ಕುಕ್ಕೆ ಸುಬ್ರಹ್ಮಣ್ಯನಿಗೆ ಸಂಭ್ರಮದ ಕಿರುಷಷ್ಠಿ ರಥೋತ್ಸವ

KannadaprabhaNewsNetwork |  
Published : Jan 06, 2025, 01:03 AM IST
32 | Kannada Prabha

ಸಾರಾಂಶ

ರಥಬೀದಿಯಿಂದ ಕಾಶಿಕಟ್ಟೆ ತನಕ ರಥೋತ್ಸವ ನೆರವೇರಿತು. ಸವಾರಿ ಮಂಟಪದ ಕಿರುಷಷ್ಠಿ ಕಟ್ಟೆಯಲ್ಲಿ ದೇವರಿಗೆ ಪೂಜೆ ನೆರವೇರಿತು. ಆಕರ್ಷಕ ಸುಡುಮದ್ದುಗಳು ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದವು. ದೇವಳದ ಹೊರಾಂಗಣದಲ್ಲಿ ಪಾಲಕಿ ಉತ್ಸವ, ಬಂಡಿ ಉತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿಯ ದಿನ ಭಾನುವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವವು ಭಕ್ತಿ ಸಡಗರದಿಂದ ನೆರವೇರಿತು.

ಸಹಸ್ರಾರು ಸಂಖ್ಯೆಯ ಭಗವದ್ಬಕ್ತರ ಪರಾಕುಗಳೊಂದಿಗೆ ತಳಿರು, ತೋರಣ, ಸೀಯಾಳ, ಅಡಕೆ, ಬಾಳೆ, ಬಾಳೆಗೊನೆ ಮತ್ತು ವಿದ್ಯುತ್ ಅಲಂಕಾರದ ರಥದಲ್ಲಿ ಶ್ರೀ ದೇವರ ಉತ್ಸವ ನೆರವೇರಿತು ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಯಡಪಡಿತ್ತಾಯರು ದೇವರಿಗೆ ಪೂಜೆ ನೆರವೇರಿಸಿದರು. ಬಳಿಕ ವೈಭವದ ರಥೋತ್ಸವ ನೆರವೇರಿತು.

ರಥಬೀದಿಯಿಂದ ಕಾಶಿಕಟ್ಟೆ ತನಕ ರಥೋತ್ಸವ ನೆರವೇರಿತು. ಸವಾರಿ ಮಂಟಪದ ಕಿರುಷಷ್ಠಿ ಕಟ್ಟೆಯಲ್ಲಿ ದೇವರಿಗೆ ಪೂಜೆ ನೆರವೇರಿತು. ಆಕರ್ಷಕ ಸುಡುಮದ್ದುಗಳು ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದವು. ದೇವಳದ ಹೊರಾಂಗಣದಲ್ಲಿ ಪಾಲಕಿ ಉತ್ಸವ, ಬಂಡಿ ಉತ್ಸವ ನಡೆಯಿತು.

ಸಂಗೀತ ಪ್ರಿಯ ಷಣ್ಮುಖ: ಬಳಿಕ ನಡೆದ ಒಳಾಂಗಣ ಉತ್ಸವದಲ್ಲಿ ಅನೇಕ ಸಂಗೀತಮಯ ಉತ್ಸವದ ಸುತ್ತುಗಳು ನೆರವೇರಿತು. ಶ್ರೀಲಂಕಾ, ತಮಿಳುನಾಡು, ಕೇರಳ, ಮೈಸೂರು, ಶ್ರೀ ರಂಗಪಟ್ಟಣ ಮೊದಲಾದ ಪ್ರದೇಶಗಳ ಕಲಾವಿದರಿಂದ ಸ್ಯಾಕ್ಸೋಪೋನ್, ನಾದಸ್ವರ, ತವಿಲ್, ಬ್ಯಾಂಡ್ ಮೊದಲಾದ ಸಂಗೀತ ವಾದ್ಯಗಳ ಉತ್ಸವಗಳ ಸುತ್ತುಗಳು ಭಕ್ತಾದಿಗಳನ್ನು ಭಾವಪರವಶವಾಗುವಂತೆ ಮಾಡಿತು. ಕೇರಳ ಶೈಲಿಯ ಚೆಂಡೆ ವಾದನದ ಕೂಡಾ ನಡೆಯಿತು.ಅವಳಿ ಉತ್ಸವ: ಈ ದಿನ ಕಿರುಷಷ್ಠಿ ಉತ್ಸವದ ಸಂದರ್ಭ ಶ್ರೀ ದೇವರಿಗೆ ಅವಳಿ ಉತ್ಸವ ನಡೆಯುವುದು ವಿಶೇಷ. ಆರಂಭದಲ್ಲಿ ಕಿರುಷಷ್ಠಿ ರಥೋತ್ಸವದ ಬಳಿಕ ವಿವಿಧ ಸಂಗೀತ ಸುತ್ತುಗಳು ನೆರವೇರಿತು. ಬಳಿಕ ಮಾಮೂಲಿನಂತೆ ಶ್ರೀ ದೇವರ ರಾತ್ರಿ ಮಹಾಪೂಜೆ ನಡೆದು ನಂತರ ಪ್ರತಿನಿತ್ಯದಂತೆ ದೇವರ ಬಂಡಿ ಮತ್ತು ಪಾಲಕಿ ಉತ್ಸವ ಮತ್ತು ಸಂಗೀತ ಸುತ್ತುಗಳು ನೆರವೇರಿತು.ಅಲ್ಲದೆ ಒಳಾಂಗಣದಲ್ಲಿ ಶ್ರೀ ದೇವರಿಗೆ ಮಂಟಪ ಪೂಜೆ ನಡೆಯಿತು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ, ಅಚ್ಚುತ್ತ ಗೌಡ ಬಳ್ಪ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತರ ಉದಯಕುಮಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್. ಮತ್ತಿತರರಿದ್ದರು.ಎಡೆಸ್ನಾನ ಸೇವೆ:

