ಒಡೆದು ಆಳುವ ವಿಷಾಸ್ತ್ರಕ್ಕೆ ಹಿಂದುಗಳ ಸಾಂಘಿಕ ಪ್ರತ್ಯಸ್ತ್ರ ಬಳಸಲು ಕರೆ

KannadaprabhaNewsNetwork |  
Published : Apr 14, 2025, 01:16 AM IST
32 | Kannada Prabha

ಸಾರಾಂಶ

ಪೆರ್ಣಂಕಿಲದ ಶ್ರೀ ಮಹಾಲಿಂಗೇಶ್ವರ - ಮಹಾಗಣಪತಿ ದೇವಾಲಯದಲ್ಲಿ ಪೇಜಾವರ ಮಠ ಆಶ್ರಯದಲ್ಲಿ ಭಕ್ತಿಸಿದ್ಧಾಂತೋತ್ಸವ - ರಾಮೋತ್ಸವದ ಅಂಗವಾಗಿ ಸಂತ ಸಮಾವೇಶ - ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು.

ಪೆರ್ಣಂಕಿಲದಲ್ಲಿ ಸಂತ ಸಮಾವೇಶ, ಹಿಂದೂ ಸಂಗಮ

ಕನ್ನಡಪ್ರಭ ವಾರ್ತೆ ಉಡುಪಿ

ದೇಶ ಭಕ್ತಿ ಮತ್ತು ದೇವ ಭಕ್ತಿ ಬೇರೆಬೇರೆಯಲ್ಲ, ದೇಶ ಸೇವೆಯೂ ದೇವ ಸೇವೆಯೇ ಆಗಿದೆ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.

ಭಾನುವಾರ ಇಲ್ಲಿನ ಪೆರ್ಣಂಕಿಲದ ಶ್ರೀ ಮಹಾಲಿಂಗೇಶ್ವರ - ಮಹಾಗಣಪತಿ ದೇವಾಲಯದಲ್ಲಿ ಪೇಜಾವರ ಮಠ ಆಶ್ರಯದಲ್ಲಿ ಭಕ್ತಿಸಿದ್ಧಾಂತೋತ್ಸವ - ರಾಮೋತ್ಸವದ ಅಂಗವಾಗಿ ನಡೆದ ಸಂತ ಸಮಾವೇಶ - ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಲವು ಶಕ್ತಿಗಳು ಒಡೆದು ಆಳುವ ವಿಷಾಸ್ತ್ರವನ್ನು ಸನಾತನ ಧರ್ಮದ ಮೇಲೆ ಪ್ರಯೋಗಿಸುತ್ತಿವೆ. ಇದಕ್ಕೆ ಮಠ ಮಂದಿರಗಳು ಸಾಂಘಿಕ ಪ್ರತ್ಯಾಸ್ತ್ರವನ್ನು ಪ್ರಯೋಗಿಸಿ, ಸನಾತನ ಧರ್ಮ ಉಳಿಸಬೇಕಾಗಿದೆ ಎಂದವರು ಆಶಿಸಿದರು.

ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ಸನಾತನ ಸಂಸ್ಕೃತಿಯ ಜಾಗೃತಿಯಲ್ಲಿ ತುಳುನಾಡಿನ ಕೊಡುಗೆ ದೊಡ್ಡದು. ಇಲ್ಲಿ ಹಿಂದಿನಿಂದಲೂ ಎಲ್ಲಾ ಭಿನ್ನ ಸಿದ್ದಾಂತಗಳ ಪೀಠಗಳನ್ನು ಸಮಾನವಾಗಿ ನಡೆಸಿಕೊಳ್ಳಲಾಗುತ್ತಿದೆ. ಈ ಸಮಾವೇಶದ ಮೂಲಕ ಅದು ಮುಂದುವರಿದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು, ರಾಮಮಂದಿರ ನಿರ್ಮಾಣದ ನಂತರ ದೇಶ ರಾಮರಾಜ್ಯವಾಗುವತ್ತ ಸಾಗುತ್ತಿದೆ, ಅಡೆತಡೆಗಳನ್ನು ಮೀರಿ ಅದಕ್ಕೆ ವೇಗ ನೀಡಬೇಕಾಗಿದೆ, ಸಂತರು ಅದಕ್ಕೆ ಮಾರ್ಗದರ್ಶನ ನೀಡಬೇಕಾಗಿದೆ ಎಂದರು.

