ಹಂಪಿ ಉತ್ಸವದ ವಸ್ತು ಪ್ರದರ್ಶನದಲ್ಲಿ ಏಕೈಕ ಪುಸ್ತಕ ಮಳಿಗೆ

KannadaprabhaNewsNetwork |  
Published : Mar 01, 2025, 01:05 AM IST
ಹಂಪಿ ಉತ್ಸವದ ವಸ್ತು ಪ್ರದರ್ಶನದಲ್ಲಿ ಹಂಪಿ ಕನ್ನಡ ವಿವಿಯ ಏಕೈಕ ಪುಸ್ತಕ ಮಳಿಗೆ | Kannada Prabha

ಸಾರಾಂಶ

ಇಡೀ ವಸ್ತು ಪ್ರದರ್ಶನದಲ್ಲಿ ಈ ಬಾರಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪುಸ್ತಕ ಮಳಿಗೆ ಬಿಟ್ಟರೆ ಮತ್ಯಾವ ಪುಸ್ತಕ ಮಾರಾಟಗಾರರು ಆಗಮಿಸಿಲ್ಲ. ಮಳಿಗೆಗಳ ತುಂಬೆಲ್ಲ ಮಹಿಳಾ ಸ್ವ ಸಹಾಯ ಸಂಘದ ಉತ್ಪನ್ನಗಳು, ಮಾರಾಟ ಮತ್ತು ಪ್ರದರ್ಶನಗಳದ್ದೇ ಸಿಂಹಪಾಲು.

ಹಂಪಿ: ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಎಲ್ಲ ವರ್ಗದ ಜನ ಆಗಮಿಸುತ್ತಿದ್ದು, ವಿಜಯನಗರ ಗತ ಕಾಲದ ಘಟನೆಗಳ ಅಧ್ಯಯನ ಮಾಡುವ ಹಾಗೂ ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ ಈ ಬಾರಿ ಹಂಪಿ ಉತ್ಸವ ನಿರಾಸೆ ಮೂಡಿಸಿದೆ.

ಹೌದು, ಇಡೀ ವಸ್ತು ಪ್ರದರ್ಶನದಲ್ಲಿ ಈ ಬಾರಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪುಸ್ತಕ ಮಳಿಗೆ ಬಿಟ್ಟರೆ ಮತ್ಯಾವ ಪುಸ್ತಕ ಮಾರಾಟಗಾರರು ಆಗಮಿಸಿಲ್ಲ. ಮಳಿಗೆಗಳ ತುಂಬೆಲ್ಲ ಮಹಿಳಾ ಸ್ವ ಸಹಾಯ ಸಂಘದ ಉತ್ಪನ್ನಗಳು, ಮಾರಾಟ ಮತ್ತು ಪ್ರದರ್ಶನಗಳದ್ದೇ ಸಿಂಹಪಾಲು.

ಕಳೆದ ಬಾರಿ ಹಂಪಿ ಉತ್ಸವದಲ್ಲಿ ಪ್ರತಿ ಪುಸ್ತಕ ಮಳಿಗೆ ಹಾಕುವ ಮಾಲೀಕರಿಗೆ ಅತಿ ಹೆಚ್ಚು ಶುಲ್ಕ ಪಾವತಿ ಮಾಡಿದ್ದರು. ಆದರೆ ಕಳೆದ ಬಾರಿ ಪುಸ್ತಕಗಳ ಮಾರಾಟ ಹೇಳಿಕೊಳ್ಳುವಂತಹ ಸ್ಥಿತಿ ಇರಲಿಲ್ಲ. ಪ್ರತಿ ಹಂಪಿ ಉತ್ಸವಕ್ಕೂ ಬೆಂಗಳೂರಿನ ಸಪ್ನಾ ಬುಕ್‌ ಹೌಸ್‌, ಲಕ್ಷ್ಮೀ ಮುದ್ರಣಾಲಯ, ಲಡಾಯಿ ಪ್ರಕಾಶನ ಹೀಗೆ ಹತ್ತಾರು ಪ್ರಕಾಶನಗಳ ಮಳಿಗೆಗಳು ಇರುತ್ತಿದ್ದವು.

ಈ ಬಾರಿಯೂ ಪುಸ್ತಕ ಮಳಿಗೆಗೆ ₹5 ಸಾವಿರ ಶುಲ್ಕ ವಿಧಿಸಿದ್ದರು. ಆದರೆ ಹಂಪಿ ವಿವಿಯ ಪುಸ್ತಕ ಮಳಿಗೆಗೆ ಉಚಿತ ಮಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದ ಪರಿಣಾಮ, ಈ ಬಾರಿ ಉಚಿತವಾಗಿ ಮಳಿಗೆ ನೀಡಿದ್ದಾರೆ. ಆದರೆ ಪುಸ್ತಕಪ್ರೇಮಿಗಳ ಅಭಿರುಚಿಗೆ ತಕ್ಕಂತೆ ಪುಸ್ತಕಗಳು ಲಭ್ಯತೆ ಇಲ್ಲದ ಕಾರಣ ಸಾವಿರಾರು ಪುಸ್ತಕ ಪ್ರೇಮಿಗಳಿಗೆ ನಿರಾಸೆ ಮೂಡಿದಂತೂ ಸುಳ್ಳಲ್ಲ.

ಹಂಪಿ ಉತ್ಸವದಲ್ಲಿ ವಿಜಯನಗರ ಗತವೈಭವ ಸಾರುವಂತಹ ಪುಸ್ತಕಗಳಿಲ್ಲ, ಹಂಪಿಯಲ್ಲೇ ವಿಜಯನಗರ ಇತಿಹಾಸದ ಪುಸ್ತಕಗಳು ಸಿಗುತ್ತಿಲ್ಲ. ಈ ಕುರಿತು ಜಿಲ್ಲಾಡಳಿತ ಹೆಚ್ಚು ಆಸಕ್ತಿ ವಹಿಸಿ, ರಾಜ್ಯಮಟ್ಟದ ಪುಸ್ತಕ ಪ್ರಕಾಶಕರನ್ನು ಕರೆ ತರುವ ವ್ಯವಸ್ಥೆ ಮಾಡಬೇಕಿತ್ತು ಎನ್ನುತ್ತಾರೆ ಪುಸ್ತಕ ಪ್ರೇಮಿಗಳು.ರಿಯಾಯಿತಿ: ಹಂಪಿ ಕನ್ನಡ ವಿವಿಯ ವತಿಯಿಂದ ಪುಸ್ತಕ ಪ್ರದರ್ಶನದಲ್ಲಿ ಶೇ. 50ರಷ್ಟು ರಿಯಾಯ್ತಿ ದರದಲ್ಲಿ ಪುಸ್ತಕಗಳ ಮಾರಾಟ ನಡೆಯುತ್ತಿದೆ. ಈ ಬಾರಿ ಜಿಲ್ಲಾಡಳಿತ ನಮಗೆ ಉಚಿತವಾಗಿ ಪುಸ್ತಕ ಮಳಿಗೆ ನೀಡಿದೆ ಎಂದು ಹಂಪಿ ವಿವಿಯ ಸಹಾಯಕ ಕುಲಸಚಿವ ಎಂ.ಎಂ. ಶಿವಪ್ರಕಾಶ ಹೇಳಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