ಬೆಂಗಳೂರು : ದೇಶದ ಬಡ, ಮಧ್ಯಮ ವರ್ಗದ ಕುಟುಂಬಗಳು ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿರುವಾಗ ಪ್ರಧಾನಿ ಮೋದಿ‌ ಅವರ ಸರ್ಕಾರ ಎಲ್‌ಪಿಜಿ ಸಿಲಿಂಡರ್ ದರ 60 ರುಪಾಯಿ ಹೆಚ್ಚಿಸಿರುವುದು ನೆಲಕ್ಕೆ ಬಿದ್ದವನಿಗೆ ಒದ್ದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಿಲಿಂಡರ್ ಬೆಲೆ ಏರಿಕೆ ಅನಿವಾರ್ಯವಾಗಿರಲಿಲ್ಲ. ಶರಣಾಗತಿಯೇ ವಿದೇಶಾಂಗ ನೀತಿ, ರಾಜತಾಂತ್ರಿಕತೆ ಎಂಬುದು ಪ್ರದರ್ಶನದ ವಸ್ತು ಎಂದು ತಿಳಿದಿರುವುದರ ಫಲವೇ ಈ ದರ ಏರಿಕೆ. ಜಾಗತಿಕ ಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿಯವರು ಬಹಿರಂಗವಾಗಿ ದೇಶದ ಜನರ ಕ್ಷಮೆಯಾಚಿಸಿ, ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರು ಅಮೆರಿಕದ ಮಾತುಗಳಿಗೆ ಮೂಕರಂತೆ ತಲೆಯಾಡಿಸುವ ಮೂಲಕ ಭಾರತದ ವ್ಯೂಹಾತ್ಮಕ ಸ್ವಾತಂತ್ರ್ಯವನ್ನು ಬೇರೊಂದು ರಾಷ್ಟ್ರದ ಪಾದದಡಿ ಇಟ್ಟಿದ್ದಾರೆ. ರಷ್ಯಾ ಹಾಗೂ ಇರಾನ್‌ನಂಥ ದೇಶಗಳೊಂದಿಗಿನ ಭಾರತದ ದೀರ್ಘಕಾಲೀನ ಇಂಧನ ಸಹಭಾಗಿತ್ವ ಹಾಳುಗೆಡವಿದ್ದಾರೆ ಎಂದು ಟೀಕಿಸಿದ್ದಾರೆ.


ಜವಾಹರಲಾಲ್ ನೆಹರೂ ಅವರ ಪ್ರಕಾರ ‘ವಿದೇಶಾಂಗ ನೀತಿಯು ಆರ್ಥಿಕ ನೀತಿಯ ಪರಿಣಾಮವಾಗಿದೆ’. ನೆಹರೂ ಅವರು ಏಳೆಂಟು ದಶಕಗಳ ಹಿಂದೆಯೇ ನೀಡಿದ್ದ ಎಚ್ಚರಿಕೆ ಇಂದು ಅಕ್ಷರಶಃ ಸತ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇತ್ತೀಚೆಗೆ ತಮ್ಮ ಪುಸ್ತಕದಲ್ಲಿ ಮಾಜಿ ಸೇನಾಧಿಕಾರಿ ಜನರಲ್ ಎಂ.ಎಂ.ನರವಣೆ ಅವರು ಭಾರತದ ವಿದೇಶಾಂಗ ನೀತಿ ನಿರ್ಧಾರಗಳಲ್ಲಿ ಸಾಂಸ್ಥಿಕ ಸಮಾಲೋಚನೆ ಮತ್ತು ವ್ಯೂಹಾತ್ಮಕ ತಿಳಿವಳಿಕೆಯ ಕೊರತೆ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದ್ದರು. ಇಂದು ಪ್ರಧಾನಮಂತ್ರಿಗೆ ರಾಜತಾಂತ್ರಿಕ ನಿಲುವು ಮತ್ತು ಅದರ ಆರ್ಥಿಕ ಪರಿಣಾಮಗಳ ಮೂಲಭೂತ ತಿಳಿವಳಿಕೆಯ ಕೊರತೆ ಇದೆ ಎಂಬುದು ಖಚಿತವಾಗಿದೆ ಎಂದರು.

