ಕಂಪ್ಯೂಟರ್‌ ಸೈನ್ಸ್‌ ಸೀಟು ಹೆಚ್ಚಳಕ್ಕೆ ಬ್ರೇಕ್‌?

KannadaprabhaNewsNetwork |  
Published : May 15, 2025, 01:37 AM ISTUpdated : May 15, 2025, 10:04 AM IST
ಸುಧಾಕರ್‌  | Kannada Prabha

ಸಾರಾಂಶ

ತೆಲಂಗಾಣ ಮಾದರಿಯಲ್ಲಿ ರಾಜ್ಯದ ಎಂಜಿನಿಯರಿಂಗ್‌ ಕಾಲೇಜುಗಳಲ್ಲೂ ಕಂಪ್ಯೂಟರ್‌ ಸೈನ್ಸ್‌ (ಸಿಎಸ್‌) ಹಾಗೂ ಸಂಬಂಧಿಸಿದ ವಿಭಾಗದ ಸೀಟುಗಳ ಹೆಚ್ಚಳಕ್ಕೆ ನಿರ್ಬಂಧ ವಿಧಿಸಲು ರಾಜ್ಯ ಸರ್ಕಾರ ಗಂಭೀರ ಆಲೋಚನೆ ನಡೆಸಿದೆ.

 ಬೆಂಗಳೂರು : ತೆಲಂಗಾಣ ಮಾದರಿಯಲ್ಲಿ ರಾಜ್ಯದ ಎಂಜಿನಿಯರಿಂಗ್‌ ಕಾಲೇಜುಗಳಲ್ಲೂ ಕಂಪ್ಯೂಟರ್‌ ಸೈನ್ಸ್‌ (ಸಿಎಸ್‌) ಹಾಗೂ ಸಂಬಂಧಿಸಿದ ವಿಭಾಗದ ಸೀಟುಗಳ ಹೆಚ್ಚಳಕ್ಕೆ ನಿರ್ಬಂಧ ವಿಧಿಸಲು ರಾಜ್ಯ ಸರ್ಕಾರ ಗಂಭೀರ ಆಲೋಚನೆ ನಡೆಸಿದೆ.

ಕಾಲೇಜುಗಳು ಸಾಂಪ್ರದಾಯಿಕ ಕೋರ್ಸುಗಳನ್ನು ಕಡೆಗಣಿಸಿ ಕಂಪ್ಯೂಟರ್‌ ಸೈನ್ಸ್‌ ಹಾಗೂ ಇನ್ನಿತರೆ ಕೆಲವೇ ಹೊಸ ಕೋರ್ಸುಗಳ ಸೀಟುಗಳನ್ನು ಪ್ರತೀ ವರ್ಷ ಹೆಚ್ಚಿಸಿಕೊಂಡು ಪ್ರವೇಶ ನೀಡುತ್ತಿವೆ. ಇದರಿಂದ ಮುಂದಿನ ದಿನಮಾನಗಳಲ್ಲಿ ಆ ಕೋರ್ಸುಗಳಲ್ಲಿ ಅಧ್ಯಯನ ಮಾಡಿದವರಿಗೆ ಉದ್ಯೋಗಾವಕಾಶಗಳ ಕೊರತೆ ಹೆಚ್ಚಾಗುವ ಸಾಧ್ಯತೆ ಇದೆ. ಎಂಜಿನಿಯರಿಂಗ್ ಪದವೀಧರರಲ್ಲಿ ನಿರುದ್ಯೋಗ ದರ ಈಗಾಗಲೇ ಹೆಚ್ಚಾಗಿದೆ. ಹಾಗಾಗಿ ಸಾಂಪ್ರದಾಯಿಕ ಮತ್ತು ಉದಯೋನ್ಮುಖ ಸ್ಟ್ರೀಮ್‌ ಕೋರ್ಸುಗಳ ನಡುವಿನ ಸಮತೋಲನ ಕಾಯ್ದುಕೊಳ್ಳಲು ಈ ನಿರ್ಬಂಧ ಅನಿವಾರ್ಯ ಎಂದು ಉನ್ನತ ಶಿಕ್ಷಣ ಇಲಾಖೆ ಯೋಜಿಸಿದೆ.

