ರೈತರಿಗೆ ತಾವು ಬೆಳೆದ ಬೆಳೆಗಳ ರಫ್ತು ಕುರಿತಂತೆ ಸೂಕ್ತ ಮಾಹಿತಿ ಒದಗಿಸಲು ಕೃಷಿ ಮಾರಾಟ ಇಲಾಖೆ ಪ್ರಾಂಗಣದಲ್ಲಿ ರಫ್ತು ಮಾಹಿತಿ ಕೇಂದ್ರ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರೈತರಿಗೆ ತಾವು ಬೆಳೆದ ಬೆಳೆಗಳ ರಫ್ತು ಕುರಿತಂತೆ ಸೂಕ್ತ ಮಾಹಿತಿ ಒದಗಿಸಲು ಕೃಷಿ ಮಾರಾಟ ಇಲಾಖೆ ಪ್ರಾಂಗಣದಲ್ಲಿ ರಫ್ತು ಮಾಹಿತಿ ಕೇಂದ್ರ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸಲಹೆ ನೀಡಿದರು.ನವನಗರದ ಕೃಷಿ ಉತ್ಪನ್ನ ಮಾರಾಟ ಇಲಾಖೆಯ ಪ್ರಾಂಗಣದಲ್ಲಿ ಆರಂಭಿಸಲಾದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಯಾವ ಯಾವ ರಾಜ್ಯ ಮತ್ತು ದೇಶಗಳಲ್ಲಿ ಎಷ್ಟರ ಮಟ್ಟಿಗೆ ಬೇಡಿಕೆ ಇದೆ, ಅಲ್ಲಿನ ದರ, ಬೇಡಿಕೆ ಮತ್ತು ಪೂರೈಕೆ ಕುರಿತಂತೆ ಮಾಹಿತಿ ನೀಡಲು ರಫ್ತು ಮಾಹಿತಿ ಕೇಂದ್ರ ಅವಶ್ಯಕತೆ ಇದೆ. ಇದರಿಂದ ರೈತರಿಗೆ ತಮ್ಮ ಬೆಳೆಗಳನ್ನು ಎಲ್ಲಿ, ಹೇಗೆ ಮತ್ತು ಯಾವಾಗ ಮಾರಾಟ ಮಾಡಬೇಕೆಂಬುದರ ಕುರಿತು ಸರಿಯಾದ ಮಾರ್ಗದರ್ಶನ ನೀಡಿದಂತಾಗುತ್ತದೆ ಎಂದು ಹೇಳಿದರು.
ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 24 ತೊಗರಿ ಖರೀದಿ ಕೇಂದ್ರ ತೆರೆಯಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ₹8 ಸಾವಿರದಂತೆ ಖರೀದಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 53262 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, 66578 ಮೆಟ್ರಿಕ್ ಟನ್ ಉತ್ಪನ್ನ ನಿರೀಕ್ಷಿಸಲಾಗಿದೆ. ಪ್ರತಿ ಎಕರೆಗೆ 4 ಕ್ವಿಂಟಲ್ ಖರೀದಿಸಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಬಾಗಲಕೋಟೆ ತಾಲೂಕಿನಲ್ಲಿ ಚಾಲನೆ ನೀಡಲಾಗಿದೆ. ಹುನಗುಂದಲ್ಲಿ 30 ಜನ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಖರೀದಿ ಕೇಂದ್ರಕ್ಕೆ ಬರಲು ಆಗದ ವೃದ್ಧ ರೈತರ ಮನೆಗೆ ತೆರಳಿ ಬಯೋಮ್ಯಾಟ್ರಿಕ್ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಖರೀದಿ ಕೇಂದ್ರ ಸ್ಥಾಪಿಸಿ ಮೆಕ್ಕೆಜೋಳಗ ಖರೀದಿ ಪ್ರಕ್ರಿಯೆ ನಡೆದಿದೆ. ಜಿಲ್ಲೆಯಲ್ಲಿ 47450 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.ಖರೀದಿ ಕೇಂದ್ರದಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಸರಕಾರ ಮಾಡುತ್ತಿದೆ. ಬೆಳೆ ಹಾನಿ ಪರಿಹಾರವಾಗಿ ₹139 ಕೋಟಿ ನೀಡಲಾಗಿದ್ದು, ಹೆಚ್ಚುವರಿಯಾಗಿ ₹55 ಕೋಟಿ ಪರಿಹಾರ ಸಹ ಜಮೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅಶೋಕ್ ತೇಲಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತಹಸೀಲ್ದಾರ್ ವಾಸುದೇವಸ್ಥಾಮಿ, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ವಿ.ಡಿ.ಪಾಟೀಲ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ಜಿಲ್ಲಾ ವ್ಯವಸ್ಥಾಪಕಿ ಸುಪ್ರೀಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.