ಬೆಂಗಳೂರು : ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯು ಬೇರೊಬ್ಬರನ್ನು ಮದುವೆ ಆಗಿದ್ದಾರೆ ಎಂಬ ಕಾರಣಕ್ಕೆ ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ದಾಖಲಾದ ಪ್ರಕರಣ ರದ್ದುಪಡಿಸಲಾಗದು ಎಂದು ಹೈಕೋರ್ಟ್ ಹೇಳಿದೆ.
ಸಂತ್ರಸ್ತೆ ಬೇರೊಬ್ಬನನ್ನು ಮದುವೆಯಾಗಿದ್ದಾರೆ ಮತ್ತು ಪ್ರಕರಣದ ಸಹ ಆರೋಪಿಗಳು ಖುಲಾಸೆಯಾಗಿದ್ದಾರೆ ಎಂಬ ಕಾರಣಕ್ಕೆ ಪೋಕ್ಸೋ ಕಾಯ್ದೆಯಡಿ ತನ್ನ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ದೇವನಹಳ್ಳಿ ತಾಲೂಕಿನ ನಿವಾಸಿ ಪಾಲಾಕ್ಷ ಕುಮಾರ್ (34) ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಅರ್ಜಿದಾರನು ಪ್ರಕರಣದಲ್ಲಿ ಮೊದಲನೇ ಆರೋಪಿ
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ, ಅರ್ಜಿದಾರನು ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿದ್ದಾನೆ. ಪ್ರಕರಣದ ಇತರೆ ಆರೋಪಿಗಳು ಖುಲಾಸೆಯಾಗಿದ್ದಾರೆ ಅಂದ ಮಾತ್ರಕ್ಕೆ ಆ ಆದೇಶ ಅರ್ಜಿದಾರನಿಗೆ ಹೇಗೆ ಅನ್ಬಯಿಸುತ್ತದೆ ಎಂದು ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರನ ಪರ ವಕೀಲ, ಸಂತ್ರಸ್ತೆ ರಾಜೀ ಸಂಧಾನ ಮೂಲಕ ಪ್ರಕರಣವನ್ನು ಬಗೆಹರಿಸಿಕೊಳ್ಳಲು ಸಿದ್ಧರಿದ್ದಾರೆ ಎಂದು ಹೇಳಿದರು.
ಅದಕ್ಕೆ ನ್ಯಾಯಪೀಠ, ಸಂತ್ರಸ್ತೆ ಅರ್ಜಿದಾರನನ್ನು ಮದುವೆಯಾಗಿಲ್ಲ, ಆಕೆ ಬೇರೊಬ್ಬರನ್ನು ಮದುವೆಯಾದರೆ ಅರ್ಜಿದಾರನ ಮೇಲಿನ ಆರೋಪ ಹೇಗೆ ಅಳಿಸಿಹೋಗುತ್ತದೆ? ಮೊದಲನೆ ಆರೋಪಿಯಾಗಿರುವ ಅರ್ಜಿದಾರನ ಮೇಲೆ ಪೋಕ್ಸೋ ಕಾಯ್ದೆಯ ಸೆಕ್ಷನ್ 3 ಮತ್ತು 4 ಅಡಿಯ ಲೈಂಗಿಕ ದೌರ್ಜನ್ಯ ಅಪರಾಧದ ಆರೋಪಗಳಿವೆ. ಪ್ರಕರಣದ ಸಹ ಆರೋಪಿಗಳು ಖುಲಾಸೆಯಾದರೆಂದು ಅರ್ಜಿದಾರ ಖುಲಾಸೆಯಾಗಲ್ಲ. ವಿಚಾರಣಾ ನ್ಯಾಯಾಲಯದ ಮುಂದೆ ಹೋಗಿ ವಿಚಾರಣೆ ಎದುರಿಸಿ ಎಂದು ತಾಕೀತು ಮಾಡಿದರು.
ಅಪರಾಧಗಳು ಅಳಿಸಿ ಹೋಗುವುದಿಲ್ಲ
ಸಂತ್ರಸ್ತೆ ಬೇರೊಬ್ಬರನ್ನು ಮದುವೆಯಾಗಿದ್ದಾರೆ. ಅಂದ ಮಾತ್ರಕ್ಕೆ ಅರ್ಜಿದಾರರ ಮೇಲಿನ ಅಪರಾಧಗಳು ಅಳಿಸಿ ಹೋಗುವುದಿಲ್ಲ. ಪ್ರಕರಣವನ್ನು ರಾಜೀ ಮಾಡಲಾಗದು. ಅರ್ಜಿಯನ್ನು ವಜಾಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಅರ್ಜಿದಾರ ವಿರುದ್ಧದ ಪ್ರಕರಣ ರದ್ದುಪಡಿಸಲಾಗದು ಎಂದು ನುಡಿದು ಆದೇಶ ಬರೆಯಿಸಲು ಮುಂದಾದರು.
ಇದರಿಂದ ಅರ್ಜಿದಾರರ ಪರ ವಕೀಲ, ಅರ್ಜಿ ಹಿಂಪಡೆಯಲು ಅನುಮತಿಸಬೇಕು ಎಂದು ಕೋರಿದರು ಆಗ ನ್ಯಾಯಪೀಠ, ಅರ್ಜಿ ಹಿಂಪಡೆಯಲು ಅನುಮತಿ ನೀಡಿತು.
