-ಗಣೇಶನ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಿದ ಸಚಿವ ಈಶ್ವರ ಖಂಡ್ರೆ
ಕನ್ನಡಪ್ರಭ ವಾರ್ತೆ ಭಾಲ್ಕಿ: ವಿಘ್ನ ನಿವಾರಕ ವಿನಾಯಕನಿಗೆ ಸಂಭ್ರಮದಿಂದ ವಿದಾಯ ಹೇಳಿ ವಿಸರ್ಜನೆ ಮಾಡಲಾಯಿತು.
ಗಣೇಶ ಚತುರ್ಥಿ ಹಿನ್ನೆಲೆ ಕಳೆದ ಸೆ. 7ರಂದು ಪಟ್ಟಣದ ವಿವಿಧ ಕಡೆಗಳಲ್ಲಿ ವಿವಿಧ ಗಣೇಶ ಮಂಡಳ ವತಿಯಿಂದ ನೂರಕ್ಕೂ ಅಧಿಕ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಕಳೆದ ಹನ್ನೊಂದು ದಿನಗಳಿಂದ ಪಟ್ಟಣದಲ್ಲಿ ಭಕ್ತಿಯ ವಾತಾವರಣ ನಿರ್ಮಾಣಗೊಂಡಿತು. ಎಲ್ಲೆಡೆ ವಿವಿಧ ಮಾದರಿಗಳಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಿ ಶ್ರದ್ಧೆ, ಭಕ್ತಿಯಿಂದ ಗಣೇಶನಿಗೆ ಪೂಜೆ, ಪುನಸ್ಕಾರ ನಡೆದಿದ್ದವು. ಜೊತೆಗೆ ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾಸೋಹ ಮೂಲಕ ಗಣೇಶ ಉತ್ಸವ ತೆರೆ ಕಂಡಿತು.ಗಣೇಶ ವಿಸರ್ಜನೆಗೂ ಮುನ್ನ ಗಣೇಶನ ಪೆಂಡಾಲ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಪೂಜೆ ನೆರವೇರಿಸಿ ದರ್ಶನ ಪಡೆದು ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಅಲ್ತಾಫ್, ಎಂಜನಿಯರ್‌ಗಳಾದ ಲೋಹಿತ್, ಅನ್ವರ್ ಪ್ರಮುಖರಾದ ಬಸವರಾಜ ಪನಶೆಟ್ಟೆ, ಜಗದೀಶ ಬಿರಾದಾರ್, ಸತೀಶ ವಾಡೆ, ಸಂಜು ಚವಳೆ, ಭದ್ರೇಶ ಸ್ವಾಮಿ, ಶೈಲೇಶ ರಿಕ್ಕೆ, ನಂದು ಸಜ್ಜನಶೆಟ್ಟಿ, ಶಿವಕುಮಾರ ಬಿರಾದಾರ್ ಸೇರಿದಂತೆ ಹಲವರು ಇದ್ದರು.
ಮೆರವಣಿಗೆಯುದ್ದಕ್ಕೂ ಯುವಕರು, ಮಹಿಳೆಯರು, ಮಕ್ಕಳು ಡಿಜೆ ಸೌಂಡ್‌ನಲ್ಲಿ ಮೊಳಗಿದ ಭಕ್ತಿ, ಚಲನಚಿತ್ರ ಗೀತೆಗಳಿಗೆ ಹೆಜ್ಜೆ ಹಾಕಿದರು. ಯುವಕರು ಪರಸ್ಪರರು ಗುಲಾಲ್ ಎರಚಿಕೊಂಡು, ಸಿಳ್ಳೆ, ಕೇಕೆ ಹಾಕುತ್ತ ಸಂಭ್ರಮಿಸಿದರು.
ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ ಕೃತಕ ಹೊಂಡದಲ್ಲಿ ಒಂದಾದ ಮೇಲೊಂದರಂತೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು.
ಫೈಲ್ 18ಬಿಡಿ3