‘ಪ್ರಧಾನಿ ಕ್ಷಮೆ ಯಾಚಿಸಲಿಅಥವಾ ರಾಜೀನಾಮೆ ನೀಡ್ಲಿ’

ಭಾರತದ ಇಂದಿನ ವಿದೇಶಾಂಗ ನೀತಿ ವಿಫಲವಾಗಿದೆ. ಇದು ಪ್ರಧಾನಿ ಮೋದಿ ಅವರಿಗೆ ಎಫ್‌ಸ್ಟೀನ್ ಫೈಲ್ಸ್‌ನ ಬಗೆಗಿನ ಭಯ ಮತ್ತು ರಾಜತಾಂತ್ರಿಕ ತೀರ್ಮಾನಗಳ ಬಗ್ಗೆ ಇರುವ ಅಜ್ಞಾನ ತೋರಿಸುತ್ತದೆ. ಪ್ರಧಾನಿಗಳು ತಮ್ಮ ರಾಜತಾಂತ್ರಿಕ ವೈಫಲ್ಯಕ್ಕೆ ಕೋಟ್ಯಂತರ ಭಾರತೀಯರು ಯಾಕೆ ಬೆಲೆ ತೆರಬೇಕು ಎನ್ನುವುದನ್ನು ತಿಳಿಸಲಿ. ಜಾಗತಿಕ ಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿಯವರು ಬಹಿರಂಗವಾಗಿ ದೇಶದ ಜನರ ಕ್ಷಮೆಯಾಚಿಸಲಿ ಮತ್ತು ರಾಜೀನಾಮೆ ನೀಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮೋದಿಯ ಅವಧಿಯಲ್ಲಿ ದೇಶ ಸಾಲ 218 ಲಕ್ಷ ಕೋಟಿ:

ಕೇಂದ್ರದ ಸಾಲದ ಪ್ರಮಾಣ ₹218 ಲಕ್ಷ ಕೋಟಿ ಇದೆ. ಮೋದಿಯವರು ಅಧಿಕಾರಕ್ಕೆ ಬಂದ ನಂತರ ₹165 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದು ಸದರಿ ಕಾಯ್ದೆಯ ಪ್ರಕಾರ ಶೇ.55.6ರಷ್ಟಿದೆ. ಆದರೆ, ನಮ್ಮ ರಾಜ್ಯದ ಸಾಲದ ಪ್ರಮಾಣ, ಆರ್ಥಿಕ ಹೊಣೆಗಾರಿಕೆ ಕಾಯ್ದೆ ತಿಳಿಸಿರುವ ಮಾನದಂಡಗಳ ಮಿತಿಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರು ತಾಲೂಕು ಪಿಲ್ಲಹಳ್ಳಿಯ ಹೆಲಿಪ್ಯಾಡ್ ನಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯ ಬಜೆಟ್‌ ಬಗೆಗಿನ ಬಿಜೆಪಿ ಟೀಕೆ ಕುರಿತು ಪ್ರತಿಕ್ರಿಯಿಸಿ, ಅಭಿವೃದ್ಧಿಗಾಗಿ ಸಾಲ ಮಾಡಬೇಕಾಗುತ್ತದೆ. ಹೀಗಾಗಿ, ಸಾಲ ಮಾಡಿದ್ದೇನೆ. ರಾಜ್ಯದ ಮಿತಿಯ ಒಳಗಡೆ ಸಾಲ ಮಾಡಿದ್ದೇನೆ. ಸಾಲದಿಂದ ರಾಜ್ಯದ ಜನರಿಗೆ ಹೊರೆಯಾಗಿಲ್ಲ. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿದ ಅನ್ಯಾಯದಿಂದ ರಾಜ್ಯದ ಜನರಿಗೆ ಹೊರೆಯಾಗಿದೆ ಎಂದರು.

ಅಧಿಕಾರ ಬಲಾಢ್ಯರ ಕೈಯಲ್ಲಿ ಇರಬಾರದು. ಅಧಿಕಾರ ಎಲ್ಲರನ್ನು ಪ್ರೀತಿಸುವವರು, ಎಲ್ಲರನ್ನು ಸಮಾನವಾಗಿ ಕಾಣುವವರ ಕೈಯಲ್ಲಿ ಇರಬೇಕು.

- ಸಿದ್ದರಾಮಯ್ಯ, ಮುಖ್ಯಮಂತ್ರಿ.