ವಾಕ್ ಸ್ವಾತಂತ್ಯಕ್ಕೆ ಕುತ್ತು: ಪ್ರಭಾಕರ್

KannadaprabhaNewsNetwork |  
Published : Aug 10, 2025, 01:31 AM IST
9ಕೆಪಿಎಲ್ 38 ಕೊಪ್ಪಳ ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಜನರ ಸಮಸ್ಯೆ ಮತ್ತು ಸವಾಲುಗಳಿಂದ ಗಮನ ಬೇರೆಡೆ ಸೆಳೆಯಲು ಕಾರ್ಪೋರೇಟ್ ಶಕ್ತಿಗಳು ಪತ್ರಿಕೋದ್ಯಮವನ್ನು ಬಳಸಿಕೊಳ್ಳುತ್ತಿವೆ. ಪತ್ರಕರ್ತರ ಕೈಯಲ್ಲೇ ಪತ್ರಿಕಾ ವೃತ್ತಿಪರತೆಯ ಶವ ಪೆಟ್ಟಿಗೆಗೆ ಮೊಳೆ ಹೊಡಿಸುವ ಕೆಲಸ ಮಾಡಲಾಗುತ್ತಿದೆ.

ಕೊಪ್ಪಳ:

ಕಳೆದ 76 ವರ್ಷಗಳಲ್ಲಿ ಸಂವಿಧಾನಕ್ಕೆ 104 ಬಾರಿ ತಿದ್ದುಪಡಿ ತರಲಾಗಿದೆ. ಆದರೆ, ಈಗ ಸಂವಿಧಾನದ ಕುತ್ತಿಗೆಗೆ ಕೈ ಹಾಕಲಾಗುತ್ತಿದ್ದು, ವಾಕ್ ಸ್ವಾತಂತ್ರ್ಯಕ್ಕೆ ಕುತ್ತು ಬಂದಿದೆ ಎಂದು ಸಿಎಂ ಮಾಧ್ಯಮ‌ ಸಲಹೆಗಾರ ಕೆ.ವಿ. ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು.

ನಗರದ ನೌಕರರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಪತ್ರಕರ್ತರಿಗೆ ಪ್ರತ್ಯೇಕ ಹಕ್ಕುಗಳನ್ನು ನೀಡಿಲ್ಲ. ಸಂವಿಧಾನದಲ್ಲಿ ಇರುವ ವಾಕ್ ಸ್ವಾತಂತ್ರ್ಯವೇ ಪತ್ರಿಕಾ ಸ್ವಾತಂತ್ರ್ಯವೂ ಆಗಿದೆ. ಈಗ ಇದಕ್ಕೇ ಕುತ್ತು ಬಂದಿದೆ ಎಂದರು.

104 ಬಾರಿ ಮಾಡಿದ ತಿದ್ದುಪಡಿಗಳು ಸಂವಿಧಾನದ ಮೂಲ ಆಶಯ ಎತ್ತಿ ಹಿಡಿದಿದ್ದವು. ಇತ್ತೀಚಿನ ಬೆಳವಣಿಗೆಗಳಲ್ಲಿ ಸಂವಿಧಾನದ ಪರಮಾಧಿಕಾರ, ಸಂಸದೀಯ ಪ್ರಜಾಪ್ರಭುತ್ವ, ಕಲ್ಯಾಣ ರಾಷ್ಟ್ರದ ಪರಿಕಲ್ಪನೆ, ಒಕ್ಕೂಟ ವ್ಯವಸ್ಥೆ, ನಿಯಮಿತ ಕಾಲಕ್ಕೆ ಚುನಾವಣೆ, ಸಾಮಾಜಿಕ ನ್ಯಾಯ, ನೈಸರ್ಗಿಕ ನ್ಯಾಯ, ಮೂಲಭೂತ ಹಕ್ಕು, ಧರ್ಮ‌ನಿರಪೇಕ್ಷತೆ ಮತ್ತು ಜಾತ್ಯತೀತತೆ ಹಾಗೂ ವಾಕ್ ಸ್ವಾತಂತ್ರ್ಯ ನಿರಂತರ ದಾಳಿಗೆ ಒಳಗಾಗುತ್ತಿದೆ. ಇದಕ್ಕೆ ಮೂಲ ಕಾರಣ ಜೀವಂತ ಪತ್ರಿಕಾ ವೃತ್ತಿಯನ್ನು ಕಾರ್ಪೋರೇಟ್ ಶವಪೆಟ್ಟಿಗೆಯೊಳಗಿಟ್ಟು ಒಂದೊಂದೇ ಮೊಳೆ ಹೊಡೆಯುತ್ತಿರುವುದು ಎಂದರು.

