ಧಾರವಾಡ: ಚುನಾವಣಾ ಆಯೋಗ ದೆಹಲಿಯಲ್ಲಿದ್ದರೂ ಚುನಾವಣೆ ನಡೆಸುವುದು ರಾಜ್ಯ ಸರ್ಕಾರ. ಇದು ಸಾಮಾನ್ಯಜ್ಞಾನ ಇದ್ದವರಿಗೂ ಗೊತ್ತಿರುವ ವಿಷಯ. ಆದರೆ ರಾಹುಲ್ ಗಾಂಧಿ ಅವರಿಗೆ ಪಾಪ, ಈ ವಿಷಯ ತಿಳದಿದೆಯೋ ಇಲ್ಲವೋ ಗೊತ್ತಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಎಲ್ಲ ಕ್ಷೇತ್ರದಲ್ಲಿ ಇಂತಹ ತಪ್ಪು ಮತಗಳು ಇರುತ್ತವೆ. ಒಂದೇ ಮನೆಯಲ್ಲಿ ೧೦ ಮತ, ೧೦೦ ವೋಟು, ಒಂದೇ ಮತ ಎರಡು ಕ್ಷೇತ್ರದಲ್ಲಿ ಇರುತ್ತವೆ. ಒಬ್ಬರ ಮತ ಹಲವು ಇರುತ್ತವೆ. ಇದನ್ನು ತಪ್ಪಿಸಲು ಹಿಂದೆ ಆಧಾರ ಕಾರ್ಡ್ ಲಿಂಕ್ ಮಾಡಬೇಕು ಎಂದು ಹೇಳಲಾಗಿತ್ತು. ಆದರೆ ಅದಕ್ಕೆ ಇದೇ ಕಾಂಗ್ರೆಸ್ ಸುಪ್ರೀಂಕೋರ್ಟ್‌ನಲ್ಲಿ ಗದ್ದಲ ಮಾಡಿದರು. ಈಗ ಬಿಹಾರದಲ್ಲಿ ಇದೇ ರೀತಿ ನಕಲಿ ವೋಟು ಸ್ವಚ್ಛ ಮಾಡುವ ಕೆಲಸ ಮಾಡಿದರೆ ರಾಹುಲ್ ಗಾಂಧಿ ಇದನ್ನು ಮಾಡಬೇಡಿ ಎಂದು ಹೇಳುತ್ತಾರೆ. ಆ ತಪ್ಪು ಆಗಿದ್ದು ಇವರದೇ ಸರ್ಕಾರದಿಂದ. ಮಹಾದೇವಪುರ ಅಷ್ಟೇ ಯಾಕೆ. ಅದರ ಪಕ್ಕದ ಶಿವಾಜಿನಗರದ ಬಗ್ಗೆ ಯಾಕೆ ಧ್ವನಿ ಎತ್ತಿಲ್ಲ. ಸರ್ವಜ್ಞ ನಗರ ಇದೆ, ಜಮೀರ್ ಕ್ಷೇತ್ರ ಇದೆ. ಅಲ್ಲಿ ಯಾಕೆ ಇದನ್ನು ಎತ್ತಿಲ್ಲ ಎಂದು ಪ್ರಶ್ನಿಸಿದರು.
ಅರವಿಂದ ಲಿಂಬಾವಳಿ ಅವರು ಅಂಕಿ ಸಂಖ್ಯೆ ಮೂಲಕ ಉತ್ತರ ಕೊಟ್ಟಿದ್ದಾರೆ.ರಾಹುಲ್ ಗಾಂಧಿ ಚುನಾವಣಾ ಸ್ಟಂಟ್ ತರಾ ಮಾಡಲು ಹೊರಟಿದ್ದಾರೆ. ಅವರಿಗೆ ಯಾರೋ ಇಂತಹ ಕೆಲಸ ಮಾಡಿ ಎಂದು ಎನ್‌ಜಿಒದವರು ಹೇಳಿದ್ದಾರೆ. ಅದನ್ನು ಅವರು ಮಾಡುತ್ತಿದ್ದಾರೆ. ಜನರಿಗೆ ಸಂಬಂಧಿಸಿದ ವಿಷಯ ಎತ್ತಿದರೆ ಎಲ್ಲರೂ ಸ್ಪಂದನೆ ಮಾಡುತ್ತಾರೆ. ಈ ರೀತಿ ಯಾರದೋ ಮಾತು ಕೇಳಿಕೊಂಡು ಪ್ರತಿಭಟನೆ ಮಾಡಿದರೆ ಯಾರೂ ಒಪ್ಪಲ್ಲ. ಇದರಲ್ಲಿ ಹುರುಳಿಲ್ಲ ಎಂದರು.