ವಿಶ್ವಕರ್ಮರಿಗೆ ಒಳ ಮೀಸಲಾತಿ ಕಲ್ಪಿಸುವುದು ಅಗತ್ಯ: ರಾಜೇಶ್

KannadaprabhaNewsNetwork | Published : Sep 19, 2024 1:53 AM
Follow Us

ಸಾರಾಂಶ

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ವಿಶ್ವಕರ್ಮ ಸಮುದಾಯವು ಜಗತ್ತಿಗೆ ಅನನ್ಯ ಕೊಡುಗೆ ಕೊಟ್ಟಿದೆ. ವಿಶ್ವಕರ್ಮರಿಗೆ ಒಳಮೀಸಲಾತಿ ಮತ್ತು ವಿಶ್ವಕರ್ಮರ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ವಿಶ್ವಕರ್ಮ ಅಧ್ಯಯನ ಕೇಂದ್ರ ಸರ್ಕಾರದಿಂದ ರಚನೆಯಾಗಬೇಕು ಎಂದು ಗುರುವಾಯನಕೆರೆ ಬಿಆರ್‌ಸಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ರಾಜೇಶ್ ಹೇಳಿದರು. ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಆಚರಣೆಯಲ್ಲಿ ಉಪನ್ಯಾಸ ನೀಡಿದರು.

ಪ್ರಸ್ತುತ ವಿಶ್ವಕರ್ಮರು ಕುಲ ಕಸುಬು ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಪರಿಣಾಮ ಕುಲಕಸುಬು ನಶಿಸಿ ಹೋಗುತ್ತಿದ್ದು, ವಿಶ್ವಕರ್ಮರು ಹಿಂದೆ ಬೀಳಲು ಇದು ಮುಖ್ಯ ಕಾರಣವಾಗಿದೆ. ಈ ನಿಟ್ಟಿನಲ್ಲಿ ವಿಶ್ವಕರ್ಮರು ಅವಲಂಬಿಸಿರುವ ಪಂಚ ಕುಲ ಕಸುಬಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. ತತ್ವ-ಧ್ಯೇಯ ಇಟ್ಟುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ವಿಶ್ವಕರ್ಮರು ಜಗತ್ತಿಗೆ ನೀಡಿರುವ ಕೊಡುಗೆ ಅಪಾರ ಎಂದು ಹೇಳಿದರು.

ಕಾರ್ಯಕ್ರಮವನ್ನು ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ನಿಗಮ ಮಂಡಳಿ ಸಹಾಯಧನದಲ್ಲಿ ಸಾಲಸೌಲಭ್ಯ, ವಿದ್ಯಾರ್ಥಿ ವೇತನ ಹಾಗೂ ವಾಸ್ತವ್ಯದ ಮನೆ ನಿರ್ಮಾಣಗಳ ಮೂಲಕ ವಿಶ್ವಕರ್ಮ ಸಮಾಜವನ್ನು ಗುರುತಿಸುವ ಕೆಲಸ ಮಾಡಿವೆ. ಆದರೂ ವಿಶ್ವಕರ್ಮ ಸಮಾಜದಲ್ಲಿ ಇನ್ನೂ ಬಡತನ ರೇಖೆಯ ಕೆಳಗಿನ ಬದುಕು ಸಾಗಿಸುವ ಸಾಕಷ್ಟು ಕುಟುಂಬಗಳಿವೆ. ಇಂತಹ ಕುಟುಂಬಗಳ ನೆರವಿಗಾಗಿ ಇನ್ನಷ್ಟು ಯೋಜನೆಗಳು ಸರ್ಕಾರಗಳಿಂದ ಜಾರಿಗೊಳ್ಳಲಿ. ಈ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಲಿ ಎಂದರು.

ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ, ಶಿಕ್ಷಣ ಇಲಾಖೆಯ ವಿಷ್ಣುಪ್ರಸಾದ್, ಪ್ರಭಾರ ಸಿಡಿಪಿಒ ಮಂಗಳ, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಉಪಸ್ಥಿತರಿದ್ದರು.

ತಾಲೂಕು ಕಚೇರಿಯ ದಯಾನಂದ ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ ಶರಣ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.