ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಧ್ಯರಾತ್ರಿ ನಡೆದ ಕಾಮದಹನದ ಪ್ರಕ್ರಿಯೆಗೆ ಕಿಲ್ಲಾ ಓಣಿಯ ಬಸವಪ್ರಭು ಸರನಾಡಗೌಡರ ಮನೆಯಿಂದ ಹಲಿಗೆ ಹಾಗೂ ನಿಶಾನೆಯನ್ನು ತೆಗೆದುಕೊಂಡು, ನಾರಾಯಣ ಕುಲಕರ್ಣಿ ಅವರ ಜೊತೆಗೂಡಿ ಅಂಬೇಡ್ಕರ ಗಲ್ಲಿಯಲ್ಲಿರುವ ರಾಮಚಂದ್ರ ಖಾತೆದಾರ ಮನೆಯಿಂದ ಬೆಂಕಿಯನ್ನು ತಂದು ಮೊದಲ ಕಾಮದಹನ ನಡೆಸುವ ಮೂಲಕ ಪರಂಪರೆಯ ಹೋಳಿಗೆ ವೈಭವದ ಚಾಲನೆ ನೀಡಲಾಯಿತು.
ಕಾಮದಹನಕ್ಕೂ ಮನ್ನ ಕಾಮಣ್ಣನಿಗೆ ವಿಶೇಷ ಪೂಜೆ ಮಾಡಲಾಯಿತು. ಮಹಿಳೆಯರಿಂದ ಆರತಿ, ಕಾಯಿ ಕರ್ಫೂರ ಬೆಳಗಲಾಯಿತು. ಹಲಿಗೆ, ಶಹನಾಯಿ ಸೇರಿದಂತೆ ವಿವಿಧ ವಾದ್ಯಗಳನ್ನು ನುಡಿಸಲಾಯಿತು.ಭಾವೈಕ್ಯತೆಯ ಸಂಕೇತವಾಗಿರುವ ಬಾಗಲಕೋಟೆಯ ಹೋಳಿಹಬ್ಬದ ಮೊದಲ ಕಾಮದಹನದ ನಂತರ ನಗರದ ವಿವಿಧ ಬಡಾವಣೆಗಳಲ್ಲಿ ಜಾತಿ, ಮತ, ಕುಲ ಸಮಾಜದ ಅಂತಸ್ತುಗಳನ್ನು ಬದಿಗಿಟ್ಟು ಸಂಪ್ರದಾಯದ ಪ್ರಕಾರ ಕಾಮದಹನವನ್ನು ನೆರವೇರಿಸಿದರೆ, ಯುವ ಸಮೂಹ ಹಲಗೆ ಬಾರಿಸುವ ಮೂಲಕ ಕಾಮದಹನಕ್ಕೆ ಕಳೆಕಟ್ಟಿದರು. ಬುಧವಾರದಿಂದ ಆರಂಭವಾಗುವ ಬಣ್ಣದಾಟ ಮೂರು ದಿನಗಳ ಕಾಲ ನಡೆಯಲಿದ್ದು, ಬಣ್ಣದಾಟದಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಲಿದ್ದಾರೆ.
ಭದ್ರತೆಗೆ ನೂರಾರು ಪೊಲೀಸರು: ಬಾಗಲಕೋಟೆ ಜಿಲ್ಲೆಯಲ್ಲಿ ಶಾಂತ ರೀತಿಯಿಂದ ಹೋಳಿ ಆಚರಿಸಲು ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಡಿಎಸ್ಪಿ, ಸಿಪಿಐ, ಪಿಎಸ್ಐ, ಡಿಆರ್, ಕೆಎಸ್ಆರ್‌ಪಿ ತುಕಡಿಗಳು, ಗೃಹ ರಕ್ಷಕ ದಳದ ಸಿಬ್ಬಂದಿ, ಗಸ್ತು ವಾಹನಗಳನ್ನು ನಿಯೋಜನೆ ಮಾಡಲಾಗಿದೆ.