ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಹೊಳೆನರಸೀಪುರ ತಾಲೂಕಿಗೆ ಶುಕ್ರವಾರ ಆಗಮಿಸಿದ ಸಂವಿಧಾನ ಜಾಗೃತಿ ರಥಕ್ಕೆ ತಾಲೂಕು ಆಡಳಿತ, ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಭವ್ಯ ಸ್ವಾಗತ ನೀಡಿದರು. ಬೆಳಿಗ್ಗೆ 9.30 ರ ವೇಳೆಗೆ ತಾಲೂಕಿನ ಗಡಿ ಗ್ರಾಮ ನ್ಯಾಮನಹಳ್ಳಿಗೆ ಆಗಮಿಸಿದ ರಥಕ್ಕೆ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಹಂಗರಹಳ್ಳಿಯ ವೇದಿಕೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ತಾಲೂಕು ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಪುಷ್ಪಾರ್ಚನೆ ಮಾಡಿದರು. ತಾಪಂ ಇಒ ಗೋಪಾಲ್ ಮಾತನಾಡಿ, ಹತ್ತಾರು ಧರ್ಮ, ಸಾವಿರಾರು ಜಾತಿ ವಿವಿಧ ಬಗೆಯ ಆಚರಣೆಗಳನ್ನು ಹೊಂದಿರುವ ಭವ್ಯ ಭಾರತಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅತ್ಯುತ್ತಮವಾದ ಸಂವಿಧಾನ ನೀಡಿದ್ದಾರೆ. ನಮ್ಮ ಸಂವಿಧಾನ 6 ಮೂಲಭೂತ ಹಕ್ಕು ಹಾಗೂ 11 ಕರ್ತವ್ಯಗಳನ್ನು ಹೊಂದಿದೆ. ಇವುಗಳನ್ನು ಗೌರವಿಸಿ ನಡೆದುಕೊಂಡರೆ ಎಲ್ಲರೂ ನೆಮ್ಮದಿಯಾಗಿ ಇರಬಹುದು ಎಂದರು. ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಮಾತನಾಡಿ, 75 ನೇ ಸಂವಿಧಾನ ದಿನಾಚರಣೆಯನ್ನು ಸರ್ಕಾರ ಅತ್ಯಂತ ಸಂಭ್ರಮದಿಂದ ಆಚರಿಸಲು ವ್ಯವಸ್ಥೆ ಮಾಡಿದೆ. ನಾಡಿನ ಜನರು ಸಂವಿಧಾನ ಜಾಗೃತಿ ರಥವನ್ನು ಅತ್ಯಂತ ಗೌರವ ಹಾಗೂ ಶ್ರದ್ಧೆಯಿಂದ ಸ್ವಾಗತಿಸಿದ್ದಾರೆ. ಈ ರಥ ತಾಲೂಕಿನ ಪ್ರತೀ ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಲಿದೆ ಎಂದರು. ಉಪನ್ಯಾಸಕ ಸತೀಶ್ ಸಂವಿಧಾನ ವಿಧಿಯನ್ನು ಬೋಧಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ, ರೈತ ಗೀತೆ ಹಾಡಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೌಸರ್ ಅಹಮದ್, ಬಿಇಒ ಸೋಮಲಿಂಗೇಗೌಡ, ಸಮಾಜ ಸೇವಕ ಎನ್.ಆರ್. ಅನಂತಕುಮಾರ್, ಹಂಗರಹಳ್ಳಿ ಲಕ್ಷ್ಮಣ, ಕೃಷಿ ಅಧಿಕಾರಿ ಸಪ್ನಾ, ಮೀನುಗಾರಿಕೆ ಇಲಾಖೆ ಅಧಿಕಾರಿ ಸುಮಾ, ತೋಟಗಾರಿಕೆ ಇಲಾಖೆ ಅಧಿಕಾರಿ ರಘು, ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್, ಪಶುವೈದ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಮಂಜುನಾಥ್, ಸಮಾಜ ಸೇವಕ ಎನ್.ಆರ್. ಅನಂತ್‌ಕುಮಾರ್, ಹಂಗರಹಳ್ಳಿ ಲಕ್ಷ್ಮಣ್, ಕಿತ್ತೂರುರಾಣಿ ಚೆನ್ನಮ್ಮ ಶಾಲೆಯ ಪ್ರಾಂಶುಪಾಲೆ ಭಾಗ್ಯಲಕ್ಷ್ಮಿ, ಗ್ರಾಪಂ ಅಧ್ಯಕ್ಷೆ ಸುಮಾ, ವಿವಿಧ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.