ಕೊಡವ ಮಹಿಳೆಯರ ಸಬಲೀಕರಣಕ್ಕೆ ಹಕ್ಕೊತ್ತಾಯ

KannadaprabhaNewsNetwork |  
Published : Mar 12, 2026, 01:30 AM IST
ಚಿತ್ರ :  10ಎಂಡಿಕೆ2 : ಸರ್ಕಾರಕ್ಕೆ ಪೊಲೀಸ್ ಇಲಾಖೆ ಮೂಲಕ  ಮನವಿ ಪತ್ರ ಸಲ್ಲಿಸಿದರು.  | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ (ಸಿಎನ್‌ಸಿ) ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಒತ್ತಾಯಿಸಿ ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿತು.

ಮಡಿಕೇರಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ (ಸಿಎನ್‌ಸಿ) ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಒತ್ತಾಯಿಸಿ ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿತು.ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಸಂವಿಧಾನದತ್ತವಾದ ಹಕ್ಕುಗಳನ್ನು ನೀಡಬೇಕು. ದೇಶಾದ್ಯಂತ ಕೊಡವ ಮಹಿಳೆಯರಿಗೆ ಶೇ. 33 ಮೀಸಲಾತಿ ಆಂತರಿಕ ಕೋಟಾದಡಿ ನೀಡಬೇಕು. ಸ್ವಾಯತ್ತ ಕೊಡವ ಲ್ಯಾಂಡ್ ಘೋಷಿಸಬೇಕು, ನೆಲ, ಜಲ, ಭಾಷೆ, ಸಂಸ್ಕೃತಿ, ಪರಪಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ‍್ಯದೊಂದಿಗೆ ಸಾಂವಿಧಾನಿಕ ಭದ್ರತೆಯನ್ನು ಖಾತ್ರಿ ಪಡಿಸಬೇಕು. ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ನೀಡಬೇಕು. ಕೊಡವರ ಜನ್ಮಸಿದ್ಧ ಹಕ್ಕಾಗಿರುವ ಕೋವಿ ಹೊಂದುವ ವಿನಾಯಿತಿಯನ್ನು ಶಾಶ್ವತಗೊಳಿಸಬೇಕು. ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡಬೇಕು, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು, ಸಂಸತ್ ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಎನ್.ಯು. ನಾಚಪ್ಪ ಒತ್ತಾಯಿಸಿದರು. ಕೊಡವ ಮಹಿಳೆಯರು ಉತ್ತಮ ಕೃಷಿಕರಾಗಿರುವುದರಿಂದ ವಿಶೇಷ ಕಾಳಜಿಯಾಗಿ ತಲಾ 10 ಎಕರೆಯಂತೆ ಕಾಫಿ ಜಮೀನಿನ ಗುತ್ತಿಗೆ ಆಸ್ತಿಯನ್ನು ಒದಗಿಸಬೇಕು. ಸಂಸತ್ತು, ರಾಜ್ಯ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡುವ ಸಂದರ್ಭ ಕೊಡವ ಮಹಿಳೆಯರಿಗೆ ಆಂತರಿಕ ಕೋಟಾವನ್ನು ನೀಡಬೇಕು.

ಕೊಡವ ಪುರುಷರು ಹಾಗೂ ಕೊಡವ ಮಹಿಳೆಯರು ಇಬ್ಬರೂ ಬಂದೂಕುಗಳನ್ನು ಹೊಂದಲು ವಿಶೇಷ ಶಾಸನಬದ್ಧ ಹಕ್ಕನ್ನು ಹೊಂದಿದ್ದಾರೆ. ಆದರೆ ಕೊಡವ ಮಹಿಳೆಯರು ಬಂದೂಕು ವಿನಾಯಿತಿ ಸವಲತ್ತು ಪ್ರಮಾಣಪತ್ರಗಳನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಸರಕಾರ ಯುದ್ಧೋಪಾದಿಯಲ್ಲಿ ಕೊಡವ ಮಹಿಳೆಯರಿಗೆ ಬಂದೂಕು ವಿನಾಯಿತಿ ಪ್ರಮಾಣಪತ್ರವನ್ನು ನೀಡಬೇಕು.

