ಕನ್ನಡಪ್ರಭ ವಾರ್ತೆ ಅಥಣಿ ಪೋಲಿಯೋದಿಂದ ಉಂಟಾಗುವ ಅಂಗವಿಕಲತೆಯನ್ನು ತಡೆಗಟ್ಟಲು ಐದು ವರ್ಷದ ಒಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಇಲ್ಲಿನ 11ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶ ಈರಣ್ಣ.ಇ.ಎಸ್ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಪೋಲಿಯೋದಿಂದ ಉಂಟಾಗುವ ಅಂಗವಿಕಲತೆಯನ್ನು ತಡೆಗಟ್ಟಲು ಐದು ವರ್ಷದ ಒಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಇಲ್ಲಿನ 11ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶ ಈರಣ್ಣ.ಇ.ಎಸ್ ಹೇಳಿದರು.

ಶನಿವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲೂಕು ಆರೋಗ್ಯ ಇಲಾಖೆ, ಕಾನೂನು ಸೇವಾ ಸಮಿತಿ, ರೋಟರಿ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಭಾರತವನ್ನು ಪೋಲಿಯೋ ಮುಕ್ತವನ್ನಾಗಿಸಲು 1997ರಲ್ಲಿ ಪ್ರಾರಂಭವಾದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಿಂದಾಗಿ ದೇಶದಲ್ಲಿ ಪ್ರಗತಿ ಸಾಧಿಸಲಾಗಿದೆ. ಆದ್ರೂ ಪೋಲಿಯೋದಿಂದ ಉಂಟಾಗುವ ಅಂಗವಿಕಲತೆಯನ್ನು ತಡೆಗಟ್ಟಲು ಮಕ್ಕಳಿಗೆ ಲಸಿಕೆ ತಪ್ಪದೇ ಹಾಕಿಸಬೇಕು ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಸಾಲಮಂಟಪಿ ಮಾತನಾಡಿ, ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಈ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ದೇಶನದಂತೆ ತಾಲೂಕಾ ಆರೋಗ್ಯ ಇಲಾಖೆಯಿಂದ 4 ದಿನಗಳ ಕಾಲ ಹಮ್ಮಿಕೊಳ್ಳಲಾಗುವ ಈ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ವೇಳೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಎಚ್ಚರಿಕೆ ವಹಿಸಬೇಕು. ಅಭಿಯಾನದ ಕುರಿತು ಪೋಷಕರಿಗೆ ಮೊದಲೇ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ತಾಲೂಕಾ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಮಾತನಾಡಿ, ಭಾನುವಾರ ಡಿ.21 ರಿಂದ 24 ರವರೆಗೆ ನಾಲ್ಕು ದಿನ ಹಮ್ಮಿಕೊಳ್ಳುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದಡಿ ಅಥಣಿ ಮತ್ತು ಕಾಗವಾಡ ತಾಲೂಕುಗಳನ್ನ ಒಳಗೊಂಡಂತೆ ಒಟ್ಟು 56,316 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಒಟ್ಟು 265 ಭೂತಗಳನ್ನು, 6 ಸಂಚಾರಿ ಭೂತಗಳನ್ನು ಆರಂಭಿಸಲಾಗುವುದು. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1060 ಸಿಬ್ಬಂದಿ ನೇಮಿಸಲಾಗಿದೆ. ಲಸಿಕಾ ಕಾರ್ಯಕ್ರಮದ ಯಶಸ್ಸಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರವಿ ಕುಮಾರ, ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಓಂಕಾರ ಮೂರ್ತಿ, ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜಿಎಂಎಫ್ ಸಿ ನ್ಯಾಯಾಧೀಶ ರವೀಂದ್ರ ಹಾವರಗಿ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸುನಿತಾ ಪ್ರಬಣ್ಣವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ ಸೌಂದಲಗೇಕರ, ಡಾ.ಹನುಮಂತ ಕಲಮಡಿ, ಡಾ.ರಾಚಗೌಡರ, ಡಾ.ಶಿಂಗೆ, ಆರೋಗ್ಯ ಪರಿವೀಕ್ಷಕಿ ಎ.ಬಿ.ಗೂಳಿಧರ, ರೋಟರಿ ಅಧ್ಯಕ್ಷ ಸಚಿನ ದೇಸಾಯಿ, ಕಾರ್ಯದರ್ಶಿ ಶೇಖರ ಕೋಲಾರ, ಅರುಣ ಯಲಗುದ್ರಿ ಸೇರಿ ವೈದ್ಯಕೀಯ ವಿದ್ಯಾರ್ಥಿಗಳು, ವಿವೇಕಾನಂದ ಶಾಲೆಯ ಇಂಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು ಪಲ್ಸ್ ಪೋಲಿಯೋ ಲಸಿಕಾ ಜಾಗೃತಿ ಜಾಥಾ ಭಾಗವಹಿಸಿದ್ದರು.