ಕನಕಪುರ: ಮದುವೆಗೆ ಹೊರಟ್ಟಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಸಂಗಮದ ಮಡಿವಾಳ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ತಗಡೇಗೌಡನದೊಡ್ಡಿ ಗ್ರಾಮದ ವಧು ಮತ್ತು ವರನಿಗೆ ಸಂಗಮದ ಮಡಿವಾಳದ ಶಿವನಕಾರೇಶ್ವರ ದೇವಾಲಯದಲ್ಲಿ ಭಾನುವಾರ ವಿವಾಹ ನಿಶ್ಚಯವಾಗಿತ್ತು. ಬೆಳಿಗ್ಗೆ ಎರಡು ಖಾಸಗಿ ಬಸ್‌ಗಳಲ್ಲಿ ಗ್ರಾಮಸ್ಥರು ಮದುವೆಗೆ ಹೊರಟಿದ್ದರು.ದೊಡ್ಡಆಲಹಳ್ಳಿ ಮಾರ್ಗವಾಗಿ ಹೊರಟಿದ್ದ ಖಾಸಗಿ ಬಸ್ ಸಂಗಮದ ಹೆಗ್ಗನೂರುದೊಡ್ಡಿ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಬಸ್ಸಿನಲ್ಲಿ ಸುಮಾರು 55 ಪ್ರಯಾಣಿಕರು ಇದ್ದರು. 10ಕ್ಕೂ ಹೆಚ್ಚು ಮಂದಿಗೆ ಕೈಕಾಲು, ಸೊಂಟ ಮತ್ತು ಬೆನ್ನಿನ ಮೂಳೆಗಳು ಮುರಿದಿವೆ ಎನ್ನಲಾಗಿದೆ.
ಬಸ್ಸು ಹಳ್ಳಕ್ಕೆ ಬೀಳದಂತೆ ತಡೆಗೋಡೆ ನೆರವಾಗಿದೆ. ಇದರಿಂದ ಆಗಬೇಕಿದ್ದ ಬಾರಿ ಅನಾಹುತ ತಪ್ಪಿದಂತಾಗಿದ್ದು ತಿರುವಿನಲ್ಲಿ ತಡೆಗೋಡೆ ಇಲ್ಲದಿದ್ದರೆ ಬಸ್ಸು ಪಲ್ಟಿ ಹೊಡೆದು ಹಳ್ಳಕ್ಕೆ ಬಿದ್ದಿದ್ದರೆ ದೊಡ್ಡ ಅನಾಹುತವೆ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರಯಾಣಿಕರ ಚೀರಾಟ ಕೇಳಿದ ಸಂಗಮ ವನ್ಯಜೀವಿ ವಲಯದ ಡಿಆರ್‌ಎಫ್‌ಒ ಮಂಜುನಾಥ್ ಮತ್ತು ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದರು. ಕೋಡಿಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಹಾಗೂ ಸಾತನೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ವಿ.ಹರೀಶ್ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ತೀವ್ರವಾಗಿ ಗಾಯಗೊಂಡಿದ್ದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಯಾನಂದ ಸಾಗರ್ ಆಸ್ಪತ್ರೆ, ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆ ಹಾಗೂ ನಿಮ್ಹಾನ್ಸ್ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಹಾಲಿ - ಮಾಜಿ ಸಂಸದರ ಭೇಟಿ:
ಸಂಸದ ಡಾ.ಮಂಜುನಾಥ್ ದಯಾನಂದ ಸಾಗರ್ ಆಸ್ಪತ್ರೆ, ಕನಕಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು. ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಂಸದ ಡಿ.ಕೆ.ಸುರೇಶ್ ಗಾಯಾಳುಗಳಿಗೆ ಸಾಂತ್ವನ ಹೇಳಿದರಲ್ಲದೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆನೀಡುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದರು.ಖಾಸಗಿ ಬಸ್ಸಿನಲ್ಲಿ 50ಕ್ಕು ಹೆಚ್ಚು ಪ್ರಯಾಣಿಕರಿದ್ದು 15ರಿಂದ 20 ಪ್ರಯಾಣಿಕರಿಗೆ ಗಾಯಗಳಾಗಿವೆ. ಗಂಭೀರ ಗಾಯಾಳುಗಳನ್ನು ಬೆಂಗಳೂರು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಉಳಿದವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿಯೇ ಸುತ್ತಮುತ್ತಲಿನ ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ಪ್ರತಿಕ್ರಿಯೆ ನೀಡಿದರು.
20ಕೆಆರ್ ಎಂಎನ್ 17.ಜೆಪಿಜಿಮದುವೆಗೆ ಹೊರಟ್ಟಿದ್ದ ಖಾಸಗಿ ಬಸ್ ಉರುಳಿ ಬಿದ್ದಿರುವುದು.