೆ ಮಕ್ಕಳಲ್ಲಿ ಜ್ಞಾನ ಮೂಡಿಸುವತ್ತ ತೊಡಗಿರುವುದು ಪ್ರಶಂಸಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲ್ಯಾಣಮಠ ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಚಿತ್ರಕಲೆ ಮಗುವಿನ ಕಲ್ಪನಾ ಶಕ್ತಿ, ಅಭಿವ್ಯಕ್ತತೆಯ ಶಕ್ತಿ ಜೊತೆಗೆ ಕತೃತ್ವ ಶಕ್ತಿಯನ್ನು ಎತ್ತರಿಸಲು ಸಹಕಾರಿಯಾಗಿದ್ದು, ಇಂಥ ಕಾರ್ಯಗಳ ಮೂಲಕ ಜವಾಬ್ದಾರಿಯುತ ಪತ್ರಿಕೆ ಕನ್ನಡಪ್ರಭ ತನ್ನ ಕಾಳಜಿ ತೋರಿಸಿರುವುದು ಸ್ತುತ್ಯಾರ್ಹ ಎಂದು ನುಡಿದರು. ಗೌರಮ್ಮ ಕೆಂಗಲಗುತ್ತಿ, ಶೇಖರ ಗೊಳಸಂಗಿ ಕಾರ್ಯಕ್ರಮ ನಿರೂಪಿಸಿದರು. ರಬಕವಿ-ಬನಹಟ್ಟಿ ವರದಿಗಾರ ಶಿವಾನಂದ ಮಹಾಬಲಶೆಟ್ಟಿ ವಂದಿಸಿದರು.ಪ್ರತಿಯೊಬ್ಬರಲ್ಲೂ ವಿವಿಧವಾದ ಕಲ್ಪನೆಗಳು, ಮನೋಗತ ರೂಪಕಗಳು ಇರುತ್ತವೆ. ಬೆಳೆಯುತ್ತಿರುವ ಮಕ್ಕಳು ಸುತ್ತಲಿನ ಪರಿಸರ, ವಿದ್ಯಮಾನಗಳು, ಪ್ರಾಣಿ-ಪಕ್ಷಿಗಳ ಬಗ್ಗೆ ಕುತೂಹಲದ ಜೊತೆಗೆ ಪರಿಕಲ್ಪನೆ ಬೆಳೆಸಿಕೊಂಡಿರುತ್ತಾರೆ. ಅಂಥ ಮಕ್ಕಳಲ್ಲಿರುವ ಸುಪ್ತ ಸೃಜನಶೀಲತೆಯು ಚಿತ್ರಕಲೆ ಬಿಡಿಸುವ ಮೂಲಕ ವೃದ್ಧಿಗೊಳ್ಳುತ್ತದೆ.
-ಎಂ.ಎನ್.ಪಾಟೀಲ, ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರು.------ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮಲೋಕದ ಧೃವತಾರೆಗಳಾಗಿದ್ದು, ತಮ್ಮ ನೇರ, ದಿಟ್ಟ ಮತ್ತು ನಿರಂತರ ವಿಶೇಷ ಸುದ್ದಿಗಳಿಂದಾಗಿ ಲಕ್ಷಾಂತರ ಜನರ ಮನಗೆದ್ದಿವೆ. ಕೇವಲ ವ್ಯಾಪಾರಿ ಬುದ್ದಿ ಪ್ರದರ್ಶಿಸದೇ, ವರ್ತಮಾನಗಳ ನೀಡುವ ಜೊತೆಗೆ ಪರಿಸರ ಸಂರಕ್ಷಣೆಯತ್ತ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಸಮಗ್ರ ಅರಿವು ಮೂಡಿಸಲು ಅಂತರಂಗದ ಕಣ್ಣು ಅರಳಿಸುವತ್ತ ಚಿತ್ರಕಲೆ ಮೂಲಕ ಮುಂದಾಗಿರುವುದು ಸಂತಸ ತಂದಿದೆ.
-ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಕಲ್ಯಾಣಮಠ ಗಿರಿಸಾಗರ.ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿರುವ ಕನ್ನಡಪ್ರಭ: ಬ್ರಹ್ಮಾನಂದ ಹಡಗಲಿ
ಏಷಿಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ಕೇವಲ ಸುದ್ದಿ ಪ್ರಸಾರಕ್ಕೆ ಸೀಮಿತವಾಗಿರದೇ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿದೆ ಎಂದು ಕನ್ನಡಪ್ರಭ ಬೆಳಗಾವಿ ಆವೃತ್ತಿಯ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ ಹೇಳಿದರು.
ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, 58 ಸಂವತ್ಸರವನ್ನು ಪೂರೈಸಿರುವ ರಾಜ್ಯಮಟ್ಟದ ಸುದ್ದಿ ಸಂಸ್ಥೆ ಕನ್ನಡಪ್ರಭ ಉತ್ತರ-ಕರ್ನಾಟಕದಲ್ಲಿ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ಪರವಾಗಿ ನಿಂತಿದ್ದು ಮಾತ್ರವಲ್ಲದೇ ಸಹಾಯ ಹಸ್ತ ಕೂಡ ಚಾಚಿತ್ತು. ಉಡುಪಿಯಲ್ಲಿ ಹಣ್ಣು ಮಾರಿ ಶಾಲೆಯನ್ನು ನಿರ್ಮಿಸಿದ್ದ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ ಪರಿಣಾಮ ಕೇಂದ್ರ ಸರ್ಕಾರ ನಾವು ಗುರುತಿಸಿ ವ್ಯಕ್ತಿಯನ್ನೇ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು ಎಂದು ತಿಳಿಸಿದರು.ಕನ್ನಡಪ್ರಭ ಉದ್ಯಮಿಗಳು, ವ್ಯಾಪಾರಿಗಳು, ಕೃಷಿಕರು, ಮಹಿಳಾ ಸಾಧಕಿಯರು, ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದವರು, ವೈದ್ಯಕೀಯ ಕ್ಷೇತ್ರ, ಆಯುರ್ವೇದ ಸಾಧಕರು, ಇಂಜಿನೀಯರ್‌ಗಳು ಸೇರಿದಂತೆ ಹಲವು ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಪ್ರಶಸ್ತಿ ನೀಡುವ ಕೆಲಸ ಮಾಡುತ್ತಿದೆ. ಅದರಂತೆ ನಮ್ಮ ಪರಿಸರ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಹೊಣೆಯಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಪರಿಸರ ಅರಣ್ಯದ ಬಗ್ಗೆ ವನ್ಯ ಜೀವಿಗಳ ಬಗ್ಗೆ ತಿಳುವಳಿಕೆ ಬರಲಿ, ಮಕ್ಕಳಲ್ಲಿರುವ ಪ್ರತಿಭೆಗೆ ಸೂಕ್ತ ಅವಕಾಶ ದೊರೆಯಲಿ ಎಂಬ ಉದ್ದೇಶದಿಂದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಪ್ರತಿಭಾನ್ವಿತ ಮಕ್ಕಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ವಿವರಿಸಿದರು.