ಎಲ್ಲ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತಿದ್ದು, ಜನಸಾಮಾನ್ಯರ ಹಿತದೃಷ್ಟಿಯಿಂದಲಾದರೂ ತಡೆಹಿಡಿದಿರುವ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತಿದ್ದು, ಜನಸಾಮಾನ್ಯರ ಹಿತದೃಷ್ಟಿಯಿಂದಲಾದರೂ ತಡೆಹಿಡಿದಿರುವ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದ ಅವರು, ರಸ್ತೆ ದುರಸ್ತಿ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಕಳೆದ ಎರಡೂವರೆ ವರ್ಷಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ನಯಾ ಪೈಸೆ ಅನುದಾನ ನೀಡಿಲ್ಲ. ಅಲ್ಲದೇ ಈ ಹಿಂದೆ ಬಜೆಟ್ ನಲ್ಲೇ ಘೋಷಣೆಯಾದಂತಹ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ -1 ಗೆ 150 ಕೋಟಿ ರು. ಮಂಜೂರಾಗಿದ್ದರೂ ಇದುವರೆಗೆ ಕೇವಲ 35 ಕೋಟಿ ರು. ಬಿಡುಗಡೆಗೊಳಿಸಲಾಗಿದೆ. ಬಾಕಿ ಅನುದಾನವನ್ನು ತಡೆ ಹಿಡಿದ ಪರಿಣಾಮ ಕಾಮಗಾರಿಗಳೆಲ್ಲವೂ ಅರ್ಧಕ್ಕೆ ನಿಂತಿದ್ದು, ಕನಿಷ್ಠ ಅಗೆದಿರುವ ಗುಂಡಿಗಳನ್ನೂ ಸಹ ಮುಚ್ಚಲು ಸಾಧ್ಯವಾಗುತ್ತಿಲ್ಲ. ದಿನಬೆಳಗಾದರೆ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದು ಅವರ ತಾಳ್ಮೆಗೂ ಮಿತಿಯಿದೆ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.ಪಾಲಿಕೆಗೆ ವಿಶೇಷ ಅನುದಾನವೂ ಇಲ್ಲ, ಹಿಂದಿನ ಅನುದಾನಗಳನ್ನೂ ತಡೆಹಿಡಿಯಲಾಗಿದೆ ಎಂದರೆ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ?. ಸದ್ಯ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತದ ಅವಧಿಯೂ ಅಂತ್ಯವಾಗಿದ್ದು ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದಾರೆ. ಸಣ್ಣಪುಟ್ಟ ಕಾಮಗಾರಿಗಳಿಗೂ ಜಿಲ್ಲಾಧಿಕಾರಿಗಳನ್ನೇ ಕೇಳುವಂತಾಗಿದ್ದು ಕೂಡಲೇ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಶಾಸಕರು ಆಗ್ರಹಿಸಿದರು.