ಗೋವಾದ ಕೈವಲ್ಯ ಮಠ ಸಂಸ್ಥಾನದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು, ಭಾರತವು ದೇವಭೂಮಿಯೂ, ಸಂತಭೂಮಿಯೂ ಆಗಿದೆ. ಇಲ್ಲಿರುವ ಸುಖ, ಜ್ಞಾನ, ತ್ಯಾಗ ಬೇರೆಲ್ಲಿಯೂ ಇಲ್ಲ. ದೇಶ ರಕ್ಷಣೆ, ಗೋ ರಕ್ಷಣೆಗೆ ಆದ್ಯತೆ ಸಿಗಬೇಕಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ನೀರೆಬೈಲೂರು ರಾಮಕೃಷ್ಣಾಶ್ರಮದ ವಿನಾಯಕಾನಂದ, ಒಡಿಯೂರು ಗುರುದತ್ತ ಸಂಸ್ಥಾನದ ಶ್ರೀ ಗುರುದೇವಾನಂದ, ಮಂಗಳೂರು ರಾಮಕೃಷ್ಣಾಶ್ರಮದ ಶ್ರೀ ಜಿತಕಾಮಾನಂದ, ಕೊಂಡೆವೂರು ಶ್ರೀ ಸಂಸ್ಥಾನದ ಶ್ರೀ ಯೋಗಾನಂದ ಸರಸ್ವತಿ, ಕಟಪಾಡಿಯ ಆನೆಗುಂದಿ ಪೀಠದ ಕಾಳಹಸ್ತೇಂದ್ರ ಸರಸ್ವತಿ, ಬೆಂಗಳೂರಿನ ಆರ್ಯಈಡಿಗ ಸಂಸ್ಥಾನದ ಶ್ರೀ ವಿಖ್ಯಾತಾನಂದ ಸರಸ್ವತಿ, ಕೂಡ್ಲಿ ಶಂಕರಪೀಠದ ಅಭಿನವ ಶಂಕರಭಾರತಿ, ಬಾಳೆಕುದ್ರು ನೃಸಿಂಹಾಶ್ರಮದ ವಾಸುದೇವ ಸದಾಶಿವಾಶ್ರಮ, ಭೀಮನಕಟ್ಟೆ ಮಠದ ಶ್ರೀ ರಘುವರೇಶ್ವರ, ಕರಿಂಜೆ ಸತ್ಯನಾರಾಯಣಪೀಠದ ಶ್ರೀ ಮುಕ್ತಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಎಲ್ಲಾ ಶ್ರೀಗಳ ಪರವಾಗಿ ಶ್ರೀ ಮುಕ್ತಾನಂದ ಸ್ವಾಮೀಜಿ ಮತ್ತು ಶ್ರೀ ಜಿತಕಾಮಾನಂದ ಸ್ವಾಮೀಜಿ ಸಮಾವೇಶ ಉದ್ಘಾಟಿಸಿದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಎಲ್ಲಾ ಸ್ವಾಮೀಜಿಗಳನ್ನು ಗೌರವಿಸಿದರು. ಗುಂಡಿಬೈಲು ವಾಸುದೇವ ಭಟ್ ಸಂಯೋಜಿಸಿದರು.

..................

ಮಕ್ಕಳು ರಾವಣನಾಗಬೇಕೋ ರಾಮನಾಗಬೇಕೋ ನಿರ್ಧರಿಸಿ: ಪೇಜಾವರ ಶ್ರೀ

ಕನಸೇ ಏನೋ ಎಂಬಂತಿದ್ದ ರಾಮಮಂದಿರ ನಿರ್ಮಾಣ ಆಗಿದೆ, ಆದರೆ ರಾಮರಾಜ್ಯದ ಕನಸು ನನಸಾಗುತ್ತಿಲ್ಲ. ಕಾರಣ ಸಮಾಜದಲ್ಲಿ ರಾವಣ, ಶೂರ್ಪನಖಿ, ಕುಂಬಕರ್ಣ ಪ್ರವೃತ್ತಿ ಹೆಚ್ಚುತ್ತಿದೆ. ರಾಮಭಕ್ತ ಜಾಂಬವಂತರೆಲ್ಲಾ ಮಲಗಿ ನಿದ್ರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇನ್ನು ಸುಮ್ಮನಿರಬಾರದು ಎಂದು ಈ ಸಂತ ಸಮಾವೇಶವನ್ನು ನಡೆಸಿದ್ದೇವೆ ಎಂದು ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಿಮ್ಮ ಮಕ್ಕಳು ರಾವಣರಾಗಬೇಕೋ ರಾಮನಾಗಬೇಕೋ ಎಂದು ಪ್ರತಿಯೊಬ್ಬ ಹೆತ್ತವರು ನಿರ್ಧರಿಸುವ ಕಾಲ ಬಂದಿದೆ ಎಂದು ಕೇಳುವುದಕ್ಕಾಗಿ ಈ ಎಲ್ಲಾ ಸಂತರು ಸೇರಿದ್ದೇವೆ ಎಂದ ಶ್ರೀಗಳು, ಮಕ್ಕಳನ್ನು ರಾಮನನ್ನಾಗಿ ಬೆಳೆಸಿದರೆ ರಾಮರಾಜ್ಯ ನಿರ್ಮಾಣಕ್ಕೆ ತಡವೇ ಇಲ್ಲ ಎಂಬ ಭರವಸೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