ಕೊಪ್ಪಳ:
ಯೂರಿಯಾ ರಸಗೊಬ್ಬರ ವಿತರಿಸುತ್ತಾರೆಂದು ಆಗಮಿಸಿದ್ದ ನೂರಾರು ರೈತರು ಗೊಬ್ಬರ ವಿತರಿಸದೆ ಇರುವುದರಿಂದ ಆಕ್ರೋಶಗೊಂಡು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ಬಸವೇಶ್ವರ ವೃತ್ತದಲ್ಲಿ ನಡೆದಿದೆ.ಟಿಎಂಪಿಎಂಎಸ್ ಎದುರು ಜಮಾಯಿಸಿದ್ದ ರೈತರು 10 ಗಂಟೆಯಾದರೂ ಯೂರಿಯಾ ವಿತರಣೆ ಪ್ರಾರಂಭವಾಗದೆ ಇರುವುದನ್ನು ಕಂಡು ಆಕ್ರೋಶಗೊಂಡರು. ಟಿಎಪಿಎಂಎಸ್ ಬಾಗಿಲನ್ನೇ ತೆರೆಯಲಿಲ್ಲ. ಇದು ರೈತರನ್ನು ಕೆರಳುವಂತೆ ಮಾಡಿತ್ತು. ಶುಕ್ರವಾರ ರಸಗೊಬ್ಬರ ಸಿಗದೆ ಇದ್ದಾಗ ಶನಿವಾರ ಬನ್ನಿ ಎಂದು ಹೇಳಿದ್ದರು. ಆದರೆ, ರೈತರು ಇಂದಾದರೂ ಯೂರಿಯಾ ರಸಗೊಬ್ಬರ ಸಿಕ್ಕಿತು ಎಂದು ಆಗಮಿಸಿದಾಗ ಆಕ್ರೋಶಗೊಂಡರಲ್ಲದೆ ಬಸವೇಶ್ವರ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ಪ್ರಾರಂಭಿಸಿದರು. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿ ವಾಹನಗಳು ಸಾಲುಗಟ್ಟಿ ನಿಂತವು. ರೈತರು ಹೆದ್ದಾರಿಯ ಮಧ್ಯದಲ್ಲಿಯೇ ಯೂರಿಯಾ ವಿತರಣೆ ಮಾಡುವ ವರೆಗೂ ಹೋರಾಟ ಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದು, ಆಕ್ರೋಶ ವ್ಯಕ್ತಪಡಿಸಿದರು.
ಇದು ಪರಿಸ್ಥಿತಿ ಕೈಮೀರುತ್ತದೆ ಎಂದು ಅರಿತ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರಾದರೂ ಕೈಗೂಡಲೇ ಇಲ್ಲ. ಆಗ ಸ್ಥಳಕ್ಕೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಆಗಮಿಸಿ, ರೈತರೊಂದಿಗೆ ಮಾತುಕತೆ ನಡೆಸಲು ಮುಂದಾದರು. ಈ ವೇಳೆ ರೈತರು ಜಿಲ್ಲಾಧಿಕಾರಿ ಗೊಬ್ಬರ ನೀಡುವಂತೆ ಪಟ್ಟು ಹಿಡಿದರು.ಯೂರಿಯಾ ರಸಗೊಬ್ಬರ ಬರಬೇಕಾಗಿದ್ದು ಬಂದಿಲ್ಲ. ಸೋಮವಾರ ರೈಲ್ವೆ ಮೂಲಕ ಆಗಮಿಸುತ್ತದೆ. ನಂತರ ವಿತರಿಸಲಾಗುವುದು ಎಂದು ಭರವಸೆ ನೀಡಿದರು. ಆದರೂ ರೈತರು ಪ್ರತಿಭಟನೆ ನಡೆಸಲು ಮುಂದಾದಾಗ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಡಿಸಿ ರೈತರ ಮನವೊಲಿಸಿ ಪ್ರತಿಭಟನೆ ಹಿಂದೆ ತೆಗೆಯಿಸಿದರು.ನಾಳೆ ಯೂರಿಯಾ ಗೊಬ್ಬರ ವಿತರಣೆ
ಕೊಪ್ಪಳದ ಗಂಜ್ ಸರ್ಕಲ್ ಆವರಣದಲ್ಲಿ ಇರುವ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಸೊಸೈಟಿಯಲ್ಲಿ ಆ. 11ರಂದು ಯೂರಿಯಾ ರಸಗೊಬ್ಬರದ ವಿತರಿಸಲಾಗುವುದು. ಜಮೀನು ಹೊಂದಿರುವ ರೈತರು ಆಧಾರ ಕಾರ್ಡ್ ಜೆರಾಕ್ಸ್ ಪ್ರತಿ ಹಾಗೂ ಜಮೀನಿನ ಪಹಣಿ ಜೆರಾಕ್ಸ್ ಪ್ರತಿ ತರಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಯೂರಿಯಾ ರಸಗೊಬ್ಬರ ವಿತರಿಸಲಾಗುವುದು. ಈ ಹಿಂದೆ ರಸಗೊಬ್ಬರ ಖರೀದಿಸಿದ ರೈತರಿಗೆ ಪುನಃ ವಿತರಿಸುವುದಿಲ್ಲ. ರೈತರ ಹೆಸರಿನಲ್ಲಿ ವಂಚನೆ ಎಸಗುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.