ನಿಲ್ದಾಣದಲ್ಲಿ ಸ್ಥಳವಿಲ್ಲದೆ ಹೆದ್ದಾರಿಯಲ್ಲೇ ಪ್ರಯಾಣಿಕರ ಇಳಿಸುತ್ತಿರುವ ಬಸ್ಸುಗಳು । ಕಾವಲಿಗಿದ್ದ ಪೊಲೀಸ್ ಚೌಕಿಗೆ ಬೀಗ । ರಸ್ತೆಯಲ್ಲಿ ವಾಹನ ದಟ್ಟಣೆ ಕಿರಿಕಿರಿ
ಅಂಬಳೆ ವೀರಭದ್ರನಾಯಕಕನ್ನಡಪ್ರಭ ವಾರ್ತೆ ಯಳಂದೂರು
ಪಟ್ಟಣದ ಬಸ್ ನಿಲ್ದಾಣದಲ್ಲಿ ಸ್ಥಳವಿಲ್ಲದೆ ರಸ್ತೆಯಲ್ಲಿ ಅನವಶ್ಯಕವಾಗಿ ಬಸ್ ನಿಲ್ಲುವಂತಾಗಿದೆ. ಇದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ.ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ಬಸ್ ನಿಲ್ದಾಣವಿದ್ದು, ಈ ಬಸ್ ನಿಲ್ದಾಣದಿಂದಲೇ ತಮಿಳುನಾಡು, ಕೇರಳ, ಮೈಸೂರು, ಬೆಂಗಳೂರು, ಚಾಮರಾಜನಗರ ಸೇರಿದಂತೆ ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರಗಳಾದ ಬಿಳಿಗಿರಿರಂಗನಬೆಟ್ಟ, ಮಹದೇಶ್ವರನಬೆಟ್ಟ, ಹೋಗನೆಕಲ್ ಪಾಲ್ಸ್‌ಗೆ ಹೋಗುವ ಲೈನ್ ಬಸ್‌ಗಳಿಗೆ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನಿಲ್ದಾಣದಲ್ಲಿ ಸ್ಥಳವಿಲ್ಲದೆ ರಸ್ತೆ ಮದ್ಯದಲ್ಲೇ ಬಸ್ ನಿಲ್ಲಿಸಿ ಇಳಿಸಿ ಹತ್ತಿಸಿಕೊಳ್ಳುವಂತಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.
ಕೆಲವು ಖಾಸಗಿ ಕಾರು, ಬೈಕ್ ಸವಾರರು ನಿಲ್ದಾಣವನ್ನೇ ದ್ವಿಚಕ್ರ ವಾಹನ ನಿಲ್ದಾಣ ಮಾಡಿಕೊಂಡರೆ ಕೆಲವು ಖಾಸಗಿಯವರು ಬಸ್ ಶೆಡ್‌ಗಳಾಗಿ ಪರಿವರ್ತಿಸಿಕೊಂಡಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ.ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿ ತೆರೆಯಲಾಗಿದ್ದು, ಪೊಲೀಸ್ ಸಿಬ್ಬಂದಿ ಕೊರತೆಯಿಂದ ಪೊಲೀಸ್ ಚೌಕಿಗೆ ಬೀಗ ಜಡಿದು ಬಂದ್ ಮಾಡಲಾಗಿದೆ. ಇದನ್ನೆ ದುರುಪಯೋಗ ಮಾಡಿಕೊಡಿರುವ ಬೈಕ್ ಸವಾರರು ಬಸ್ ನಿಲ್ದಾಣದ ಸುತ್ತ ಬೈಕ್ ನಿಲ್ಲಿಸುತ್ತಿರುವುದು ಕಿರಿಕಿರಿ ಉಂಟಾಗುತ್ತಿದೆ.
