ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲೆಯಲ್ಲಿ ಮಾ.1ರಿಂದ 20ರ ವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, ಅಧಿಕಾರಿಗಳು ಎಲ್ಲಾ ರೀತಿಯ ಅಂತಿಮ ಹಂತದ ಸಿದ್ಧತೆ ಮಾಡಿಕೊಂಡು ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಸನ್ನದ್ಧರಾಗಿ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.ನಗರದ ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಸಂಬಂಧ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ನಗರದಲ್ಲಿ 27 ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ 23 ಸೇರಿದಂತೆ ಒಟ್ಟು ಜಿಲ್ಲೆಯ 50 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದರು.
ಮೈಸೂರು ತಾಲೂಕಿನ 27, ನಂಜನಗೂಡು ತಾಲೂಕಿನ 5, ಟಿ. ನರಸೀಪುರ 4, ಹುಣಸೂರು 4, ಕೆ.ಆರ್. ನಗರ 2, ಸಾಲಿಗ್ರಾಮ 1, ಎಚ್.ಡಿ. ಕೋಟೆ 3 ಹಾಗೂ ಪಿರಿಯಾಪಟ್ಟಣ ತಾಲೂಕಿನ 4 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.ಜಿಲ್ಲೆಯಲ್ಲಿ 10 ರೂಟ್‌ಗಳನ್ನು ಮಾಡಲಾಗಿದೆ. ರೂಟ್ ಆಫೀಸರ್ ಗಳನ್ನು ನೇಮಿಸಲಾಗಿದೆ. ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಹೋಗಿ ವಿತರಿಸಲು ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರಾಂಶುಪಾಲರನ್ನು ಒಳಗೊಂಡ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಿಂದ ತೆಗೆದುಕೊಂಡು ಹೋಗುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಎಂದರು.
ಎಸ್ಪಿ ಎನ್.ವಿಷ್ಣುವರ್ಧನ್ ಮಾತನಾಡಿ, ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ ಪೊಲೀಸ್ ಠಾಣೆಯ ಎಸ್ಐ, ಪಿಐ ಹಾಗೂ ಡಿವೈಎಸ್ಪಿ ಮೊಬೈಲ್ ನಂ ಗಳನ್ನು ಪಡೆದು ಇಟ್ಟುಕೊಳ್ಳಿ. ರೂಟ್ ಮ್ಯಾಪ್ ಪ್ರಕಾರ ಪೊಲೀಸ್ ಇಲಾಖೆಯ ಸಿಬ್ಬಂದಿ ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಭದ್ರತೆಗೂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮಾತನಾಡಿ, ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಂಡು ಹೋಗುವ ಅಧಿಕಾರಿಗಳ ತಂಡ ನಿಗದಿತ ಸಮಯದಲ್ಲಿ ಜಿಲ್ಲಾ ಖಜಾನೆಯ ಬಳಿ ಇರಬೇಕು. ಪರೀಕ್ಷೆಯ ದಿನ ಸೆಸ್ಕ್ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಪರೀಕ್ಷೆಗೆ ನಿಯೋಜಿಸಿರುವ ಅಧಿಕಾರಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಸಮಯ ಪಾಲನೆ ಸರಿಯಾಗಿ ಮಾಡಬೇಕು. ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಯುಕೇಶ್ ಕುಮಾರ್, ಡಿಸಿಪಿ ಎಂ. ಮುತ್ತುರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮರಿಸ್ವಾಮಿ, ಡಿಡಿಪಿಐ ಜವರೇಗೌಡ ಮೊದಲಾದವರು ಇದ್ದರು.ದ್ವಿತೀಯ ಪಿಯುಸಿ ಪರೀಕ್ಷೆಗೆ ನಿಯೋಜಿಸಿರುವ ಅಧಿಕಾರಿಗಳು ಶಿಕ್ಷಕರು ಹಾಗೂ ಸಿಬ್ಬಂದಿ ಪರೀಕ್ಷೆ ಸುಸೂತ್ರವಾಗಿ ನಡೆಸಲು ಕ್ರಮ ವಹಿಸಬೇಕು. ಪರೀಕ್ಷೆ ಪಾರದರ್ಶಕವಾಗಿ ನಡೆಯಬೇಕು. ಯಾವುದೇ ಚೀಟಿಂಗ್ ಮಾಲ್ ಪ್ರಾಕ್ಟೀಸ್ ಗೆ ಅವಕಾಶ ನೀಡಬಾರದು. ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಕೆ ಮಾಡುವಂತಿಲ್ಲ. ಪರೀಕ್ಷೆ ಸಂಪೂರ್ಣ ವೆಬ್ ಕಾಸ್ಟಿಂಗ್ ಆಗುತ್ತದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಗಳನ್ನು ಅಳವಡಿಸಲಾಗಿದೆ.- ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿರುವ ಪರೀಕ್ಷಾ ಕೇಂದ್ರಗಳು- 50
ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವವರು- 32684ಪುನವಾರ್ತಿತ ಮತ್ತು ಖಾಸಗಿ- 2679
ಒಟ್ಟು- 35362