ಕನ್ನಡಪ್ರಭ ವಾರ್ತೆ ಸಿದ್ದಾಪುರ

ಅಘನಾಶಿನಿ ಅಪ್ಪೇಮಿಡಿ ವೃಕ್ಷ ರಾಶಿ ಪ್ರದೇಶಕ್ಕೆ "ಪಾರಂಪರಿಕ ಜೀವವೈವಿಧ್ಯ ತಾಣ " ಮಾನ್ಯತೆ ನೀಡುವ ನಿರ್ಣಯವನ್ನು ಕರ್ನಾಟಕ ಸರ್ಕಾರದ ಜೀವ ವೈವಿಧ್ಯ ಮಂಡಳಿ ಕೈಗೊಂಡಿದೆ ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ, ವೃಕ್ಷ ಲಕ್ಷ ಆಂದೋಲನದ ನಿಯೋಗ ತಿಳಿಸಿದೆ.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ, ವೃಕ್ಷ ಲಕ್ಷ ಆಂದೋಲನದ ನಿಯೋಗ ಇತ್ತೀಚೆಗೆ ಬೆಂಗಳೂರಿನಲ್ಲಿ ಜೀವ ವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ ಸಂತೋಷ್ ಕುಮಾರ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ನಿಯೋಗ ತಿಳಿಸಿದ್ದಲ್ಲದೇ, ಈ ಕುರಿತು ಸಂತಸ ವ್ಯಕ್ತಪಡಿಸಿದೆ.

ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರು ಮತ್ತು ವಿಜ್ಞಾನಿಗಳು ಇತ್ತೀಚಿಗೆ ಅಘನಾಶಿನಿ ಕೊಳ್ಳ ಪ್ರದೇಶಕ್ಕೆ ಬಂದು ಅಘನಾಶಿನಿ ಪಾದಯಾತ್ರೆ ಸಮಾರೋಪ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಈ ಪ್ರದೇಶಕ್ಕೆ ಜೀವ ವೈವಿಧ್ಯ ತಾಣ ಘೋಷಣೆ ಮಾಡಲು ಅಗತ್ಯ ಕ್ರಮ ಜರುಗಿಸಲು ಮಂಡಳಿ ತೀರ್ಮಾನಿಸಿದೆ ಎಂದು ಹೇಳಲಾಗಿದ್ದು ಇದರಿಂದ ಜೀವ ವೈವಿಧ್ಯ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಅಘನಾಶಿನಿ ಅಪ್ಪೇಮಿಡಿ ಪ್ರದೇಶಕ್ಕೆ ಜೀವವೈವಿಧ್ಯ ತಾಣ ಎಂಬ ರಾಜ್ಯ ಮಾನ್ಯತೆ ಅಧಿಕೃತವಾಗಿ ಲಭ್ಯವಾಗಲಿದೆ.

ಅಪ್ಪೇಮಿಡಿ ಪಾದಯಾತ್ರೆ ಸಂದರ್ಭ ಈ ಕುರಿತು ಪರಿಸರ ಕಾರ್ಯಕರ್ತರು ಬೇಡಿಕೆ ಸಲ್ಲಿಸುವ ನಿರ್ಧಾರ ಮಾಡಿದ್ದರು. ಅಪ್ಪೇಮಿಡಿ ಸಸ್ಯ ವೈವಿಧ್ಯ ಕುರಿತು ವಿವರ ಮಾಹಿತಿ, ಸ್ಥಳಿಯರ ಅನುಭವ, ತಜ್ಞರ ಅಭಿಪ್ರಾಯ, ಜಾಗತಿಕವಾಗಿ ಇರುವ ಅಪ್ಪೇಮಿಡಿ ಉಪ್ಪಿನಕಾಯಿ ಖ್ಯಾತಿ, ಅಘನಾಶಿನಿ ನದಿ ಕಣಿವೆಯ ಸೂಕ್ಷ್ಮತೆ ಈ ಎಲ್ಲ ಸಂಗತಿಗಳನ್ನು ಜೀವ ವೈವಿಧ್ಯ ಮಂಡಳಿಯ ಎದುರು ೩ ತಿಂಗಳ ಹಿಂದೆ ವೃಕ್ಷ ಲಕ್ಷ ಆಂದೋಲನ ಮಂಡಿಸಿತ್ತು .ಇದೀಗ ರಾಜ್ಯ ಮಂಡಳಿ ತನ್ನ ತೀರ್ಮಾನ ಪ್ರಕಟಿಸಿದೆ.


ಈ ಕುರಿತು ಜೀವ ವೈವಿಧ್ಯ ಮಂಡಳಿಗೆ ನಿಯೋಗದ ನೇತೃತ್ವ ವಹಿಸಿದ್ದ ಅನಂತ ಹೆಗಡೆ ಅಶೀಸರ ಡಾ. ಬಾಲಚಂದ್ರ ಸಾಯಿಮನೆ, ಮಂಡಳಿ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಧನ್ಯವಾದ ಸಲ್ಲಿಸಿದ್ದು ಸಿದ್ದಾಪುರ ತಾಲೂಕ ಕತ್ತಲೆಕಾನು ಸಂರಕ್ಷಣೆಗೆ ಜೀವ ವೈವಿಧ್ಯ ಮಂಡಳಿ ಮುಂದಾಗಬೇಕು ಎಂದು ಅವರ ಜೊತೆಯಲ್ಲಿದ್ದ ವೆಂಕಟೇಶ, ಶ್ರೀಪಾದ ಗಣಪತಿ .ಕೆ, ಮುಂತಾದವರಿದ್ದ ನಿಯೋಗ ಮನವಿ ಮಾಡಿದೆ.

ನಿಯೋಗದಲ್ಲಿ ಈಗಾಗಲೇ ೨೦೧೨ರಲ್ಲೇ ಪಶ್ಚಿಮ ಘಟ್ಟ ಕಾರ್ಯಪಡೆ ಶಿಫಾರಸಿನಂತೆ ಅಘನಾಶಿನಿ ಕಣಿವೆ ಸಂರಕ್ಷಿತ ಪ್ರದೇಶ ಘೋಷಣೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಅಘನಾಶಿನಿ ಕಣಿವೆ ರಾಂಪತ್ರೆ ಜಡ್ಡಿಗಳು, ದೇವರಕಾಡುಗಳು ಇಲ್ಲಿನ ವೈಶಿಷ್ಟ್ಯಗಳಾಗಿವೆ. ಮಾರ್ಚ್‌, ಏಪ್ರಿಲ್‌ನಲ್ಲಿ ನದಿಗುಂಟ ನಡೆದ ಅಪ್ಪೇಮಿಡಿ ಪಾದಯಾತ್ರೆ ಪುನಃ ಅಘನಾಶಿನಿ ನಾಡಿನ ಗಮನ ಸೆಳೆದಿದೆ ಎಂದು ಪಾದಯಾತ್ರೆ ಸಂಚಾಲಕರಾದ ಡಾ. ಬಾಲಚಂದ್ರ ಸಾಯಿಮನೆ, ಗೋಪಾಲ ಕೃಷ್ಣ ತಂಗಾರಮನೆ ಹರ್ಷ ವ್ಯಕ್ತಪಡಿಸಿದ್ದಾರೆ.