- ಡಿಎಸ್‌ಎಸ್ ನೇತೃತ್ವದಲ್ಲಿ ಕಬ್ಬೂರು ಗ್ರಾಮಸ್ಥರ ಪ್ರತಿಭಟನೆ
- - - ದಾವಣಗೆರೆ: ಸ್ಮಶಾನ ವಿರೂಪಗೊಳಿಸಿ, ಅಕ್ರಮವಾಗಿ ಮಣ್ಣು ಸಾಗಾಟ ಮಾಡಿ, ಪೂರ್ವಜರ ಸಮಾಧಿಗಳನ್ನು, ಅಸ್ಥಿಪಂಜರಗಳನ್ನು ನಾಶಪಡಿಸಿದ, ಕೆರೆ ಮತ್ತು ಗೋಮಾಳ ಒತ್ತುವರಿ ಮಾಡಿಕೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಡಿಎಸ್‌ಎಸ್ ಘಟಕದ ಸಂಚಾಲಕ ಕುಂದುವಾಡ ಮಂಜುನಾಥ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.ಕಬ್ಬೂರು ಗ್ರಾಮದ ಪರಿಶಿಷ್ಟ ಜಾತಿ ಇತರೆ ಜಾತಿ ಜನರು ತಮ್ಮ ಊರಿನ ಸ್ಮಶಾನ ಭೂಮಿ, ತಮ್ಮ ಪೂರ್ವಜರ ಸಮಾಧಿಗಳನ್ನು ಉಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ ಅವರಿಗೆ ಸಲ್ಲಿಸಲಾಯಿತು.
ಗ್ರಾಮದ ಮುಖಂಡರು ಮಾತನಾಡಿ, ಕಬ್ಬೂರು ಗ್ರಾಮದ ರಿ.ಸ.ನಂ.31-32ರಲ್ಲಿ ಸರ್ಕಾರಿ ಗೋಮಾಳದಲ್ಲಿ ಸುಮಾರು 25-30 ವರ್ಷದಿಂದ ಪರಿಶಿಷ್ಟ ಜಾತಿಯ ಆದಿಕರ್ನಾಟಕ, ಭೋವಿ, ಪರಿಶಿಷ್ಟ ಪಂಗಡದ ನಾಯಕ ಸಮುದಾಯ, ಮಡಿವಾಳ, ಗೊಲ್ಲರು ಹೀಗೆ ಇತರೆ ಜನಾಂಗದವರ ಪೂರ್ವಜರ ಅಂತ್ಯ ಸಂಸ್ಕಾರ ಮಾಡಿಕೊಂಡು, ಪೂಜೆ, ಪುನಸ್ಕಾರ ಮಾಡಿಕೊಂಡು ಬರುತ್ತಿದ್ದೇವೆ. ಊರಿಗೆ ಸೇರಿದ ಕೆರೆಯ ಜಾಗವನ್ನು ಕೆಲವರು ಒತ್ತುವರಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು, ಅಲ್ಲಿ ಅಡಕೆ, ತೆಂಗು, ಇತರೆ ಬೆಳೆಗಳ ತೋಟಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ದೂರಿದರು.ಜ.10ರಂದು ತಡರಾತ್ರಿ ಕಬ್ಬೂರು ಸ್ಮಶಾನದಲ್ಲಿ ಸಮಾಧಿ ಮಾಡಿದ್ದ ಸ್ಥಳದಲ್ಲಿ ಮಣ್ಣು ಬಗೆಯಲಾಗಿದೆ. ಭೂಮಿಯೊಳಗೆ ಹೂತಿದ್ದ ಅಸ್ಥಿಪಂಜರಗಳನ್ನು ನಾಶಪಡಿಸಿದ್ದಾರೆ. ಜಾನುವಾರುಗಳಿಗೆ ಆಶ್ರಯವಾಗಿದ್ದ ಗೋಮಾಳದಲ್ಲೂ 8-10 ಅಡಿ ಆಳದವರೆಗೆ ಜೆಸಿಬಿ ಮತ್ತು ಟ್ರ್ಯಾಕ್ಟರ್‌ನಿಂದ ಮಣ್ಣನ್ನು ಅಗೆದು, ಸಾಗಿಸಿದ್ದಾರೆ. ತಕ್ಷಣವೇ ಕಬ್ಬೂರು ಸ್ಮಶಾನ, ಗೋಮಾಳ, ಕೆರೆ ಜಾಗದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಮಾಡಿದವರು, ಸಮಾಧಿ ಸ್ಥಳ ಬಗೆದು, ಅಸ್ಥಿಪಂಜರಗಳ ಕುರುಹೂ ಸಿಗದಂತೆ ಮಾಡಿದವರ ದೌರ್ಜನ್ಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲಾಖೆ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಒತ್ತಾಯಿಸಿದರು.
- - - -28ಕೆಡಿವಿಜಿ7, 8.ಜೆಪಿಜಿ:ಕಬ್ಬೂರು ಸ್ಮಶಾನ ನಾಶ, ಕೆರೆ, ಗೋಮಾಳದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಖಂಡಿಸಿ ಡಿಎಸ್‌ಎಸ್ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟಿಸಿದರು.