ಏ. 19 ರವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕಾಲಾವಕಾಶ

KannadaprabhaNewsNetwork | Published : Apr 13, 2024 1:03 AM

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಲೋಕಸಭಾ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಏ.19 ರವರೆಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶ ಇದ್ದು, ಏ. 20 ನಾಮಪತ್ರಗಳ ಪರಿಶೀಲನೆ ಹಾಗೂ ಏ.22ರಂದು ನಾಮಪತ್ರ ಹಿಂಪಡೆಯಲು ಕಾಲಾವಕಾಶವಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ಮೇ.7ರಂದು ಮತದಾನಕ್ಕಾಗಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಬರುವಾಗ ಅವರ 3 ವಾಹನಗಳಿಗೆ ಮಾತ್ರ ಜಿಲ್ಲಾಧಿಕಾರಿಗಳ ಕಚೇರಿ ಆವರಣದವರೆಗೆ ಬರಲು ಅನುಮತಿ ಇದೇ ಹಾಗೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿ ಸೇರಿ 5 ಜನರಿಗೆ ಮಾತ್ರ ಚುನಾವಣಾಧಿಕಾರಿಗಳ ಕೊಠಡಿಯೊಳಗೆ ಬರಲು ಅವಕಾಶವಿದೆ ಎಂದು ಹೇಳಿದರು.

ನಾಮಪತ್ರ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಗಳವರಗೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿದ್ದು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಏ.12ರಿಂದ 19 ರ ವರೆಗೆ ನಡೆಯಲಿದೆ. ನಾಮಪತ್ರದೊಂದಿಗೆ ಸಲ್ಲಿಸಬೇಕಾದ ಕಾಲಂಗಳನ್ನು ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಭರ್ತಿ ಮಾಡಬೇಕೆಂದರು.

ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳಿಗೆ ತೊಂದರೆಯಾಗದಿರಲು ಅಂಬೇಡ್ಕರ್ ವೃತ್ತದಿಂದ ಹರಳಯ್ಯ ವೃತ್ತದವರೆಗೆ ಮತ್ತು ಮಹಾವೀರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ರಸ್ತೆ, ಡಾ.ಅಂಬೇಡ್ಕರ್ ವೃತ್ತದಿಂದ ಹರಳಯ್ಯ ವೃತ್ತದವರೆಗೆ ಮತ್ತು ಮಹಾವೀರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನೆ, ರ್‍ಯಾಲಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

85 ವರ್ಷ ದಾಟಿದವರು ಹಾಗೂ ಅಂಗವಿಕಲರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದ್ದು, 141 ಜನ ಅಂಗವಿಕಲರು ಹಾಗೂ 85 ವರ್ಷ ಮೆಲ್ಪಟ್ಟ 318 ಜನ ಏ.26ರಂದು ಮನೆಯಿಂದ ಮತದಾನ ಮಾಡಲು ಇವರಿಗೆ ಅವಕಾಶ ನೀಡಲಾಗಿದೆ. ಏ.26ರಂದು ಮತದಾನ ಮಾಡದವರು ಏ. 29 ರವರಿಗೆ ಕಾಲಾವಕಾಶವಿದೆ ಎಂದು ಹೇಳಿದರು.

ತುರ್ತು ಸೇವೆ ಇಲಾಖೆಗಳಿಗೆ ಜೂನ್ 1, 2 ಮತ್ತು 3 ರಂದು ಮತದಾನ ಮಾಡಲು ಅವಕಾಶ ನೀಡಲಾಗಿದೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರೆ ಇರುವ 5 ಪಿಂಕ್ ಮತಗಟ್ಟೆ, ಒಂದು ಯುವ ಮತಗಟ್ಟೆ ಹಾಗೂ ವಿಶೇಷ ಚೇತನರ ಒಂದು ಮತಗಟ್ಟೆ ಇರಲಿದೆ. ಚುನಾವಣಾ ಕರ್ತವ್ಯಕ್ಕೆ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಈಗಾಗಲೇ ಸ್ಥಳೀಯ ಹಾಗೂ ಬೀದರ ಜಿಲ್ಲೆಯಲ್ಲಿ 3 ವರ್ಷ ಕೆಲಸ ನಿರ್ವಹಿಸಿದ ಅಧಿಕಾರಿಗಳನ್ನು ಚುನಾವಣಾ ಆಯೋಗ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 1,528 ಮತಗಟ್ಟೆಗಳಿದ್ದು, ಅವುಗಳಲ್ಲಿ 328 ಸೂಕ್ಷ್ಮ ಮತಗಟ್ಟೆಗಳಿವೆ. 1,305 ಮತಗಟ್ಟೆಗಳಿಗೆ ಸಿಸಿಟಿವಿ ಅಳವಡಿಸಿದ್ದು, ಲೈವ್ ಕವರೇಜ್ ಇರುತ್ತದೆ. ಸರಕಾರಿ ಅಧಿಕಾರಿಗಳು ಯಾವುದೇ ಪಕ್ಷ ಹಾಗೂ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಸಾಕ್ಷೀ ಸಮೇತ ದೂರುಗಳು ಬಂದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ, ಗುಂಡಾಕಾಯ್ದೆ ಅಡಿ 21 ಜನರ ಮೇಲೆ ಪ್ರಪೋಸಲ್ ಕಳಿಸಿದ್ದು, ಈಗಾಗಲೇ 17 ಜನರಿಗೆ ಗಡಿಪಾರು ಮಾಡಲಾಗಿದೆ. ಮೊದಲ ಹಂತದ ಚುನಾವಣೆಗಾಗಿ ನಮ್ಮ ಜಿಲ್ಲೆಯಿಂದ ರಾಮನಗರ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ನಮ್ಮ ಅಧಿಕಾರಿ ಮತ್ತು ಸಿಬ್ಬಂದಿ ಹೋಗುತ್ತಿದ್ದಾರೆ. ಆದರೆ ನಮ್ಮ ಜಿಲ್ಲೆಯಲ್ಲಿ ಯಾವುದೇ ಸಿಬ್ಬಂದಿಗಳ ಕೊರತೆ ಇಲ್ಲಾ ಎಂದು ಹೇಳಿದರು.

Share this article