ತುಂಡಾದ ವಿದ್ಯುತ್‌ ತಂತಿ; ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

KannadaprabhaNewsNetwork |  
Published : Jul 29, 2024, 12:55 AM IST
ಮನೆಯ ಗೇಟ್ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ | Kannada Prabha

ಸಾರಾಂಶ

ವಿದ್ಯುತ್‌ ತಂತಿ ತುಂಡಾಗಿ ರಸ್ತೆ ಬಳಿ ಮನೆಯ ಗೇಟ್‌ ಮೇಲೆ ಬಿದ್ದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಸಮೀಪದ ಕೊಪ್ಪ ರಾಷ್ಟ್ರೀಯ ಹೆದ್ದಾರಿ ಬಳಿ ವಿದ್ಯುತ್ ತಂತಿಯೊಂದು ತುಂಡಾಗಿ ರಸ್ತೆ ಬಳಿ ಮನೆಯ ಗೇಟ್ ಮೇಲೆ ಬಿದ್ದು ಸ್ಥಳೀಯರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅನಾಹುತ ತಪ್ಪಿದೆ. ಕೊಪ್ಪ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಭಾಗದಲ್ಲಿ ತಡರಾತ್ರಿ ಘಟನೆ ಸಂಭವಿಸಿದೆ.

ತಡರಾತ್ರಿಯಲ್ಲಿ ಭಾರಿ ಸ್ಫೋಟದ ಸದ್ದಿನೊಂದಿಗೆ ಕಂಬದಿಂದ ತಂತಿ ತುಂಡಾಗಿ ಬಿದ್ದಿದ್ದು ಬೆಳಗಿನ ಜಾವ ಸ್ಥಳೀಯರ ಗಮನಕ್ಕೆ ಬಂದಿದೆ. ಅದೃಷ್ಟವಶಾತ್ ರಾತ್ರಿ ವೇಳೆ ಯಾರೂ ಆ ಭಾಗದಲ್ಲಿ ಚಲಿಸದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ.

ಮುಂಜಾನೆ ಹೊರಬಂದು ನೋಡಿದ ವೇಳೆ ವಿದ್ಯುತ್ ತಂತಿ ಚಂದ್ರಮೋಹನ್ ಅವರ ಮನೆಯ ಗೇಟ್ ಮೇಲೆ ಬಿದ್ದಿದ್ದು ವಿದ್ಯುತ್ ಪ್ರವಹಿಸುವುದು ಖಚಿತಗೊಂಡಿದೆ.

ತಕ್ಷಣ ಸಂಬಂಧಿಸಿದ ಸೆಸ್ಕ್ ಜೂನಿಯರ್ ಎಂಜಿನಿಯರ್ ಮತ್ತು ಲೈನ್ ಮ್ಯಾನ್ ಸಂಪರ್ಕಿಸಿದರೂ ಉತ್ತರ ದೊರೆಯದೆ ಸುಮಾರು ಒಂದು ಗಂಟೆ ಕಾಲ ಯಾವುದೇ ರೀತಿಯ ಅವಘಡ ಸಂಭವಿಸಿದಂತೆ ಸ್ಥಳದಲ್ಲೇ ಎಚ್ಚರಿಕೆಯಿಂದ ಕಾಯಬೇಕಾದ ಪರಿಸ್ಥಿತಿ ಒದಗಿ ಬಂತು.

ಸುಮಾರು ಒಂದು ಗಂಟೆಯ ನಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಸೆಸ್ಕ್ ಅಧಿಕಾರಿ, ಲೈನ್‌ಮ್ಯಾನ್ ಸ್ಥಳಕ್ಕೆ ಕಳಿಸಿ ಕ್ರಮ ಕೈಗೊಂಡಿದ್ದಾರೆ. ವಿದ್ಯುತ್ ಕಂಬದಲ್ಲಿ ಆಗಾಗ್ಗೆ ಸ್ಫೋಟದ ಶಬ್ದ ಕೇಳಿಬರುತ್ತಿದ್ದ ಬಗ್ಗೆ ಅಧಿಕಾರಿಗಳಿಗೆ ಕಳೆದ ಮೂರು ದಿನಗಳ ಹಿಂದೆ ಮಾಹಿತಿ ನೀಡಿದರೂ ಸ್ಪಂದಿಸಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

--------------------

ಇನ್ನೂ ಪತ್ತೆಯಾಗದ ನದಿಗೆ ಹಾರಿದ ಸರ್ಕಾರಿ ನೌಕರ

ಕುಶಾಲನಗರ: ಕಾವೇರಿ ನದಿಗೆ ಹಾರಿದ ಮಡಿಕೇರಿ ಉಪ ವಿಭಾಗಾಧಿಕಾರಿ ಕಚೇರಿಯ ನೌಕರ ಅರುಣ್ ಇನ್ನೂ ಪತ್ತೆಯಾಗಿಲ್ಲ.

ಕಳೆದ ಐದು ದಿನಗಳಿಂದ ಎನ್‌ಡಿಆರ್‌ಎಫ್ ಸೇರಿದಂತೆ 5 ತಂಡಗಳು ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದು ಇದುವರೆಗೂ ಅರುಣ್ ಪತ್ತೆಯಾಗಿಲ್ಲ ಎಂದು ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ತಿಳಿಸಿದ್ದಾರೆ.

ಮೃತದೇಹ ಪತ್ತೆಗಾಗಿ ಉಡುಪಿ ಮಲ್ಪೆಯ ನುರಿತ ಈಜು ತಜ್ಞ ಈಶ್ವರ ಮಲ್ಪೆ ಅವರು ಕೂಡ ಆಗಮಿಸಿ ಒಂದು ದಿನದ ಕಾರ್ಯಾಚರಣೆ ನಡೆಸಿದ್ದಾರೆ. ಕಾವೇರಿ ನದಿಯಲ್ಲಿ ಉಕ್ಕಿ ಹರಿಯುವ ನೀರಿನ ನಡುವೆ ಶೋಧಕಾರ್ಯಕ್ಕೆ ತೊಡಕು ಉಂಟಾದ ಹಿನ್ನೆಲೆಯಲ್ಲಿ ಅವರು ಹಿಂತಿರುಗಿರುವುದಾಗಿ ಡಿವೈಎಸ್ಪಿ ತಿಳಿಸಿದ್ದಾರೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