ತುಂಬಿದ ಹಿರೇಹಳ್ಳದ ಜಲಾಶಯ, ಮುಳುಗಿದ ಬೆಳೆ

KannadaprabhaNewsNetwork |  
Published : Aug 10, 2025, 01:31 AM IST
9ಕೆಪಿಎಲ್27 ಹಿರೇಹಳ್ಳದಲ್ಲಿನ ಪ್ರವಾಹದಿಂದ ಹಿರೇಸಿಂದೋಗಿ ಗ್ರಾಮದ ಬಳಿ  ಹೊಲಗಳಿಗೆ ನೀರು ನುಗ್ಗಿದ್ದರಿಂದ ಬೆಳೆ ನಾಶವಾಗಿರುವುದು. | Kannada Prabha

ಸಾರಾಂಶ

ಹಿರೇಹಳ್ಳ ಜಲಾಶಯದಿಂದ ಏಕಾಏಕಿ ನೀರು ಬಿಟ್ಟ ಪರಿಣಾಮ ಹಿರೇಹಳ್ಳದುದ್ದಕ್ಕೂ ಇರುವ ಬ್ಯಾರೇಜ್ ಭರ್ತಿಯಾಗಿವೆ. ಇದರಿಂದ ಹಳ್ಳದ ನೀರು ಜಮೀನಿಗೆ ನುಗ್ಗಿ ಲಕ್ಷಾಂತರ ರುಪಾಯಿ ಬೆಳೆ ಹಾನಿಯಾಗಿರುವ ವರದಿಯಾಗಿದೆ.

ಕೊಪ್ಪಳ:

ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಶನಿವಾರ ಕೊಪ್ಪಳ ಸುತ್ತಮುತ್ತ ಭಾರಿ ಮಳೆಯಾಗಿದೆ. ಹಿರೇಹಳ್ಳ ಜಲಾಶಯ ಭರ್ತಿ ಆಗಿದ್ದರಿಂದ ಕ್ರಸ್ಟ್‌ಗೇಟ್ ಮೂಲಕ ನೀರು ಬಿಡುಗಡೆ ಮಾಡಿದ್ದು ಹಿರೇಹಳ್ಳ ಉಕ್ಕೇರಿದ್ದು ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗಿದೆ.

ಜಲಾಶಯದಿಂದ ಏಕಾಏಕಿ ನೀರು ಬಿಟ್ಟ ಪರಿಣಾಮ ಹಿರೇಹಳ್ಳದುದ್ದಕ್ಕೂ ಇರುವ ಬ್ಯಾರೇಜ್ ಭರ್ತಿಯಾಗಿವೆ. ಇದರಿಂದ ಹಳ್ಳದ ನೀರು ಜಮೀನಿಗೆ ನುಗ್ಗಿ ಲಕ್ಷಾಂತರ ರುಪಾಯಿ ಬೆಳೆ ಹಾನಿಯಾಗಿರುವ ವರದಿಯಾಗಿದೆ. ಬೇಳೂರು, ಗೊಂಡಬಾಳ, ಡೊಂಬರಳ್ಳಿ, ಹಿರೇಸಿಂದೋಗಿ ಬಳಿ ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಹಲವು ಬೆಳೆ ನೀರುಪಾಲಾಗಿವೆ.

ರೈತರ ಆಕ್ರೋಶ:

ಹಿರೇಹಳ್ಳಕ್ಕೆ ಏಕಾಏಕಿ ನೀರು ಬಿಟ್ಟಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಲಾಶಯಕ್ಕೆ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ ಪರಿಣಾಮ ಹೆಚ್ಚಿನ ನೀರು ಹರಿದು ಬಂದಿದೆ. ಅನಿವಾರ್ಯವಾಗಿ ನೀರು ಬಿಡುಗಡೆ ಮಾಡಲಾಗಿದೆ ಎಂದು ಅಭಿಯಂತರರು ತಿಳಿಸಿದರೂ ರೈತರು ಸಮಾಧಾನಗೊಂಡಿಲ್ಲ.