ಅಲ್ಲದೆ, ರಸ್ತೆ ಮದ್ಯದಲ್ಲೆ ಬಸ್ ನಿಲ್ಲಿಸುವುದರಿಂದ ಪಾದಚಾರಿಗಳು ರಸ್ತೆ ದಾಟುವ ಸಂದರ್ಭದಲ್ಲಿ ಅತಿ ವೇಗವಾಗಿ ಬರುವ ಬೈಕ್, ಕಾರು, ಲಾರಿ, ಬಸ್‌ಗಳು ನಿಯಂತ್ರಣ ತಪ್ಪಿ ಪಾದಚಾರಿಗಳು, ರಸ್ತೆ ದಾಟುವ ಸಾರ್ವಜನಿಕರಿಗೆ ಡಿಕ್ಕಿ ಹೊಡೆದು ಅಪಘಾತಗಳಿಗೆ ಕಾರಣವಾಗುತ್ತಿದೆ.ಇನ್ನು ರಸ್ತೆ ಬದಿಗಳಲ್ಲಿ ಆಟೋಗಳು, ಬೈಕ್ ಸವಾರರು ವಾಹನಗಳನ್ನು ನಿಲ್ಲಿಸಿಕೊಳ್ಳುವುದರಿಂದ ಪದೇ ಪದೇ ಸಣ್ಣ ಪುಟ್ಟ ಅಪಘಾತಗಳು ನಿತ್ಯ ನಡೆಯುತ್ತಲೇ ಇರುತ್ತವೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೂ ಕಿರಿಕಿರಿ ಉಂಟುಮಾಡುವ ಪುಂಡರ ಅಟ್ಟಹಾಸ ಜಾಸ್ತಿಯಾಗಿದೆ. ಬಸ್ ಹತ್ತಿ ಇಳಿದ ವಿದ್ಯಾರ್ಥಿನಿಯರಿಗೆ ಪುಂಡರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ವರ್ಗ ಬಸ್ ನಿಲ್ದಾಣದಲ್ಲಿ ವಾಹನಗಳನ್ನುನಿಲ್ಲಿಸುವುದನ್ನು ತಪ್ಪಿಸುವುದರ ಜತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.ಬಸ್ ನಿಲ್ದಾಣದ ಟ್ರಾಫಿಕ್ ಸಮಸ್ಯೆ ಬಗ್ಗೆ ಈಗಾಗಲೇ ಮಾಹಿತಿ ಇದೆ. ಸಿಬ್ಬಂದಿ ಕೊರತೆಯಿಂದ ಬಸ್ ನಿಲ್ದಾಣದಲ್ಲಿ ಬಂದೋಬಸ್ತಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಹಿರಿಯ ಪೊಲೀಸ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ನೇಮಿಸಲಾಗವುದು.
ಶ್ರೀಕಾಂತ್, ಸಿಪಿಐ, ಯಳಂದೂರು.ಖಾಸಗಿ ಬಸ್ ನಿಲ್ದಾಣವನ್ನು ಟೆಂಡರ್ ನೀಡಲಾಗಿದ್ದು ಬಸ್ ನಿಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಅನಧಿಕೃತ ಬಸ್‌ಗಳಿಗೆ ಅವಕಾಶ ಇಲ್ಲ, ಅಂತಹದು ಕಂಡು ಬಂದರೆ ಸಾರ್ವಜನಿಕರು ದೂರು ನೀಡಿದರೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು.
ಮಹೇಶ್. ಮುಖ್ಯಾಧಿಕಾರಿ. ಪಪಂ, ಯಳಂದೂರು.ಬಸ್ ನಿಲ್ದಾಣದಲ್ಲಿ ಬಸ್ ಬದಲಿಗೆ ಕಾರು, ಬೈಕ್‌ಗಳೇ ಜಾಸ್ತಿಯಾಗಿವೆ. ಆದರೆ, ಬಸ್ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರಸ್ತೆಯಲ್ಲೇ ಬಸ್ ನಿಲ್ಲಿಸಿ ಪ್ರಯಾಣಿಕರ ಇಳಿಸುವ ಸ್ಥಿತಿ ಇದೆ. ಬಸ್ ನಿಲ್ಲಿಸಲು ಅವಕಾಶ ಮಾಡಿಕೊಟ್ಟರೆ ಬಸ್ ನಿಲ್ದಾಣಲ್ಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಹತ್ತಿಸಿಕೊಳ್ಳುತ್ತೇವೆ.
ರಂಗಸ್ವಾಮಿ, ಬಸ್ ಬಾಲಕ.