ಕೊಡವತಿ ವಧುವಿಗೆ ‘ಪತ್ತಾಕ್ ಭಾಗ್ಯ’ಎಂಬುದು ಕಲ್ಯಾಣ ರಾಜ್ಯ ಯೋಜನೆಯ ‘ಸಪ್ತಪದಿ ಭಾಗ್ಯ’ಕ್ಕೆ ಸಮವಾಗಿರುತ್ತದೆ. ಕೊಡಗಿನ ಬಹುಪಾಲು ಹಳ್ಳಿಗಳಲ್ಲಿ, ವಧುವಿನ ಬಡ ಕೊಡವ ಪೋಷಕರು ಮದುವೆ ಸಮಾರಂಭಕ್ಕಾಗಿ ತಾತ್ಕಾಲಿಕವಾಗಿ ಇತರರ ‘ಪತ್ತಾಕ್’ನ್ನು ಎರವಲು ಪಡೆಯುತ್ತಿದ್ದು, ಇದು ಶೋಚನೀಯವಾಗಿದೆ. ಆದ್ದರಿಂದ ಬಡ ಕೊಡವತಿ ವಧುವಿಗೆ ‘ಪತ್ತಾಕ್ ಭಾಗ್ಯ’ ನೀಡಬೇಕು.ಕೊಡವ ಬುಡಕಟ್ಟು ಜನಾಂಗದವರು ಗರ್ಭಿಣಿರಿಗೆ ‘ಕೂಪದಿ ಕೂಳ್’ ಎಂದು ಸಹಾಯ ಮಾಡಲು ಪೌಷ್ಟಿಕಾಂಶದ ಆಹಾರ ನೀಡುವ ವಿಶಿಷ್ಟ ವ್ಯವಸ್ಥೆಯನ್ನು ಅನುಸರಿಸುತ್ತಿರುವುದರಿಂದ, ಸರ್ಕಾರ ‘ಸೀಮಂತ ಭಾಗ್ಯ’ ಯೋಜನೆಯನ್ನು ಕೊಡವತಿ ಗರ್ಭಿಣಿಯರಿಗೆ ‘ಕೂಪದಿ ಕೂಳ್ ಭಾಗ್ಯ’ ಎಂದು ವಿಸ್ತರಿಸಬೇಕು.ಶಿಕ್ಷಣ ಪಡೆಯುತ್ತಿರುವ ಹೆಣ್ಣು ಮಕ್ಕಳಿಗೆ ಹಾಗೂ ಉದ್ಯೋಗದಲ್ಲಿರುವ ಕೊಡವ ಮಹಿಳೆಯರಿಗೆ ಋತುಚಕ್ರದ ಸಂದರ್ಭ ವೇತನ ಸಹಿತ 3 ದಿನಗಳ ರಜೆ ನೀಡಬೇಕು. ಕೊಡವರ ಇತಿಹಾಸವನ್ನು ತಿರುಚುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನೈಜ ಇತಿಹಾಸವನ್ನು ಮರು ಸ್ಥಾಪಿಸಬೇಕು. 2027ರ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮಸಂಜಾತ ಏಕ ಜನಾಂಗೀಯ ಅನಿಮಿಸ್ಟಿಕ್ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಅಳವಡಿಸಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿದ ಎನ್.ಯು. ನಾಚಪ್ಪ ಅವರು ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿ ಹಾಗೂ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ಕಲಿಯಂಡ ಮೀನಾ ಪ್ರಕಾಶ್, ಬೊಟ್ಟಂಗಡ ಸವಿತಾ ಗಿರೀಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ರೇಖಾ ನಾಚಪ್ಪ, ಅರೆಯಡ ಸವಿತಾ ಗಿರೀಶ್ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲ್ಕೂರರ ಮನೆಯಲ್ಲಿ ಮತ್ತೆ ಒಲೆಯೂಟಕ್ಕೆ ಸಿದ್ಧತೆ..
ವಿಜೃಂಭಣೆಯ ಕನಕಾಚಲಪತಿ ರಥೋತ್ಸವ