ಬೈಂದೂರು: ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಮಂಗಳವಾರ ರಾತ್ರಿ ಇಲ್ಲಿನ ಹರ್ಕೂರು ಗ್ರಾಮದ ನಾರ್ಕಳಿಯ ಕೊರಗ ಸಮುದಾಯದ ನಡುವೆ ಗ್ರಾಮ ವಾಸ್ತವ್ಯ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕೊರಗ ಬಂಧುಗಳೊಂದಿಗೆ ಸಂವಾದ ನಡೆಸಿ, ಅವರ ಸಾಮಾಜಿಕ, ಆರ್ಥಿಕ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿ, ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.ಕೊರಗ ಸಮುದಾಯವು ಸಮಾಜದ ಅತ್ಯಂತ ಮೃದು ಹಾಗೂ ನಿರ್ಲಕ್ಷಿತ ಸಮಾಜವಾಗಿದೆ ಎಂಬ ಭಾವನೆ ಇದೆ. ಆದರೆ ಈ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಸಮುದಾಯದ ಎಲ್ಲರೂ ಸುಶಿಕ್ಷಿತರಾಗಬೇಕು ಮತ್ತು ಸಮಾಜದ ಮುಖ್ಯ ವಾಹಿನಿಗೆ ಬರಬೇಕು, ಅದಕ್ಕೆ ಶಾಸಕನಾಗಿ ತಾವು ಸಂಪೂರ್ಣ ಸಹಕಾರ ನೀಡುವುದಕ್ಕೆ ಬದ್ಧ ಎಂದು ಭರವಸೆ ನೀಡಿದರು.ಬಾಗಿನ - ಸಹಭೋಜನ: ಆರಂಭದಲ್ಲಿ ಕೊರಗ ಸಮುದಾಯದ ಮುತ್ತೈದೆಯರಿಗೆ ಕಾರ್ಯಕರ್ತೆಯರ ಮೂಲಕ ಬಾಗಿನ ನೀಡುವುದರೊಂದಿಗೆ ಗ್ರಾಮ ವಾಸ್ತವ್ಯಕ್ಕೆ ಶಾಸಕರು ಚಾಲನೆ ನೀಡಿದರು.ರಾತ್ರಿ ಕಟ್ಟಿಗೆ ಬೆಂಕಿ ಬೆಳಕಿನಲ್ಲಿ ಕೊರಗ ಬಂಧುಗಳ ಸಾಂಪ್ರದಾಯಿಕ ಡೋಲುವಾದನವನ್ನು ವೀಕ್ಷಿಸಿ, ಅವರ ಈ ಕಲೆಯನ್ನು ಮುಂದಿನ ತಲೆಮಾರಿಗೆ ಕಲಿಸಿ ಉಳಿಸಿ ಬೆಳೆಸುವಂತೆ ಸಲಹೆ ಮಾಡಿದರು. ನಂತರ ಸಹಭೋಜನ ಸ್ವೀಕರಿಸಿ ನಾರ್ಕಳಿನಲ್ಲಿ ಕೊರಗ ಸಮುದಾಯದ ಸುರೇಂದ್ರ ಅವರ ಮನೆಯಲ್ಲಿ ಶಾಸಕರು ಇತರರೊಂದಿಗೆ ವಾಸ್ತವ್ಯ ಹೂಡಿದರು.ಶಾಸಕರೊಂದಿಗೆ ಗ್ರಾಮ ವಾಸ್ತವ್ಯ ಹಾಗೂ ಸಂವಾದದಲ್ಲಿ ಕೊರಗ ಸಮುದಾಯದ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಕಾಳವರ್ಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.