ಕಾವೇರಿ ನದಿಗೆ ಈಜಲು ತೆರಳಿದ ಬಾಲಕ ಮುಳುಗಿ ಸಾವು

KannadaprabhaNewsNetwork | Published : Nov 4, 2024 12:19 AM

ಸಾರಾಂಶ

ಈಜಲು ತೆರಳಿದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಾಪೋಕ್ಲು: ಈಜಲು ತೆರಳಿದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಶನಿವಾರ ಮೃತದೇಹ ಪತ್ತೆಯಾಗಿದೆ.

ಎಮ್ಮೆಮಾಡು ಗ್ರಾಮದ ಮಾಂದಲ್ ಎಂಬಲ್ಲಿ ಕಾವೇರಿ ನದಿಯಲ್ಲಿ ಶುಕ್ರವಾರ ಸ್ನಾನ ಮಾಡಲು ತೆರಳಿದ್ದ ಬಾಲಕರ ತಂಡದಲ್ಲಿದ್ದ ಪೊಟ್ಟಂಡ ಅನಿಫ್ ಅವರ ಮಗ, 7ನೇ ತರಗತಿ ವಿದ್ಯಾರ್ಥಿ ಉಬೈಸ್ (12) ನೀರಲ್ಲಿ ಈಜಾಡುತ್ತಿದ್ದಾಗ ಮುಳುಗಿದ್ದಾನೆ. ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಶುಕ್ರವಾರ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅಗ್ನಿಶಾಮಕ ದಳದವರನ್ನು ಕರೆಸಿದ್ದರು. ರಾತ್ರಿ ಆಗಿರುವುದರಿಂದ ಶೋಧ ಕಾರ್ಯ

ಶನಿವಾರಕ್ಕೆ ಮುಂದೂಡಲಾಗಿತ್ತು . ಶನಿವಾರ ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಬಾಲಕನ ಶವವನ್ನು ನೀರಿನಿಂದ ಮೇಲೆ ತರಲಾಯಿತು. ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

------------------------

ಸಾಲು ಸಾಲು ರಜೆ: ಕೊಡಗಿಗೆ ಪ್ರವಾಸಿಗರ ದಂಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದುಬಂದಿತ್ತು. ಪ್ರವಾಸಿಗರ ಆಗಮನದಿಂದ ಪ್ರವಾಸಿ ತಾಣಗಳು ತುಂಬಿದ್ದವು. ಮಡಿಕೇರಿ ಸೇರಿದಂತೆ ಹಲವು ಕಡೆ ವಾಹನ ದಟ್ಟಣೆ ಹೆಚ್ಚಾಗಿತ್ತು. ಗುರುವಾರ ನರಕ ಚತುರ್ದಶಿ, ಶುಕ್ರವಾರ ಕನ್ನಡ ರಾಜ್ಯೋತ್ಸವ ಹಾಗೂ ಶನಿವಾರ ಬಲಪಾಡ್ಯಮಿ ಮಾರನೇ ದಿನ ಭಾನುವಾರ ರಜೆ ಹೀಗೆ ನಿರಂತರವಾಗಿ ನಾಲ್ಕು ದಿನಗಳು ರಜೆ ಇದ್ದಿದ್ದರಿಂದ ಕೊಡಗಿಗೆ ಲಕ್ಷಗಟ್ಟಲೆ ಪ್ರವಾಸಿಗರು ಆಗಮಿಸಿದ್ದರು. ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಕೂಡ ಪ್ರವಾಸಿಗರು, ಭಕ್ತರಿಂದ ತುಂಬಿ ತುಳುಕಿತು.

ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಮಂಜಿನನಗರಿಯ ರಾಜಾಸೀಟಿಗೆ ಪ್ರವಾಸಿಗರು ಭೇಟಿ ನೀಡಿದರು. ರಾಜಾಸೀಟು, ಗ್ರೇಟರ್ ರಾಜಾಸೀಟು ಪ್ರವಾಸಿಗರಿಂದ ತುಂಬಿ ತುಳುಕಿತು. ಹೆಜ್ಜೆ ಇಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಪ್ರವಾಸಿಗರು ಆಗಮಿಸಿದ್ದರು. ರಾಜಾಸೀಟಿನ ವೀಕ್ಷಣಾ ಸ್ಥಳದಲ್ಲಿ ಕುಳಿತು ಪ್ರಕೃತಿಯನ್ನು ಕಣ್ತುಂಬಿಕೊಂಡರು.

ಕೊಡಗಿನ ಕುಲದೇವಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ಇಲ್ಲಿ ಪುಣ್ಯಸ್ನಾನ ಮಾಡಿ, ತೀರ್ಥ ಸಂಗ್ರಹಿಸುವುದರಿಂದ ಎಲ್ಲವೂ ಒಳಿತಾಗಲಿದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ತಲಕಾವೇರಿ ಹಾಗೂ ಭಾಗಮಂಡಲ ಪುಣ್ಯ ಕ್ಷೇತ್ರಗಳಿಗೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಬರುತ್ತಿದ್ದಾರೆ. ಹೀಗಾಗಿಯೇ ತಲಕಾವೇರಿ ಕ್ಷೇತ್ರದಲ್ಲೂ ಎತ್ತ ನೋಡಿದರೂ ಜನವೋ ಜನ. ಬಸ್ಸು, ಟಿಟಿ. ಸೇರಿದಂತೆ ಸಾವಿರಾರು ಬಸ್ಸುಗಳಲ್ಲಿ ಲಕ್ಷಾಂತರ ಜನರು ಜಿಲ್ಲೆಗೆ ಆಗಮಿಸುತ್ತಿದ್ದಾರೆ.

ರಾಜಾಸೀಟು, ಅಬ್ಬಿಫಾಲ್ಸ್, ತಲಕಾವೇರಿ ಸೇರಿದಂತೆ ಎಲ್ಲಾ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ವಾಹನಗಳ ದಟ್ಟಣೆಯೂ ತೀವ್ರವಾಗಿದೆ. ಹೀಗಾಗಿ ಸುಗಮ ಸಂಚಾರ ಸಾಧ್ಯವಿಲ್ಲದೆ ಪರದಾಡುವಂತಹ ಸ್ಥಿತಿಯೂ ನಿರ್ಮಾಣವಾಗಿದೆ. ವಾಹನಗಳ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದೇ ಪೊಲೀಸರಿಗೆ ಹರಸಾಹಸದ ಕೆಲಸವಾಗಿದೆ.

Share this article