ಹಾವೇರಿ: ಕೆಲವೇ ದಿನಗಳಲ್ಲಿ ಶುರುವಾಗಲಿರುವ ರಾಜ್ಯ ಬಜೆಟ್ ಅವೇಶನದಲ್ಲಿ ಸರ್ಕಾರ ಹಾವೇರಿ ವಿಶ್ವವಿದ್ಯಾಲಯ ಮುಚ್ಚುವುದಿಲ್ಲ ಎಂಬ ಅಧಿಕೃತ ಆದೇಶವನ್ನು ಹೊರಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲು ಸಿದ್ಧರಿದ್ದು, ಅಗತ್ಯಬಿದ್ದರೆ ಹಾವೇರಿ ಜಿಲ್ಲೆ ಬಂದ್‌ಗೆ ಕರೆ ನೀಡಿ ಹೋರಾಟ ನಡೆಸಲಾಗುವುದು ಎಂದು ಹಾವೇರಿ ವಿವಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಹಾವೇರಿ ವಿವಿ ಸೇರಿದಂತೆ ರಾಜ್ಯದ ಒಂಬತ್ತು ವಿವಿಗಳನ್ನು ಅನುದಾನದ ನೆಪವೊಡ್ಡಿ ಮುಚ್ಚಲು ತೀರ್ಮಾನಿಸಿರುವುದನ್ನು ಖಂಡಿಸಿ ಈಗಾಗಲೇ ಹಾವೇರಿ ವಿವಿ ಉಳಿವಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಹಾವೇರಿ ವಿವಿ ಮುಚ್ಚದಂತೆ ಹಕ್ಕೊತ್ತಾಯ ಮಂಡಿಸಿದ್ದಾರೆ.
ಹಾವೇರಿ ವಿವಿ ಉಳಿಸಿ ಹೋರಾಟ ಸಮಿತಿಯನ್ನು ರಚಿಸಿಕೊಂಡು ಜಿಲ್ಲೆಯ ಜನಪ್ರತಿನಿಧಿಗಳಿಗೆ ಖುದ್ದಾಗಿ ಮನವಿ ಸಲ್ಲಿಸಿದ್ದೇವೆ. ವಿವಿ ಮುಚ್ಚದಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆ ಶೀಘ್ರದಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಇದರಲ್ಲಿ ಹಾವೇರಿ ವಿವಿ ಮುಚ್ಚಲ್ಲ ಎಂಬ ಅಧಿಕೃತ ಆದೇಶವನ್ನು ಹೊರಡಿಸುವಂತೆ ಒತ್ತಾಯಿಸಿದರು. ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯ ಜಿಲ್ಲೆಯ ರೈತರ ಮಕ್ಕಳು ಉನ್ನತ ಶಿಕ್ಷಣ ಕಲಿಯಲು ಬಹಳ ಅನುಕೂಲವಿದೆ. ಇಷ್ಟುದಿನ ದೂರದ ಬೇರೆ ಬೇರೆ ವಿವಿಗಳಿಗೆ ಹೋಗಬೇಕಾಗಿತ್ತು. ಎರಡು ವರ್ಷಗಳಿಂದ ಇಲ್ಲಿಯೇ ವಿವಿ ಆಗಿರುವುದರಿಂದ ವಿದ್ಯಾರ್ಥಿನಿಯರಿಗೂ ಅನುಕೂಲವಾಗಿದೆ. ಸರ್ಕಾರ ಅನುದಾನ ನೆಪವೊಡ್ಡಿ ಬಂದ್ ಮಾಡಿಸಲು ಹೊರಟಿರುವ ಕ್ರಮ ಸರಿಯಲ್ಲ. ವಿವಿ ಬಂದ್ ಮಾಡಿದ್ದೇಯಾದರೆ ಹಾವೇರಿ ಜಿಲ್ಲೆ ಬಂದ್ ಕರೆ ನೀಡಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪರಿಮಳಾ ಜೈನ್, ಸತೀಶ ಎಂ.ಬಿ., ಉಡಚಪ್ಪ ಮಾಳಗಿ, ಶೆಟ್ಟಿ ವಿಭೂತಿ, ಎ.ಎಂ. ಪಟವೇಗಾರ, ಎಂ. ಆಂಜನೇಯ, ಬಸವರಾಜ ಎಸ್., ಹೊನ್ನಪ್ಪ ಮರೆಮ್ಮನವರ, ಶಿವಯೋಗಿ ಹೊಸಗೌಡ್ರ, ಸುನೀತಾ ಲಮಾಣಿ ಇದ್ದರು.ಹೊಸ ವಿಶ್ವವಿದ್ಯಾಲಯ ಮುಂದುವರಿಕೆಗೆ ಆಗ್ರಹಹಾವೇರಿ: ಈ ಹಿಂದಿನ ಸರ್ಕಾರಗಳು ಬಡ ಹಾಗೂ ಗ್ರಾಮೀಣ ಭಾಗದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ರಾಜ್ಯದಲ್ಲಿ 9 ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಿದ್ದು, ಅದನ್ನು ಮುಚ್ಚುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಯಾವುದೇ ಕಾರಣಕ್ಕೂ ಹೊಸ ವಿಶ್ವವಿದ್ಯಾಲಯವನ್ನು ಮುಚ್ಚದೇ ಅಗತ್ಯ ಮೂಲ ಸೌಕರ್ಯಗಳನ್ನು ನೀಡಿ ಮುಂದುವರಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ ಸಿದ್ದರಾಜ ಕಲಕೋಟಿ ಆಗ್ರಹಿಸಿದ್ದಾರೆ.