ಬೆಂಗಳೂರು : ಕಾರು ತಾಗಿದಕ್ಕೆ ಮಹಿಳೆ ಹಾಗೂ ಆಕೆಯ ಸಹಚರರು ತನ್ನ ಮೇಲೆ ಹಲ್ಲೆಗೈದು ತನ್ನ ದುಬಾರಿ ಕಾರು ಹಾಗೂ ಬೆಲೆಬಾಳುವಸ್ತುಗಳನ್ನು ಕಿತ್ತುಕೊಂಡು ಈಗ ಕಾರನ್ನು ವಾಪಾಸ್ ಕೊಡಲು ₹20 ಲಕ್ಷ ಹಣಕ್ಕೆ ಬೇಡಿಕೆ ಇರಿಸಿದ್ದಾರೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಲ್ಲೆಗೊಳಗಾದ ಸೇಂಟ್ ಮಾರ್ಕ್ಸ್ ರಸ್ತೆಯ ಪಾಪಣ್ಣ ಸ್ಟ್ರೀಟ್‌ನ ಅಪಾರ್ಟ್‌ಮೆಂಟ್ ನಿವಾಸಿ ವಿನಯ್ ಗೌಡ ನೀಡಿದ ದೂರಿನ ಮೇರೆಗೆ ದೀಪ್ತಿ ಕಾಟ್ರಗಡ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನ ವಿವರ
ಉದ್ಯಮಿ ವಿನಯ್ ಗೌಡ ಅವರು ಮೇ 3ರಂದು ಮುಂಜಾನೆ ಸುಮಾರು 4.15ಕ್ಕೆ ಲ್ಯಾವೆಲ್ಲೆ ರಸ್ತೆಯ ಪೂರ್ವ ಗ್ರ್ಯಾಂಡೆ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಿಂದ ತಮ್ಮ ಪೋರ್ಶೆ ಬಾಕ್ಸ್‌ಸ್ಟರ್ ಕಾರನ್ನು ಹೊರಗೆ ತೆಗೆದಿದ್ದಾರೆ. ಈ ವೇಳೆ ಅಪಾರ್ಟ್‌ಮೆಂಟ್‌ನ ಮುಂದೆ ನಿಂತಿದ್ದ ದೀಪ್ತಿಕಟ್ರಗಡ ಅವರ ಕಾರಿಗೆ ಅಚಾನಾಕ್ಕಾಗಿ ಕಾರು ತಾಕಿದೆ. ಅಷ್ಟಕ್ಕೆ ದೀಪ್ತಿ ಕಾಟ್ರಗಡ ಹಾಗೂ ಅವರ ಸಹಚರರು ಏಕಾಏಕಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ತನ್ನ ₹56.41 ಲಕ್ಷ ಮೌಲ್ಯದ ಕಾರು, ಕಾರಿನಲ್ಲಿದ್ದ ₹1.25 ಲಕ್ಷ ನಗದು, 85 ಸಾವಿರ ರು. ಮೌಲ್ಯದ ಗಾಗಲ್ ಹಾಗೂ ಸುಮಾರು ₹1.50 ಲಕ್ಷ ಮೌಲ್ಯದ ಪರ್ಸ್ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾರು ವಾಪಾಸ್ ಕೊಡಲು ₹20 ಲಕ್ಷಕ್ಕೆ ಬೇಡಿಕೆ:
ಈ ವೇಳೆ ನನ್ನ ಮೊಬೈಲ್ ನಾಪತ್ತೆಯಾಗಿದ್ದು, ಅದೇ ದಿನ ರಾತ್ರಿ ದೀಪ್ತಿ ಕಾಟ್ರಗಡ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್‌ಗೆ ಮೊಬೈಲ್ ಕೊಟ್ಟು ಹೋಗಿದ್ದಾರೆ. ಬಳಿಕ ತಾನು ಆಕೆಯನ್ನು ಸಂಪರ್ಕಿಸಿ, ನನ್ನ ಕಾರನ್ನು ವಾಪಾಸ್ ನೀಡುವಂತೆ ಕೇಳಿದಾಗ, ನೀನು ನನ್ನ ಕಾರನ್ನು ಡ್ಯಾಮೇಜ್ ಮಾಡಿದ್ದೀಯಾ.₹20 ಲಕ್ಷ ಕೊಟ್ಟರಷ್ಟೇ ನಿನ್ನ ಕಾರು ವಾಪಾಸ್ ಕೊಡುವೆ ಎಂದು ಬೇಡಿಕೆ ಇರಿಸಿದ್ದಾರೆ. ಹೀಗಾಗಿ ನನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕಾರು, ಪರ್ಸ್, ನಗದು ತೆಗೆದುಕೊಂಡು ಹೋಗಿರುವ ದೀಪ್ತಿ ಕಾಟ್ರಗಡ ಹಾಗೂ ಅವರ ಸಹಚರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉದ್ಯಮಿ ವಿನಯ್ ಗೌಡ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.