ಎರಡು ಮನೆಗಳಲ್ಲಿ ಕಳವು ಪ್ರಕರಣ- ಪೊಲೀಸರಿಂದ ಪರಿಶೀಲನೆ

KannadaprabhaNewsNetwork | Updated : Jul 25 2024, 01:24 AM IST

ಸಾರಾಂಶ

ಮನೆಗಳಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ, ಇಂಟರ್‌ಲಾಕ್ ಮುರಿದು ಒಟ್ಟು ₹೮.೯ ಲಕ್ಷ ಮೌಲ್ಯದ ವಸ್ತುಗಳ ಕಳವು ಮಾಡಿರುವ ಎರಡು ಪ್ರತ್ಯೇಕ ಘಟನೆ ಗಾಂಧಿ ನಗರದಲ್ಲಿ ಶುಕ್ರವಾರ ನಡೆದಿವೆ.

- ಸಾವಿತ್ರಿ ಬಾಯಿ, ಶೇಖ್ ಪಹಾನ್ ಮಸೂದ್ ನಿವಾಸಗಳಲ್ಲಿ ಕೃತ್ಯ - - - ಹರಿಹರ: ಮನೆಗಳಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ, ಇಂಟರ್‌ಲಾಕ್ ಮುರಿದು ಒಟ್ಟು ₹೮.೯ ಲಕ್ಷ ಮೌಲ್ಯದ ವಸ್ತುಗಳ ಕಳವು ಮಾಡಿರುವ ಎರಡು ಪ್ರತ್ಯೇಕ ಘಟನೆ ಗಾಂಧಿ ನಗರದಲ್ಲಿ ಶುಕ್ರವಾರ ನಡೆದಿವೆ.

ನಗರದ ಅಕ್ಷಯ ಆಸ್ಪತ್ರೆಯಲ್ಲಿ ಆಯಾ ಆಗಿರುವ ಸಾವಿತ್ರಿ ಬಾಯಿ ಶುಕ್ರವಾರ ಬೆಳಗ್ಗೆ ಗಾಂಧಿನಗರದ ೧ನೇ ಮೇನ್, ೩ನೇ ಕ್ರಾಸ್‌ನಲ್ಲಿರುವ ಮನೆಗೆ ಬೀಗ ಹಾಕಿಕೊಂಡು ನಗರದ ಹಳೇ ಹರ್ಲಾಪುರದ ತಾಯಿ ಮನೆಗೆ ಹೋಗಿದ್ದರು. ಪಕ್ಕದ ಮನೆಯವರು ಶನಿವಾರ ಬೆಳಗ್ಗೆ ಅವರಿಗೆ ಫೋನ್ ಮಾಡಿ, ನಿಮ್ಮ ಮನೆ ಚಿಲಕ ಮುರಿದು ಕೆಳಗೆಬಿದ್ದಿದೆ ಎಂದು ತಿಳಿಸಿದ್ದಾರೆ. ಆಗ ಸಾವಿತ್ರಿ ಬಾಯಿ ಬಂದು ನೋಡಿದಾಗ ಮನೆಗೆ ಕಳ್ಳರು ನುಗ್ಗಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ, ಇಂಟರ್‌ ಲಾಕ್ ಮುರಿದು, ಮನೆಯ ಬೆಡ್‌ ರೂಮ್‌ನಲ್ಲಿ ಬೀರುವಿನ ಬಾಗಿಲು ತೆಗೆದು ₹೭,೩೫,೦೦೦ ಮೌಲ್ಯದ ಒಟ್ಟು ೧೪೭ ಗ್ರಾಂ ತೂಕದ ಚಿನ್ನಾಭರಣ ಮತ್ತು ₹೫,೫೦೦ ಮೌಲ್ಯದ ೧೧೦ ಗ್ರಾಂ ಬೆಳ್ಳಿಯ ಆಭರಣ ಹಾಗೂ ₹೧೨ ಸಾವಿರ ನಗದು ದೋಚಿರುವುದು ಕಂಡುಬಂದಿದೆ.

ಇನ್ನೊಂದು ಪ್ರಕರಣದಲ್ಲಿ ೬ ತಿಂಗಳಿಂದ ಹರಿಹರದಲ್ಲಿ ವಾಸವಿರುವ ಶಿವಮೊಗ್ಗ ಜಿಲ್ಲೆ ಆನಂದಪುರದ ಶೇಖ್ ಪಹಾನ್ ಮಸೂದ್ ಅವರ ಪತ್ನಿ ಜೈಭೀಮನಗರದ ತವರು ಮನೆಗೆ ಹೋಗಿದ್ದರು. ಶುಕ್ರವಾರ ರಾತ್ರಿ ೯ ಗಂಟೆಗೆ ಗಾಂಧಿನಗರದ ೧ನೇ ಮೇನ್, ೪ನೇ ಕ್ರಾಸ್‌ನಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ತವರಿಗೆ ಹೋಗಿದ್ದರು. ಪತ್ನಿಯೊಂದಿಗೆ ಬೆಳಗ್ಗೆ ೯-೩೦ ಗಂಟೆಗೆ ಮನೆಗೆ ವಾಪಾಸ್ ಬಂದಾಗ ಮನೆಯ ಅರ್ಧ ಬಾಗಿಲು ತೆರೆದಿದ್ದು ಕಂಡುಬಂದಿಎ. ಬಾಗಿಲ ಚಿಲಕ, ಇಂಟರ್‌ಲಾಕ್ ಮುರಿದು, ಕಳ್ಳರು ಮನೆಯೊಳಗೆ ನುಗ್ಗಿದ್ದರು. ಪರಿಶೀಲಿಸಿದಾಗ, ಬೀರುವಿನಲ್ಲಿದ್ದ ₹೧.೧೭ ಲಕ್ಷ ಮೌಲ್ಯದ ೨೪ ಗ್ರಾಂ ತೂಕದ ಬಂಗಾರದ ಆಭರಣ ಮತ್ತು ₹೫,೧೦೦ ಮೌಲ್ಯದ ೧೦೦ ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಜೊತೆಗೆ ₹೧೫,೦೦೦ ನಗದು ಕಳ್ಳವು ಆಗಿರುವುದು ಗೊತ್ತಾಗಿದೆ.

ಎಎಸ್‌ಪಿ ಭೇಟಿ:

ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಎರಡೂ ಪ್ರಕರಣ ದಾಖಲಾಗಿವೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ ಮತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- - - (ಸಾಂದರ್ಭಿಕ ಚಿತ್ರ)

Share this article