ಎಚ್.ಕೆ.ಅಶ್ವಥ್, ಹಳುವಾಡಿ
ಗರ್ಭಧರಿಸದೆ, ಕರುವನ್ನು ಹಾಕದೆ 19 ತಿಂಗಳ ಜೆರ್ಸಿ ಮಿಶ್ರಿತ ಆಲ್ ಬ್ಲಾಕ್ ತಳಿಯ ಇಲಾತಿ ಹಸುವೊಂದು ಕಳೆದ 2 ತಿಂಗಳಿಂದ ಹಾಲು ಕೊಡುವ ಮೂಲಕ ತಾಲೂಕಿನ ತಿಮ್ಮನಹೊಸೂರು ಗ್ರಾಮದಲ್ಲಿ ಅಚ್ಚರಿ ಮೂಡಿಸಿದೆ.
ಗ್ರಾಮದ ರೈತ ಕೆ.ಪುಟ್ಟಸ್ವಾಮಿ ಅವರಿಗೆ ಸೇರಿದ ಕರು ಕಳೆದ ಎರಡು ತಿಂಗಳಿಂದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ತಲಾ 2 ಲೀಟರ್‌ನಂತೆ 4 ಲೀಟರ್ ಹಾಲು ಕೊಡುವ ಮೂಲಕ ಸುತ್ತಮುತ್ತಲ ಗ್ರಾಮಸ್ಥರು, ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿಗೆ ಸೇರುವ ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿ 2ನೇ ವೃತ್ತದ ಮಂಗಲ ಗ್ರಾಪಂ ವ್ಯಾಪ್ತಿಗೆ ಸೇರುವ ತಿಮ್ಮನಹೊಸೂರು ಗ್ರಾಮದ ರೈತ ಪುಟ್ಟಸ್ವಾಮಿ ವ್ಯವಸಾಯದೊಂದಿಗೆ ಕಳೆದ 23 ವರ್ಷಗಳಿಂದ ಹೈನುಗಾರಿಕೆ ಮಾಡಿಕೊಂಡು ಬರುತ್ತಿದ್ದಾರೆ.
ಈ ಕರುವಿನ ತಾಯಿಯೂ ಕೂಡ ಮನೆಯಲ್ಲೇ ಜನ್ಮ ತಾಳಿದ್ದು, ಈಗಾಗಲೇ ಆ ಹಸು ಮತ್ತೊಂದು ಕರುವನ್ನು ಹಾಕಿ ಹಾಲು ಕೊಡುತ್ತಿದೆ. ಕರುವಿಗೆ 16 ತಿಂಗಳಾಗಿ ಗರ್ಭಧರಿಸುವ ವಯಸ್ಸಾಗಿದ್ದರೂ ಗರ್ಭ ಧರಿಸುವ ಸೂಚನೆಗಳು ಕಂಡು ಬಾರದ ಹಿನ್ನೆಲೆಯಲ್ಲಿ ರೈತ ಪುಟ್ಟಸ್ವಾಮಿ ಗ್ರಾಮದ ಪಶು ಚಿಕಿತ್ಸಾಲಯದ ವೈದ್ಯರಿಗೆ ತೋರಿಸಿದ್ದಾರೆ. ಈ ವೇಳೆ ವೈದ್ಯರು ಮಾತ್ರೆ ನೀಡಿ ಕೆಲ ದಿನಗಳ ಕಾಲ ಕರುವಿಗೆ ನೀಡುವಂತೆ ಸೂಚಿಸಿದ್ದಾರೆ.
ನಂತರ ಕರುವಿನ ಕೆಚ್ಚಲಿನಲ್ಲಿ ಹಾಲು ಕರೆದಾಗ ಮಾಮೂಲಿ ಹಸುಗಳಂತೆ ಹಾಲು ಕೊಡಲು ಪ್ರಾರಂಭಿಸಿದೆ. ಇದರಿಂದ ಗಾಬರಿಗೊಂಡ ರೈತ ಪುಟ್ಟಸ್ವಾಮಿ ಪಶು ಇಲಾಖೆ ಹಿರಿಯ ವೈದ್ಯಕೀಯ ಸಹಾಯಕರನ್ನು ಸಂಪರ್ಕಿಸಿದಾಗ ಹಾರ್ಮೋನ್ ಪ್ರಭಾವದಿಂದ ಲಕ್ಷಾಂತರ ಕರುಗಳ ಪೈಕಿ ಇಂತಹ ಪ್ರಕರಣಗಳು ಅಪರೂಪಕ್ಕೆ ಈ ರೀತಿಯಲ್ಲಿ ಗರ್ಭಧರಿಸಿ ಕರು ಹಾಕದೇ ಹಾಲು ಕೊಡುತ್ತವೆ ಎಂದು ಹೇಳಿದ್ದಾರೆ.
ಗರ್ಭಧರಿಸದೆ ಹಾಲು ಕರೆಯುತ್ತಿರುವುದನ್ನು ಕರುವಿನ ಬಗ್ಗೆ ಟಿ.ಮಲ್ಲಿಗೆರೆ ಗ್ರಾಮದ ಎಂ.ಬಿ.ಲೋಕೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು, ಇದನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಜನರು ತಿಮ್ಮನಹೊಸೂರಿಗೆ ಆಗಮಿಸುತ್ತಿದ್ದಾರೆ. ಆಗಾಗ್ಗೆ ಸಮಾಜದಲ್ಲಿ ನಡೆಯುತ್ತಿರುವ ಇಂತಹ ಪ್ರಕರಣಗಳು ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದೆ.ಗರ್ಭಧರಿಸದ ಕರು ಕಳೆದ 2 ತಿಂಗಳಿಂದ ಹಾಲು ಕೊಡುತ್ತಿದ್ದರೂ ಈ ವಿಚಾರವನ್ನು ಯಾರಿಗೂ ತಿಳಿಸದೆ ಕೆಲ ದಿನಗಳ ಕಾಲ ಗೌಪ್ಯವಾಗಿಟ್ಟಿದ್ದೆ. ನಿತ್ಯ ಹಾಲು ಕರೆಯುತ್ತಿರುವುದರಿಂದ ಕರುವಿನ ಆರೋಗ್ಯದಲ್ಲಿ ಯಾವುದೇ ಏರುಪೇರು ಉಂಟಾಗಿಲ್ಲ. ಎಲ್ಲಾ ಹಸುಗಳಂತೆ ಮೇವು, ತಿಂಡಿಯನ್ನು ತಿನ್ನುತ್ತಿದೆ.