ಜನರ ಸಮಸ್ಯೆ ಮತ್ತು ಸವಾಲುಗಳಿಂದ ಗಮನ ಬೇರೆಡೆ ಸೆಳೆಯಲು ಕಾರ್ಪೋರೇಟ್ ಶಕ್ತಿಗಳು ಪತ್ರಿಕೋದ್ಯಮವನ್ನು ಬಳಸಿಕೊಳ್ಳುತ್ತಿವೆ. ಪತ್ರಕರ್ತರ ಕೈಯಲ್ಲೇ ಪತ್ರಿಕಾ ವೃತ್ತಿಪರತೆಯ ಶವ ಪೆಟ್ಟಿಗೆಗೆ ಮೊಳೆ ಹೊಡಿಸುವ ಕೆಲಸ ಮಾಡಲಾಗುತ್ತಿದೆ ಎಂದ ಅವರು, ರಾಹುಲ್ ಗಾಂಧಿ ಕೈಯಲ್ಲಿ ಸಂವಿಧಾನದ ಬುಕ್‌ ಹಿಡಿದು "ನಮ್ಮ ನಿಮ್ಮ ಮಕ್ಕಳಿಗೆ ಭವಿಷ್ಯದ ಭಾರತ ಹೇಗಿರಬೇಕು " ಎನ್ನುವ ಪ್ರಶ್ನೆಯನ್ನು ಪತ್ರಿಕೋದ್ಯಮ ಗಂಭೀರವಾಗಿ ವಿಶ್ಲೇಷಣೆಗೆ ಒಳಪಡಿಸಬೇಕಿದೆ. ಸಂವಿಧಾನ ಬದಲಾಯಿಸದೇ ಸಂವಿಧಾನದ ಮೂಲ ಆಶಯ, ಮೂಲಭೂತ ತತ್ವ ಕೊಲ್ಲುವ ಷಡ್ಯಂತ್ರದ ವಿರುದ್ಧ ಪತ್ರಿಕೋದ್ಯಮಕ್ಕೆ ಜಾಣ ಮೈ-ಮರೆವು ಬಂದಂತಿದೆ. ಇದರಿಂದ ಪತ್ರಿಕಾ ವೃತ್ತಿಯೇ ಬಿದ್ದು ಹೋಗುತ್ತದೆ ಎಂದು ಪ್ರಭಾಕರ ಕಳವಳ ವ್ಯಕ್ತಪಡಿಸಿದರು.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕೆ.ವಿ. ಪ್ರಭಾಕರ ಅವರು ಸಿಎಂ ಮಾಧ್ಯಮ ಸಲಹೆಗಾರರಾದ ಮೇಲೆ ಪತ್ರಕರ್ತರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಪತ್ರಿಕಾ ಭವನ ನಿರ್ಮಾಣಕ್ಕೆ ₹ 50 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಜೆಡಿಎಸ್ ರಾಜ್ಯಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಮಾತನಾಡಿ, ವೈಯಕ್ತಿಕವಾಗಿ ₹ 1 ಲಕ್ಷ ಪತ್ರಿಕಾ ಭವನಕ್ಕೆ ನೀಡುವುದಾಗಿ ಘೋಷಿಸಿದರು.

ಸಂಘದ ರಾಜ್ಯ ಸಮಿತಿ ಸದಸ್ಯ ಸಾದಿಕ್ ಅಲಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಾಲಭವನ‌ ಅಧ್ಯಕ್ಷ ಬಿ.ಆರ್. ನಾಯ್ಡು, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ವಾರ್ತಾ ಅಧಿಕಾರಿ ಡಾ. ಸುರೇಶ, ಕೊಪ್ಪಳ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ, ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಜಿ.ಎಸ್. ಗೋನಾಳ, ಹರೀಶ್ ಎಚ್.ಎಸ್, ಗೌರವಾಧ್ಯಕ್ಷ ಬಸವರಾಜ ಗುಡ್ಲಾನೂರು, ಜಿಲ್ಲಾ ಕಾರ್ಯದರ್ಶಿ ವೀರಣ್ಣ ಕಳ್ಳಿಮನಿ, ಖಜಾಂಚಿ ರಾಜು. ಬಿ.ಆರ್ ಸೇರಿದಂತೆ ಜಿಲ್ಲೆಯ ಪತ್ರಕರ್ತರು ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಸ್ವಾಗತಿಸಿದರೆ, ಎನ್.ಎಂ. ದೊಡ್ಡಮನಿ ನಿರೂಪಿಸಿದರು. ಕಲಾವಿದರಾದ ಭಾಷಾ ಹಿರೇಮನಿ ನಾಡಗೀತೆ ಹಾಡಿದರು.

PREV

Recommended Stories

ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ
12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