ಕಿರುಷಷ್ಠಿ ಮಹೋತ್ಸವದ ಅಂಗವಾಗಿ ದೇವಳದಲ್ಲಿ ೫೦ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು. ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಕಿರುಷಷ್ಠಿ ಜಾತ್ರೋತ್ಸವದ ಷಷ್ಠಿ ಯ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. ಗೋವು ತಿಂದ ಎಲೆಯ ಮೇಲೆ ಉರುಳು ಸೇವೆ ಮಾಡುತ್ತಾ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಭಕ್ತರು ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ಪ್ರಸಾದ ಮತ್ತು ಪ್ರಸಾದ ಬೋಜನ ಸ್ವೀಕರಿಸಿದರು.ಭಕ್ತರ ಸಂದಣಿ...ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದು ಸೇವೆಗಳನ್ನು ನೆರವೇರಿಸಿದರು. ವಾರಾಂತ್ಯ ಹಾಗೂ ಕಿರುಷಷ್ಠಿ ಒಂದೇ ದಿನ ಬಂದುದರಿಂದ ದೇವಳಕ್ಕೆ ಅಸಂಖ್ಯಾತ ಭಕ್ತರು ಆಗಮಿಸಿದ್ದರು. ದೇವಳದ ಒಳಾಂಗಣ ಹೊರಾಂಗಣ ಹಾಗೂ ಕ್ಷೇತ್ರದ ಎಲ್ಲ ಕಡೆಗಳಲ್ಲಿಯೂ ಭಕ್ತ ಸಂದಣಿ ಕಂಡು ಬಂತು. ದೇವರ ಪ್ರಸಾದ ಹಾಗೂ ಅನ್ನಪ್ರಸಾದವನ್ನು ಸ್ವೀಕರಿಸಿದರು.

ಭಕ್ತರಿಗೆ ತೊಂದರೆ ಆಗದ ಹಾಗೆ ಅನುಕೂಲಕರ ರೀತಿಯಲ್ಲಿ ದೇವರ ದರ್ಶನ, ದೇವರ ಪ್ರಸಾದ, ಹಾಗೂ ಭೋಜನ ಪ್ರಸಾದಕ್ಕೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಕ್ತರ ಅನುಕೂಲತೆಗಾಗಿ ಷಣ್ಮುಖ ಪ್ರಸಾದ ಭೋಜನ ಶಾಲೆಯಲ್ಲಿ ೧೦.೩೦ರಿಂದ ಭೋಜನ ಪ್ರಸಾದ ವಿತರಣೆ ಆರಂಭವಾಗಿ ೪ ಗಂಟೆ ತನಕ ನಡೆಯಿತು. ಭಕ್ತರ ವಿಶೇಷ ಅನುಕೂಲತೆಗಾಗಿ ಆದಿ ಸುಬ್ರಹ್ಮಣ್ಯ ಸಭಾಂಗಣದಲ್ಲಿ ಬಫೆ ಮಾದರಿಯ ವ್ಯವಸ್ಥೆ ಮಾಡಲಾಗಿತ್ತು. ಕಿರುಷಷ್ಠಿ ನಿಮಿತ್ತ ವಿವಿಧ ಭಕ್ಷ್ಯಗಳನ್ನು ಭಕ್ತರಿಗೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!