ತೋಟಗಾರಿಕೆ ಬೆಳೆಯಲ್ಲಿ ವೈಜ್ಞಾನಿಕ ಕ್ರಮ ಅನುಸರಿಸಿ

KannadaprabhaNewsNetwork | Published : Mar 1, 2025 1:05 AM

ಸಾರಾಂಶ

ಮಳೆ ನೀರು ಕೊಯ್ಲು ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಶಾಸಕ ಗೋಪಾ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಸುಧಾರಿತ ಬೇಸಾಯ ಪದ್ಧತಿಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಉತ್ತಮ ಫಸಲು ಪಡೆದು ರೈತರು ಆರ್ಥಿಕವಾಗಿ ಸದೃಢರಾಗಬಹುದು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ತಾಲೂಕಿನ ರಾಂಪುರ ಗ್ರಾಮದ ಎಸ್‌ಪಿಎಸ್‌ಆರ್ ಕಾಲೇಜಿನಲ್ಲಿ ಶುಕ್ರವಾರ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿದ್ದ ತೋಟಗಾರಿಕೆ ಬೆಳೆಗಳಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕೊಳವೆ ಬಾವಿ ಜಲ ಮರುಪೂರಣ ಮಳೆ ನೀರು ಕೊಯ್ಲು ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸರ್ಕಾರ ಪ್ರಸ್ತುತ ದಿನಗಳಲ್ಲಿ ತೋಟಗಾರಿಕೆ ಬೆಳೆ ಉತ್ತೇಜನಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ರೈತರು ಸಿಗುವಂತ ಸೌಲಬ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕೇವಲ ದೀರ್ಘಾವಧಿ ಬೆಳೆಗಳಿಗೆ ಮಾರು ಹೋಗಿ ನಷ್ಟಕ್ಕೀಡಾಗದೆ ತರಕಾರಿ ಬೆಳೆಗಳಿಗೆ ಉತ್ತೇಜನ ನೀಡಬೇಕು. ತರಕಾರಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಆಯಾ ಕಾಲಮಾನಕ್ಕೆ ತಕ್ಕಂತೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು. ಇಲಾಖೆಯಲ್ಲಿ ಮಾಹಿತಿ ಪಡೆದು ಕಡಿಮೆ ನೀರಿನಲ್ಲೂ ಉತ್ತಮ ಫಸಲು ಬರುವ ರೀತಿಯಲ್ಲಿ ಬೇಸಾಯ ಪದ್ಧತಿಗಳನ್ನು ನಿರ್ವಹಿಸಿಕೊಂಡಲ್ಲಿ ರೈತರು ಆರ್ಥಿಕವಾಗಿ ಸದೃಢರಾಗಬಹುದು ಎಂದರು.ಇದೇ ವೇಳೆ ಜಲತಜ್ಞ ದೇವರಾಜರೆಡ್ಡಿ ಮಾತನಾಡಿ, ಬಹು ಹಿಂದುಳಿದ ಈ ಭಾಗ ಸದಾ ಬರಕ್ಕೆ ತುತ್ತಾಗುತ್ತದೆ. ಸಾವಿರ ಅಡಿ ಆಳ ಬೋರ್‌ವೆಲ್ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ. ಇಂತ ಸಂದರ್ಭದಲ್ಲಿ ರೈತರು ಕೊಳವೆ ಬಾವಿಗೆ ಜಲ ಮರುಪೂರಣ ಮಾಡುವಂತ ಪದ್ಧತಿಗಳನ್ನು ಅನುಸರಿಸಬೇಕು.

ಮಳೆಗಾಲದಲ್ಲಿ ಜಮೀನಿಗೆ ಬಿದ್ದ ಮಳೆ ನೀರನ್ನು ಬೋರ್ ವೆಲ್‌ಗೆ ಮರು ಪೂರಣ ಮಾಡಿದ್ದಲ್ಲಿ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗುವುದನ್ನು ತಡೆಯಬಹುದು. ಬೇಡಿಕೆಯಲ್ಲಿಯೂ ಕೊಳವೆ ಬಾವಿ ಬತ್ತದಂತೆ ನೋಡಿಕೊಳ್ಳಬಹುದು. ಹಾಗಾಗಿ ಪ್ರತಿ ರೈತರು ಜಲ ಮರು ಪೂರಣ ಮಾಡುವಂತ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಇದೆ ವೇಳೆ ಶಾಸಕ ಎನ್.ವೈ.ಗೋಪಾಲಕೃಷ್ಣ ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಿದರು.

ಸಂದರ್ಭದಲ್ಲಿ ಬಿ.ಜಿ.ಕೆರೆ ಪ್ರಗತಿ ಪರ ರೈತ ಎಸ್.ಸಿ.ವೀರಭದ್ರಪ್ಪ, ಸಹಾಯಕ ನಿರ್ದೇಶಕ ಕೆ.ಎಸ್.ಸುಧಾಕರ್ ಇದ್ದರು.

ರೈತರಿಗೆ ಜಲ ಮರುಪೂರಣ ಕುರಿತು ತರಬೇತಿ

ಮೊಳಕಾಲ್ಮೂರು ಬಿ.ಜಿ.ಕೆರೆ ಗ್ರಾಮದ ವಸುಂದರ ಕೃಷಿ ಕ್ಷೇತ್ರದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕೊಳವೆ ಬಾವಿ ಜಲ ಮರುಪೂರಣ ಮಳೆ ನೀರು ಕೊಯ್ಲು ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರಿಗೆ ತೋಟಗಾರಿಕೆ ಬೆಳೆಗಳ ಕುರಿತು ಮತ್ತು ಜಲ ಮರುಪೂರಣ ಕುರಿತು ತರಬೇತಿ ನೀಡಲಾಯಿತು.

Share this article