ಇದೇ ಕಾರಣಕ್ಕೆ ತೆಲಂಗಾಣ ಸರ್ಕಾರ ಈಗಾಗಲೇ ಸಿಎಸ್‌ ಮತ್ತು ಸಂಬಂಧಿತ ವಿಭಾಗದ ಸೀಟು ಹೆಚ್ಚಳ ಸ್ಥಗಿತಗೊಳಿಸಿದೆ. ಅಲ್ಲಿನ ಹೈಕೋರ್ಟ್‌ ಕೂಡ ಇದಕ್ಕೆ ಪೂರಕವಾಗಿ ತೀರ್ಪು ನೀಡಿದೆ. ಇದನ್ನು ಆಧರಿಸಿ ಕರ್ನಾಟಕದಲ್ಲೂ ಸಿಎಸ್‌ ಮತ್ತು ಸಂಬಂಧಿಸಿದ ಸ್ಟ್ರೀಮ್‌ ಕೋರ್ಸುಗಳಲ್ಲಿ ಸೀಟು ಹೆಚ್ಚಳ ಮಾಡದಂತೆ ಕಾಲೇಜುಗಳಿಗೆ ನಿರ್ಬಂಧ ವಿಧಿಸಲು ಗಂಭೀರ ಚಿಂತನೆ ನಡೆದಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್‌ ಅವರು, ರಾಜ್ಯದಲ್ಲೂ ಸಿಎಸ್‌ ಮತ್ತು ಸಂಬಂಧಿಸಿದ ವಿಭಾಗದ ಸೀಟುಗಳ ಹೆಚ್ಚಳ ನಿರ್ಬಂಧಿಸಲು ಚಿಂತನೆ ನಡೆಸಿರುವುದು ನಿಜ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದು ಅವಶ್ಯಕ ಕೂಡ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸೀಟು ಹೆಚ್ಚಳದ ಮೇಲಿನ ಮಿತಿ ತೆಗೆದುಹಾಕಿದ್ದರಿಂದ ಎಂಜಿನಿಯರಿಂಗ್‌ ಕಾಲೇಜುಗಳು ಸಿವಿಲ್‌, ಮೆಕಾನಿಕಲ್‌, ಎಲೆಕ್ಟಿಕಲ್‌, ಎಲೆಕ್ಟ್ರಾನಿಕ್ಸ್‌ ಸೇರಿ ಇಂತಹ ಸಾಂಪ್ರದಾಯಿಕ ಕೋರ್ಸುಗಳನ್ನು ಕಡೆಗಣಿಸಿ ಸಿಎಸ್‌ ಸೇರಿ ಕೆಲವೇ ಹೊಸ ಕೋರ್ಸುಗಳ ಸೀಟುಗಳನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡು ದಾಖಲಾತಿ ಮಾಡಿಕೊಳ್ಳುತ್ತಿವೆ. ಇದು ಮುಂದೆ ಆ ಕೋರ್ಸುಗಳನ್ನು ಮಾಡಿದವರಿಗೆ ನಿರುದ್ಯೋಗ ಸಮಸ್ಯೆ ತರುವ ಆತಂಕ ಇದೆ. ಹಾಗಾಗಿ ಈ ವಿಚಾರವಾಗಿ ತೆಲಂಗಾಣ ಹೈಕೋರ್ಟ್‌ ನಿಂದ ಬಂದಿರುವ ತೀರ್ಪಿನ ವಿವರ ಪಡೆದಿದ್ದೇವೆ. ಪರಿಶೀಲಿಸಿ ಸೂಕ್ತ ಕ್ರಮ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ನಾನು ಉನ್ನತ ಶಿಕ್ಷಣ ಖಾತೆ ಜವಾಬ್ದಾರಿ ವಹಿಸಿಕೊಂಡ ಆರಂಭದಲ್ಲೇ ಎರಡು ವರ್ಷಗಳ ಕಾಲ ಹೊಸ ಎಂಜಿನಿಯರಿಂಗ್‌ ಕಾಲೇಜುಗಳ ಆರಂಭಕ್ಕೆ ನಿಷೇಧ ಹೇರುವ ಮೂಲಕ ಅವೈಜ್ಞಾನಿಕ ಸೀಟುಗಳ ಹೆಚ್ಚಳ ನಿಯಂತ್ರಿಸುವಂತೆ ಎಐಸಿಟಿಇಗೆ ಪತ್ರ ಬರೆದಿದ್ದೆ. ಆದರೆ, ಎಐಸಿಟಿಇ ನಮ್ಮ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ. ಆದರೆ, ಸೀಟು ಹೆಚ್ಚಳ ನಿಯಂತ್ರಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೂ ಇದೆ. ಅದನ್ನು ಬಳಸಿಕೊಂಡು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