ಈ ಕುರಿತು ಪ್ರಕರಣೆ ನೀಡಿರುವ ಅವರು, 1997ರಲ್ಲಿ ತಾವು ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯನಿದ್ದಾಗ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವಂತ ಉಳಿದ ಏಳು ಜಿಲ್ಲೆಗಳಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಿಸಬೇಕೆಂದು ಸರ್ವಾನು ಮತದಿಂದ ಅಂದು ಒಪ್ಪಿಗೆ ಸೂಚಿಸಿ ಸ್ನಾತಕೋತ್ತರ ಕೇಂದ್ರಗಳನ್ನು ತೆರೆಯಲಾಯಿತು. ಸ್ನಾತಕೋತ್ತರ ಕೇಂದ್ರಗಳನ್ನು ಹಿಂದಿನ ಸರ್ಕಾರ ವಿಶ್ವವಿದ್ಯಾಲಯಗಳಾಗಿ ಮಾರ್ಪಡಿಸಿ ವಿವಿಗಳಿಗೆ ಬೇಕಾಗಿರುವಂತ ಹಣಕಾಸಿನ ನೆರವನ್ನು ನೀಡುತ್ತಾ ಬಂದಿದ್ದವು. ಇನ್ನೂ ಹೆಚ್ಚಿನ ರೀತಿಯ ಅನುಕೂಲ ಬಡ ವಿದ್ಯಾರ್ಥಿಗಳಿಗೆ ಆಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಪ್ರಾರಂಭಿಸಲಾಯಿತು. ಆದರೆ ಈಗಿನ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳಿಗೆ ಹಣ ಹೊಂದಿಸಲಾಗದೆ ವಿಶ್ವವಿದ್ಯಾಲಯಗಳನ್ನು ಮುಚ್ಚಿಬಿಡಬೇಕೆನ್ನುವ ನಿರ್ಧಾರಕ್ಕೆ ಬಂದಿರುವುದು ಬಡ ವಿದ್ಯಾರ್ಥಿಗಳಿಗೆ ಸರ್ಕಾರ ಮಾಡುತ್ತಿರುವ ಘೋರ ಅನ್ಯಾಯವಾಗಿದೆ.ಸರ್ಕಾರಗಳು ಯಾವೊಬ್ಬ ವಿದ್ಯಾರ್ಥಿಯು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳನ್ನ ಕರೆದುಕೊಂಡು ಬಂದು ಶಿಕ್ಷಣ ನೀಡುತ್ತಿವೆ. ಈ ವ್ಯವಸ್ಥೆ ಸ್ನಾತಕೋತ್ತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗಬೇಕು. ದೂರದ ಊರಿಗೆ ಹೋಗಿ ವಿದ್ಯಾಭ್ಯಾಸ ಮಾಡಲು ಆಗದಂತ ವಿದ್ಯಾರ್ಥಿಗಳಿಗೆ ಈ ಕೇಂದ್ರಗಳು ಅವರ ಜೀವನದ ಪುಣ್ಯದ ಕೇಂದ್ರಗಳಾಗಿದ್ದವು. ಆದರೆ ಸರ್ಕಾರ ದಿಢೀರ್ ಆಗಿ ಇವುಗಳನ್ನ ಮುಚ್ಚುತ್ತಿರುವುದು ಒಂದು ರೀತಿಯ ಸರ್ವಾಧಿಕಾರಿ ಧೋರಣೆಯಾಗಿದೆ. ಈಗಿರುವ ಸರ್ಕಾರ ಅಧಿಕಾರ ಹಿಡಿಯುವ ಆಸೆಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಆ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸದೆ ರಾಜ್ಯದ ಬೊಕ್ಕಸದಲ್ಲಿ ಹಣ ಸಂಪೂರ್ಣವಾಗಿ ಖಾಲಿಯಾಗಿದೆ. ಆ ಕಾರಣಕ್ಕೋಸ್ಕರ ಶಿಕ್ಷಣ ನೀಡುವಂತ ವಿದ್ಯಾ ಕೇಂದ್ರಗಳನ್ನು ಮುಚ್ಚಲು ಹೊರಟಿರುವುದು ಖಂಡನೀಯ ಎಂದಿದ್ದಾರೆ.