ಸರ್ಕಾರದ ವೈಫಲ್ಯದಿಂದ ಜನರು ಮೈಕ್ರೋ ಫೈನಾನ್ಸ್‌ ಕೂಪದಲ್ಲಿ ಸಿಲುಕಿದ್ದಾರೆ : ಕೆ.ಆರ್‌.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್

KannadaprabhaNewsNetwork | Updated : Mar 01 2025, 12:41 PM IST

ಸಾರಾಂಶ

 ಸರ್ಕಾರಿ ಕಚೇರಿಗಳು ಭ್ರಷ್ಟಾಚಾರ ಮತ್ತು ಅಕ್ರಮಗಳ ಕೂಪವಾಗಿವೆ. ಆಡಳಿತ ಕುಸಿದಿರುವುದರಿಂದ ಜನರು ಮೈಕ್ರೋ ಫೈನಾನ್ಸ್‌ನಂತಹ ಸಮಸ್ಯೆಗಳಲ್ಲಿ ಸಿಲುಕಿಕೊಂಡು ನರಳುತ್ತಿದ್ದಾರೆ ಎಂದು ಕೆ.ಆರ್‌.ಎಸ್. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲೆಯ ಉಸ್ತುವಾರಿ ದೀಪಕ್ ತಿಳಿಸಿದರು. 

 ಹಾಸನ : ರಾಜ್ಯ ಸರ್ಕಾರದ ಆಡಳಿತದಲ್ಲಿ ದುರಾಡಳಿತ, ಅಕ್ರಮ, ಭ್ರಷ್ಟಾಚಾರ ಮಿತಿಮೀರಿದ್ದು ಜನರು ಅತಂತ್ರರಾಗಿದ್ದಾರೆ. ಸರ್ಕಾರಿ ಕಚೇರಿಗಳು ಭ್ರಷ್ಟಾಚಾರ ಮತ್ತು ಅಕ್ರಮಗಳ ಕೂಪವಾಗಿವೆ. ಆಡಳಿತ ಕುಸಿದಿರುವುದರಿಂದ ಜನರು ಮೈಕ್ರೋ ಫೈನಾನ್ಸ್‌ನಂತಹ ಸಮಸ್ಯೆಗಳಲ್ಲಿ ಸಿಲುಕಿಕೊಂಡು ನರಳುತ್ತಿದ್ದಾರೆ ಎಂದು ಕೆ.ಆರ್‌.ಎಸ್. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲೆಯ ಉಸ್ತುವಾರಿ ದೀಪಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಮೈಕ್ರೋ ಫೈನಾನ್ಸ್ ಸಾಲ ಕೊಡಿಸುವ, ಹೆಚ್ಚಿನ ಬಡ್ಡಿ ನೀಡುವ ನೆಪದಲ್ಲಿ ಜನರನ್ನು ವಂಚಿಸುತ್ತಿದೆ. ಸರ್ಕಾರದ ವೈಫಲ್ಯದಿಂದ ಜನರು ಈ ದುಸ್ಥಿತಿಯನ್ನು ಅನುಭವಿಸುವಂತಾಗಿದೆ. ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸಬೇಕಾದ ಸರ್ಕಾರವು, ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದ್ದು, ಜನರು ಈ ಸಮಸ್ಯೆಗಳಿಂದ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಸರ್ಕಾರದಲ್ಲಿನ ದುರಾಡಳಿತದಿಂದ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ, ವಿದ್ಯಾರ್ಥಿ ವೇತನಕ್ಕೆ ಹಣವಿಲ್ಲದೆ ಪರದಾಡುತ್ತಿದ್ದಾರೆ, ಆದರೆ ದುಂದುವೆಚ್ಚಕ್ಕೆ, ಪ್ರಚಾರಕ್ಕೆ ಯಾವುದೇ ಕಡಿವಾಣವಿಲ್ಲ. ಪ್ರತಿದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗುತ್ತಿದೆ, ಪ್ರಗತಿ ಮಾತ್ರ ಶೂನ್ಯ ಎಂದರು.

ಮತ್ತೊಂದೆಡೆ, ಮುಖ್ಯಮಂತ್ರಿ ಕಚೇರಿಯನ್ನು 2.5 ಕೋಟಿ ರು. ಖರ್ಚು ಮಾಡಿ ನವೀಕರಿಸಲಾಗಿದೆ. ಈಗ ಮುಖ್ಯಮಂತ್ರಿ ನಿವಾಸ "ಕಾವೇರಿ " ಮತ್ತು ಉಪ ಮುಖ್ಯಮಂತ್ರಿ ಅವರ ಕಚೇರಿ ನವೀಕರಣವನ್ನು 3.5 ಕೋಟಿ ರು. ವೆಚ್ಚದಲ್ಲಿ ಮಾಡಲು ಮುಂದಾಗಿದ್ದಾರೆ. ರಾಜ್ಯದ ನೈಸರ್ಗಿಕ ಸಂಪತ್ತನ್ನು ಮಾರಿ ಆಡಳಿತ ನಡೆಸುವ ದುಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇದೆ. ಇದರ ಜೊತೆಗೆ ಒಂದರ ಮೇಲೊಂದು ಹಗರಣಗಳು ಹೊರಬರುತ್ತಿವೆ ಎಂದು ದೂರಿದರು. ಇನ್ನು ಜನರು ನೆಮ್ಮದಿಯಿಂದ ಬದುಕುವಂತಹ ಸ್ಥಿತಿ ಇಲ್ಲವಾಗಿದ್ದು, ನಿರುದ್ಯೋಗ, ಭ್ರಷ್ಟಾಚಾರದಿಂದ ಕಂಗೆಟ್ಟಿದ್ದಾರೆ. ಕೆಪಿಎಸ್ಸಿಯು ಒಂದು ಪ್ರಶ್ನೆ ಪತ್ರಿಕೆಯನ್ನು ಕನ್ನಡದಲ್ಲಿ ಮಾಡಲಾಗದಂತಹ ದುಸ್ಥಿತಿಯನ್ನು ತಲುಪಿದೆ.

 ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಮುನ್ನ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿತ್ತು, ಆದರೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಕೂಡ ಈ ಬಗ್ಗೆ ಚಕಾರವಿಲ್ಲ. ನ್ಯಾಯಾಲಯದ ಆದೇಶಗಳನ್ನು ಪಾಲಿಸದೆ, ಆದೇಶಗಳಿಗೆ ಬೆಲೆ ಇಲ್ಲದಂತಾಗಿದೆ ಎಂದರು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಗೆ ಮತ್ತು ಮಹಾನಗರಪಾಲಿಕೆಗಳಿಗೆ ಚುನಾವಣೆ ನಡೆಸದೇ ವರ್ಷಗಳೇ ಕಳೆದಿವೆ, ಹೀಗಿರಬೇಕಾದರೆ ಜನರಿಗೆ ಯಾವ ರೀತಿಯಲ್ಲಿ ಆಡಳಿತ ನೀಡಲು ಸಾಧ್ಯ. ಚುನಾವಣೆಗಳನ್ನು ನಡೆಸಬೇಕಾದ ಇಲಾಖೆಗಳು ಏನು ಕೆಲಸ ಮಾಡುತ್ತಿವೆ ಎಂದು ತಿಳಿಯುತ್ತಿಲ್ಲ ಎಂದು ದೂರಿದರು.

ರಾಜ್ಯ ಸರ್ಕಾರವು ಇನ್ವೆಸ್ಟ್ ಕರ್ನಾಟಕ ಹೆಸರಿನಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಕೋಟ್ಯಂತರ ಹಣ ಖರ್ಚು ಮಾಡಿದೆ. ಆದರೆ, ರಾಜ್ಯದಲ್ಲಿ ಉದ್ಯಮಗಳನ್ನು ಸ್ಥಾಪಿಸಿ, ಶ್ರಮದಿಂದ ಬೆಳೆದಿರುವ ಉದ್ಯಮಿಗಳನ್ನು ಜಿಲ್ಲಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಹೀನಾಯವಾಗಿ ಕಾಣುತ್ತಾರೆ ಮತ್ತು ಮಂತ್ರಿಗಳ ಕಚೇರಿಯಿಂದ ಕಮಿಷನ್ ಬೇಕೆಂದು ಫೋನ್ ಮಾಡಲಾಗುತ್ತದೆ. ರಾಜ್ಯದ ಆಡಳಿತ ಮತ್ತು ಜನರ ಪರಿಸ್ಥಿತಿ ಹೀಗಿರಬೇಕಾದರೆ, ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ. ದಿನಬೆಳಗಾದರೆ ಈ ಬಗ್ಗೆಯೇ ಚರ್ಚೆ, ಸಭೆಗಳು ಮತ್ತು ಪಾರ್ಟಿಗಳು ನಡೆಸುತ್ತಿದ್ದಾರೆ. 

ಇನ್ನು ಇವನ್ನು ಎತ್ತಿ ತೋರಿಸಬೇಕಾದ ವಿರೋಧ ಪಕ್ಷಗಳು ಕೂಡ ಕಚ್ಚಾಟದಲ್ಲಿ ಮುಳುಗಿವೆ. ಇದು ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳು ಬಹಳ ದುರ್ಬರವಾಗಿರಲಿವೆ. ಇದನ್ನು ಮನಗಂಡು, ತಕ್ಷಣವೇ ಆಡಳಿತ ಮತ್ತು ವಿರೋಧ ಪಕ್ಷಗಳು ಗಂಭೀರವಾಗಿ ಕೆಲಸ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂದಿನ ಬಜೆಟ್ ಬಹುತೇಕ ಕೊನೆಯ ಅವಕಾಶ ಆಗಲಿದೆ. ಆದ್ದರಿಂದ ಅವರು ಈ ಬಗ್ಗೆ ತಕ್ಷಣವೇ ಗಮನ ಹರಿಸಬೇಕು ಎಂದು ಕೆಆರ್‌ಎಸ್ ಪಕ್ಷ ಆಗ್ರಹಿಸುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಆರ್.ಎಸ್. ಪಕ್ಷದ ರಾಜ್ಯ ಉಪಾಧ್ಯಕ್ಷ ಮಂಜುನಾಥ್, ಅರಕಲಗೂಡು ತಾಲೂಕು ಅಧ್ಯಕ್ಷ ದೇವರಾಜು, ಜಿಲ್ಲಾಧ್ಯಕ್ಷ ಉಮೇಶ್ ಬೆಳಗುಂಬ ಇತರರು ಉಪಸ್ಥಿತರಿದ್ದರು.

Share this article