ಹಾಳುಬಾವಿಗೆ ಬಿದ್ದ ಜಮ್ಮಾಪುರ ಯುವಕ: ರಕ್ಷಣೆ

KannadaprabhaNewsNetwork | Published : Mar 1, 2025 1:05 AM

ಸಾರಾಂಶ

ಮಹಾ ಶಿವರಾತ್ರಿ ಹಬ್ಬದ ದಿನವೇ ದೇವಸ್ಥಾನ ಬಳಿ ಹೋಗುತ್ತಿದ್ದ ಯುವಕನೊಬ್ಬ ನೀರಿಲ್ಲದ 60 ಅಡಿ ಪಾಳುಬಾವಿಗೆ ಆಯತಪ್ಪಿ ಬಿದ್ದ ಘಟನೆ ತಾಲೂಕಿನ ಜಮ್ಮಾಪುರ ಗ್ರಾಮದಲ್ಲಿ ನಡೆದಿದ್ದು, ಯುವಕನನ್ನು ಅಗ್ನಿಶಾಮಕ ದಳದ ಅಧಿಕಾರಿ- ಸಿಬ್ಬಂದಿ ತಂಡ ರಕ್ಷಿಸಿದೆ.

- ನಿರುಪಯುಕ್ತ ಬಾವಿಗಳ ಮುಚ್ಚಲು, ಜಾಲರಿ ಅಳವಡಿಕೆಗೆ ಸೂಚನೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾ ಶಿವರಾತ್ರಿ ಹಬ್ಬದ ದಿನವೇ ದೇವಸ್ಥಾನ ಬಳಿ ಹೋಗುತ್ತಿದ್ದ ಯುವಕನೊಬ್ಬ ನೀರಿಲ್ಲದ 60 ಅಡಿ ಪಾಳುಬಾವಿಗೆ ಆಯತಪ್ಪಿ ಬಿದ್ದ ಘಟನೆ ತಾಲೂಕಿನ ಜಮ್ಮಾಪುರ ಗ್ರಾಮದಲ್ಲಿ ನಡೆದಿದ್ದು, ಯುವಕನನ್ನು ಅಗ್ನಿಶಾಮಕ ದಳದ ಅಧಿಕಾರಿ- ಸಿಬ್ಬಂದಿ ತಂಡ ರಕ್ಷಿಸಿದೆ.

ಜಮ್ಮಾಪುರದ ಕುಮಾರ ನಾಯ್ಕ ಬುಧವಾರ ರಾತ್ರಿ ನಡೆದುಹೋಗುತ್ತಿದ್ದರು. ಈ ವೇಳೆ ಶ್ರೀ ಆಂಜನೇಯ ದೇವಸ್ಥಾನದ ಬಳಿ ಇದ್ದ ಪಾಳುಬಾವಿಗೆ ಬಿದ್ದಿದ್ದಾರೆ. 60 ಅಡಿ ಆಳದ ಬಾವಿಯಾಗಿದ್ದರಿಂದ ಆತನ ಸೊಂಟಕ್ಕೆ ತೀವ್ರ ಪೆಟ್ಟಾಗಿದೆ. ತಕ್ಷಣವೇ ಗ್ರಾಮಸ್ಥರು ಆಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.

ಅಗ್ನಿಶಾಮಕ ದಳದ ಅಧಿಕಾರಿ ಎನ್.ನಾಗೇಶ ಹಾಗೂ ತಂಡ ಜಮ್ಮಾಪುರ ಗ್ರಾಮದ ಪಾಳುಬಾವಿ ಬಳಿ ಬಂದು, ಅದರಲ್ಲಿ ಬಿದ್ದು, ಸೊಂಟಕ್ಕೆ ತೀವ್ರ ಪೆಟ್ಟಾಗಿದ್ದ ಕುಮಾರ ನಾಯ್ಕನನ್ನು ಸುರಕ್ಷಿತವಾಗಿ ಮೇಲಕ್ಕೆ ತಂದು, ರಕ್ಷಿಸಲಾಗಿದೆ. ಗಾಯಾಳು ಕುಮಾರ ನಾಯ್ಕಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

- - -

ಬಾಕ್ಸ್‌* ಪಾಳುಬಾವಿ ಮುಚ್ಚಿಸಲು ಕಟ್ಟುನಿಟ್ಟಿನ ಸೂಚನೆ ಗ್ರಾಮಸ್ಥರು ಪಾಳು ಬಾವಿ ಮುಚ್ಚಿಸಲು ಗುಡಾಳ್ ಗ್ರಾಪಂ ಪಿಡಿಒ ಅವರಿಗೆ ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ಗ್ರಾಪಂ ಇನ್ನೊಂದು ವಾರದಲ್ಲೇ ಪಾಳುಬಾವಿಗೆ ಜಾಲರಿ ಹಾಕಿ, ಯಾವುದೇ ಅಪಾಯ ಆಗದಂತೆ ಮುಚ್ಚುವುದಾಗಿ ಪ್ರತಿಕ್ರಿಯಿಸಿದೆ. ಘಟನೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಇರುವ ತೆರೆದ ಬಾವಿ, ಪಾಳುಬಾವಿಗಳಿಗೆ ಜಾಲರಿ ಹಾಕಿ, ಯಾವುದೇ ಅಪಾಯ, ಅನಾಹುತ ಆಗದಂತೆ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ.ಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

- - - (ಸಾಂದರ್ಭಿಕ ಚಿತ್ರ)

Share this article