ಹಂಪಿ ಉತ್ಸವದಲ್ಲಿ ಪ್ರವಾಸಿಗರ ಗಮನ ಸೆಳೆದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದ ಎತ್ತುಗಳ ಪ್ರದರ್ಶನ

KannadaprabhaNewsNetwork |  
Published : Mar 01, 2025, 01:05 AM ISTUpdated : Mar 01, 2025, 12:28 PM IST
ಹಂಪಿ ಉತ್ಸವದಲ್ಲಿನ ಎತ್ತುಗಳ ಪ್ರದರ್ಶನಕ್ಕೆ ಎತ್ತುಗೆ ಪೂಜೆ ಸಲ್ಲಿಸಿಜ ಸಚಿವ ಜಮೀರ್‌ ಅಹಮದ್‌ ಖಾನ್‌.ಎತ್ತುಗಳ ಪ್ರದರ್ಶನದಲ್ಲಿ ಗಮನ ಸೆಳೆದ ಹಳ್ಳಿಕಾರ್‌ ಹೋರಿ.ಎತ್ತುಗಳ ಪ್ರದರ್ಶನದಲ್ಲಿ ಮಲೆನಾಡು ಗಿಡ್ಡ ಎತ್ತುಗಳ ಪ್ರದರ್ಶನದಲ್ಲಿ ರೈತರಿಗೆ ವೈಯಕ್ತಿಕ ಹಣವನ್ನು ವೇದಿಕೆಯ ಮೇಲೆ ನೀಡಿದ ಸಚಿವ ಜಮೀರ್‌. | Kannada Prabha

ಸಾರಾಂಶ

ಹಂಪಿ ಉತ್ಸವದ ಅಂಗವಾಗಿ ಕಮಲಾಪುರದಲ್ಲಿ ಜಿಲ್ಲಾಡಳಿತ ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಹಳ್ಳಿಕಾರ್‌ ಹೋರಿ ಕಮಾಲ್‌, ಮಲೆನಾಡು ಗಿಡ್ಡ ಮಜಬೂತ್‌, ಹೊಂಗಾಲ್‌ ಹೋರಿ ಗಮನ ಸೆಳೆದವು.

ಚಂದ್ರು ಕೊಂಚಿಗೇರಿ

ಹಂಪಿ: ವಿಶ್ವವಿಖ್ಯಾತ ಹಂಪಿ ಉತ್ಸವದಲ್ಲಿ ರೈತರ ಬದುಕಿನೊಂದಿಗೆ ಅವಿನಭಾವ ಸಂಬಂಧ ಹೊಂದಿರುವ ಎತ್ತುಗಳ ಪ್ರದರ್ಶನ ಜನಮನ್ನಣೆಗೆ ಪಾತ್ರವಾಯಿತು. ಹಳ್ಳಿಕಾರ್‌ ಹೋರಿ ಕಮಾಲ್‌, ಮಲೆನಾಡು ಗಿಡ್ಡ ಮಜಬೂತ್‌, ಹೊಂಗಾಲ್‌ ಹೋರಿ ಗಮನ ಸೆಳೆದವು.

ಎತ್ತುಗಳ ಪ್ರದರ್ಶನವನ್ನು ಕಮಲಾಪುರದಲ್ಲಿ ಜಿಲ್ಲಾಡಳಿತ ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಈ ಪ್ರದರ್ಶನದಲ್ಲಿ ಹೊಸಪೇಟೆ, ಕಮಲಾಪುರ, ಮಲಪನಗುಡಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿರುವ ರೈತರು, ತಮ್ಮ ಎತ್ತುಗಳನ್ನು ಪುಷ್ಪಮಾಲೆಗಳಿಂದ ಅಲಂಕಾರ ಮಾಡಿಕೊಂಡು ಬಂದಿದ್ದರು. ಸ್ಪರ್ಧೆಯಲ್ಲಿ 10 ಜೋಡಿ ಎತ್ತುಗಳು, ಎರಡು ಹಸು, ಒಂದು ಹೋರಿ ಭಾಗವಹಿಸಿದ್ದವು.

ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್‌ ಅಹಮದ್‌ ಖಾನ್‌ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಎತ್ತುಗಳಿಗೆ ಅಗರಬತ್ತಿ ಬೆಳಗಿ ನಮಸ್ಕಾರ ಮಾಡಿದರು.

ಪ್ರಥಮ ಸ್ಥಾನ ಪಡೆದ ಎತ್ತಿಗೆ ₹10 ಸಾವಿರ, ದ್ವಿತೀಯ ಸ್ಥಾನಕ್ಕೆ ₹7500, ತೃತೀಯ ಸ್ಥಾನಕ್ಕೆ ₹5 ಸಾವಿರ ಬಹುಮಾನ ನೀಡಲಾಯಿತು. ಭಾಗವಹಿಸಿದ ಪ್ರತಿಯೊಂದು ಎತ್ತು, ಹಸುಗಳ ಮಾಲೀಕರಿಗೆ ಪ್ರಶಸ್ತಿ ಪತ್ರ ಮತ್ತು ಸಮಾಧಾನಕರ ಬಹುಮಾನ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್‌ ಅಹಮದ್‌ ಖಾನ್‌ ಅವರು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದ ರೈತರಿಗೆ ₹50 ಸಾವಿರ, ಭಾಗವಹಿಸಿದ ಪ್ರತಿಯೊಬ್ಬ ರೈತರಿಗೂ ₹10 ಸಾವಿರವನ್ನು ವೈಯಕ್ತಿಕವಾಗಿ ನೀಡಿ, ರೈತರನ್ನು ಪ್ರೋತ್ಸಾಹಿಸಿದರು.

ಎತ್ತುಗಳು, ಟಗರು ಮತ್ತು ಶ್ವಾನಗಳ ಪ್ರದರ್ಶನಕ್ಕೆ ಈ ಬಾರಿ ಉತ್ತಮ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಎಲ್ಲ ರೈತರಿಗೂ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಅದೇ ಸ್ಥಳದಲ್ಲೇ ರೈತರಿಗೆ ಊಟದ ವ್ಯವಸ್ಥೆ ಕೂಡಾ ಮಾಡಲಾಗಿತ್ತು.

ಹೊಸಪೇಟೆಯ ಮಂಜುನಾಥ ಎಂಬ ರೈತ ₹7 ಲಕ್ಷ ಮೌಲ್ಯದ ಹಳ್ಳಿಕಾರ್‌ ಎತ್ತುಗಳನ್ನು ಪ್ರದರ್ಶನಕ್ಕೆ ತಂದಿದ್ದರು. ಜತೆಗೆ 2 ವರ್ಷದ ಮಲೆನಾಡು ಗಿಡ್ಡ, ಆಂಧ್ರಪ್ರದೇಶ ಮೂಲದ ಹೊಂಗಾಲ್‌ ಹೋರಿ ಪ್ರದರ್ಶನಕ್ಕೆ ಹೆಚ್ಚು ಮೆರಗು ತಂದವು.ಶಾಸಕ ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌, ಜಿಪಂ ಸಿಇಒ ನೋಂಗ್ಜಾಯ್‌ ಮೊಹಮ್ಮದ್‌ ಅಲಿ ಅಕ್ರಮ್‌ ಷಾ, ಎಸ್ಪಿ ಶ್ರೀಹರಿಬಾಬು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಪೋಮ್‌ ಸಿಂಗ್‌ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಎತ್ತುಗಳಿಗೆ ಸಚಿವರ ಮುತ್ತು!: ಹಂಪಿ ಉತ್ಸವದಲ್ಲಿ ಆಯೋಜಿಸಿದ್ದ ಎತ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್‌ ಅಹಮದ್‌ ಖಾನ್‌, ಅಗರಬತ್ತಿ ಬೆಳಗಿ, ಹೂಮಾಲೆ ಹಾಕುವ ಜತೆಗೆ, ಎತ್ತುಗಳಿಗೆ ಹೆಂಗ್‌ ಇದೀಯಾಪ್ಪಾ... ಸೂಪರ್‌.. ಸೂಪರ್‌ ಎಂದು ಹಣೆಗೆ ಮುತ್ತಿಕ್ಕಿ ಖುಷಿಪಟ್ಟು ಮುಂದಕ್ಕೆ ಹೊರಟರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...