ಮುಳುಗಿದ ಪಂಪಸೆಟ್:

ಹಿರೇಹಳ್ಳ ತುಂಬಿದ್ದರಿಂದ ಹಳ್ಳದ ಉದ್ದಕ್ಕೂ ಹಾಕಿರುವ ಹತ್ತಾರು ಗ್ರಾಮಗಳ ರೈತರ ಪಂಪಸೆಟ್ ಮುಳುಗಿವೆ. ಏಕಕಾಲಕ್ಕೆ ನೀರು ಹರಿದುಬಂದಿದ್ದರಿಂದ ಪಂಪ್‌ಸೆಟ್‌ಗಳನ್ನು ಹಳ್ಳದಿಂದ ತೆಗೆದುಕೊಳ್ಳಲು ರೈತರಿಗೆ ಸಾಧ್ಯವಾಗಿಲ್ಲ. ಇದರಿಂದ ನೀರಿನಲ್ಲಿ ಕೊಚ್ಚಿ ಹೋಗಿವೆ.

ಗ್ರಾಮದೊಳಗೆ ನುಗ್ಗಿದ ನೀರು:

ಹಿರೇಹಳ್ಳದ ನೀರು ಕೊಪ್ಪಳ ತಾಲೂಕಿನ ಹಳೆಗೊಂಡಬಾಳ ಗ್ರಾಮದೊಳಕ್ಕೆ ನುಗ್ಗಿದೆ. ಇದು ಸ್ಥಳಾಂತರಗೊಂಡಿರುವ ಗ್ರಾಮವಾಗಿದ್ದರೂ ಸಹ ಜನರು ಇಲ್ಲಿಯೇ ವಾಸವಾಗಿದ್ದಾರೆ. ಹೀಗಾಗಿ, ಇವರಿಗೆ ಪರಿಹಾರ ಕೊಡಲು ಸಹ ಬರುವುದಿಲ್ಲ. ಆದರೂ ಇಲ್ಲಿಯ ಜನರು ಎಷ್ಟೇ ಪ್ರವಾಹ ಬಂದರು, ಗ್ರಾಮದೊಳಕ್ಕೆ ನೀರು ನುಗ್ಗಿದರು ಅಲ್ಲಿಯೇ ವಾಸವಾಗಿದ್ದಾರೆ. ಶುಕ್ರವಾರ ತಡರಾತ್ರಿ ಏಕಾಏಕಿ ಗ್ರಾಮದೊಳಗೆ ನೀರು ನುಗ್ಗಿದ್ದು ಬಜಾರ್ ರಸ್ತೆಯುದ್ದಕ್ಕೂ ಬಂದಿದೆ.

ಕೊಪ್ಪಳಲ್ಲಿ ಅಬ್ಬರ:

ಪ್ರಸಕ್ತ ವರ್ಷದಲ್ಲಿ ಅತೀ ದೊಡ್ಡ ಮಳೆ ಕೊಪ್ಪಳ ನಗರದಲ್ಲಿ ಆಗಿದ್ದು ಗಣೇಶ ನಗರ, ಹಮಾಲರ ಕಾಲನಿ, ಕುವೆಂಪು ನಗರ ಸೇರಿದಂತೆ ಹಲವೆಡೆ ನೀರು ನುಗ್ಗಿದೆ. ಬಸವೇಶ್ವರ ವೃತ್ತದ ಹೊಸಪೇಟೆ ರಸ್ತೆಯಲ್ಲಿ ಸಂಚಾರಕ್ಕೂ ಸಾಧ್ಯವಾಗದಂತೆ ರಸ್ತೆಯಲ್ಲಿ ನೀರು ಹರಿದ ಪರಿಣಾಮ ಟ್ರಾಫಿಕ್ ಜಾಮ್ ಆಗಿ ಸಮಸ್ಯೆಯಾಯಿತು. ಚರಂಡಿ ತುಂಬಿ ರಸ್ತೆ ಮೇಲೆ ಅಪಾರ ಪ್ರಮಾಣದ ಹರಿಯಿತು. ಬಸವೇಶ್ವರ ವೃತ್ತದ ಹೆದ್ದಾರಿಯಲ್ಲಿಯೇ ನದಿಯಂತೆ ನೀರು ಹರಿಯುತ್ತಿರುವುದರಿಂದ ಸಂಚಾರಕ್ಕೂ ಸಮಸ್ಯೆಯಾಗಿರುವುದು ಕಂಡು ಬಂದಿತು.

PREV

Recommended Stories

ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ
12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