ಮಾ.1 ರಿಂದ 20ರವರೆಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ : ಸೂಸುತ್ರವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮ

KannadaprabhaNewsNetwork | Updated : Mar 01 2025, 07:40 AM IST

ಸಾರಾಂಶ

ಬಾಗಲಕೋಟೆ ಜಿಲ್ಲೆಯಲ್ಲಿ ಮಾ.1 ರಿಂದ 20ರವರೆಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದ್ದಾರೆ.

  ಬಾಗಲಕೋಟೆ : ಜಿಲ್ಲೆಯಲ್ಲಿ ಮಾ.1 ರಿಂದ 20ರವರೆಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಸೂಸುತ್ರವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 162 ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಾಗಲಕೋಟೆ 9, ಗುಳೇದಗುಡ್ಡ 1, ಬಾದಾಮಿ 3, ಹುನಗುಂದ 4, ಇಳಕಲ್ಲ 3, ಬೀಳಗಿ 4, ಮುಧೋಳ 5, ಜಮಖಂಡಿ 6 ಹಾಗೂ ರಬಕವಿ ಬನಹಟ್ಟಿ 6 ಸೇರಿದಂತೆ 41 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. 26427 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 24573 ಹೊಸ, 678 ಬಾಹ್ಯ ಮತ್ತು 1176 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ.ಪರೀಕ್ಷಾ ಕೇಂದ್ರಕ್ಕೆ 43 ಮುಖ್ಯ ಅಧೀಕ್ಷಕರು, 41 ಉಪಮುಖ್ಯ ಅಧೀಕ್ಷಕರು, 86 ಸ್ಥಾನಿಕ ಜಾಗೃತ ದಳದ ಸದಸ್ಯರು, 24 ಮಾರ್ಗಾಧಿಕಾರಿಗಳು ಹಾಗೂ 1091 ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಹ ಮುಖ್ಯ ಅಧೀಕ್ಷಕರು ಹಾಗೂ ಇತರೆ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿಭಾಯಿಸುವುದರ ಜೊತೆಗೆ ಯಾವುದೇ ಅಜಾಗರೂಕತೆ ನಡೆಯದಂತೆ ಜಾಗೃತಿ ವಹಿಸಲು ಸೂಚನೆ ನೀಡಲಾಗಿದೆ.

ಪರೀಕ್ಷಾ ಕೇಂದ್ರದಲ್ಲಿನ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಫೋನ್, ಇ-ಕ್ಯಾಮರಾ, ಲ್ಯಾಪಟಾಪ್ ತರುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಚಟುವಟಿಕೆ ನಡೆಯದಂತೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಯಾವುದೇ ರೀತಿಯ ಅಹಿತಕರ ಘಟನೆಗಳು ಪರೀಕ್ಷೆಯಲ್ಲಿ ಸಂಭವಿಸದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.

ಪರೀಕ್ಷಾ ವಿಷಯದ ಉಪನ್ಯಾಸಕರು ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದಲ್ಲಿ ಇರದಂತೆ ಕ್ರಮಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶ ನಿಷೇಧಿತ ಪ್ರದೇಶವೆಂದು ಆದೇಶಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಝರಾಕ್ಸ್‌ ಅಂಗಡಿ ಮುಚ್ಚಲು ಆದೇಶದಲ್ಲಿ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷಾ ವೇಳಾಪಟ್ಟಿ: ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಪರೀಕ್ಷೆ ನಡೆಯಲಿದ್ದು, ಮಾ.1ರಂದು ಕನ್ನಡ, 3ರಂದು ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, 5ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, 7ರಂದು ಇತಿಹಾಸ, ಭೌತಶಾಸ್ತ್ರ, 10ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, 12ರಂದು ರಸಾಯನಶಾಸ್ತ್ರ, 13ರಂದು ಅರ್ಥಶಾಸ್ತ್ರ, 15ರಂದು ಇಂಗ್ಲಿಷ್‌, 17ರಂದು ಭೂಗೋಳಶಾಸ್ತ್ರ, 18ರಂದು ಜೀವಶಾಸ್ತ್ರ, ಸಮಾಜಶಾಸ್ತ್ರ, ಗಣಕ ವಿಜ್ಞಾನ, 20ರಂದು ಹಿಂದಿ ವಿಷಯ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು.

Share this article