ಶತಮಾನ ಕಂಡ ಶಾಲೆಯಲ್ಲಿ ಕೊರತೆಗಳ ಕಾರುಬಾರು

KannadaprabhaNewsNetwork |  
Published : Aug 13, 2025, 12:30 AM IST
ಚಿತ್ರ 3 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಆದಿವಾಲದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದೊಳಗೆ ಕೊಳಚೆ ನೀರು ಹರಿಯುತ್ತಿರುವುದು.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಕಳೆದ ಫೆಬ್ರವರಿಗೆ ಆದಿವಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬರೋಬ್ಬರಿ 100 ವರ್ಷ ತುಂಬಿದ್ದು, 1925 ರಲ್ಲಿ ಶುರುವಾದ ಈ ಶಾಲೆ ಶತಮಾನ ಕಂಡರೂ ಕೂಡ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ. ಕೊಠಡಿ ಕೊರತೆ, ಅಡುಗೆ ಕೋಣೆ ಕೊರತೆ, ಮಳೆಗಾಲದಲ್ಲಿ ಸೋರುವ ಕೊಠಡಿಗಳು, ಕೊಚ್ಚೆ ತುಂಬಿದ ಆಟದ ಮೈದಾನ ಹೀಗೇ ಹಲವು ಇಲ್ಲಗಳ ನಡುವೆ ಕೊನೆಗೂ ಶತಮಾನ ಮುಗಿಸಿದೆ.

1 ರಿಂದ 8ನೇ ತರಗತಿವರೆಗೆ ಎಲ್‌ಕೆಜಿ, ಯುಕೆಜಿಯೂ ಸೇರಿದಂತೆ 270 ಮಕ್ಕಳಿವೆ. ಅಷ್ಟು ಮಕ್ಕಳಿಗೆ 9 ಶಾಲಾ ಕೊಠಡಿಗಳಿವೆ. ಆದರೆ ಆ 9 ಶಾಲಾ ಕೊಠಡಿಗಳಲ್ಲಿ 4-5 ಕೊಠಡಿಗಳು ಸೋರುತ್ತವೆ. ಕೆಲವೊಮ್ಮೆ ಮಕ್ಕಳು ಹೊರಗೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಉಂಟಾಗುತ್ತದೆ. ಈಗಾಗಲೇ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳು ಒಂದೇ ಕೊಠಡಿಯಲ್ಲಿ ಕೂರುತ್ತಿವೆ. ಜಿಂದಾಲ್ ಕಂಪನಿಯವರು ಶಾಲೆಗೆ ಕಂಪ್ಯೂಟರ್, ಅಲ್ಮೆರಾ, ಡೆಸ್ಕ್, ಲೈಬ್ರರಿ ಬುಕ್ಸ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಆದರೆ ಅವುಗಳನ್ನು ಇಡಲು ಕೊಠಡಿ ಕೊರತೆಯಿದೆ. ಸ್ಟೋರ್‌ರೂಮ್ ಇಲ್ಲದ್ದಕ್ಕೆ ಮುಖ್ಯ ಶಿಕ್ಷಕರ ಕೊಠಡಿಯಲ್ಲೇ ರೇಷನ್ ಸಂಗ್ರಹಿಸಲಾಗಿದೆ. ಶಾಲೆಯ ಮೈದಾನವಂತೂ ಮಳೆ ಬಂದರೆ ಅಕ್ಷರಶಃ ಕಂಬಳದ ಗದ್ದೆಯಾಗುತ್ತದೆ. ಸಾಲದೆಂಬಂತೆ ಅಡುಗೆ ಕೋಣೆಯ ನೀರು, ಶೌಚಾಲಯದ ನೀರು, ಟ್ಯಾಂಕ್ ನ ನೀರು ಹರಿದು ಹೊರ ಹೋಗಲು ವ್ಯವಸ್ಥೆ ಮಾಡಿಲ್ಲವಾದ್ದರಿಂದ ಆ ಎಲ್ಲಾ ವೇಸ್ಟ್ ನೀರು ನೇರವಾಗಿ ಮೈದಾನದೊಳಗೆ ಹರಿದು ಹೋಗುತ್ತದೆ. ಧ್ವಜದ ಕಟ್ಟೆಯ ಪಕ್ಕವೇ ಕೊಳಕು ನೀರು ಹರಿದು ಹೋಗುತ್ತವೆ.

ಆ ವೇಸ್ಟ್ ನೀರನ್ನು ಒಂದು ಪೈಪ್ ಲೈನ್ ಮೂಲಕ ಮೈದಾನದಿಂದ ಹೊರಗಿನ ಒಂದು ಚರಂಡಿಗೆ ಸೇರಿಸುವ ಕೆಲಸವೂ ಇದುವರೆಗೂ ಆಗಿಲ್ಲ. ಇನ್ನೂ ಅಡುಗೆ ಕೋಣೆಯಂತೂ ಕಿಸ್ಕಿಂದೆಯಾಗಿದೆ. 270 ಮಕ್ಕಳಿಗೆ ಅಡುಗೆ ತಯಾರಿಸುವ ಕೋಣೆ ಕೇವಲ 10×10 ಅಡಿ ಅಳತೆಯಲ್ಲಿದೆ. ಇಕ್ಕಟ್ಟಾದ ಸ್ಥಳದಲ್ಲಿಯೇ ಅಡುಗೆ ತಯಾರಾಗುವ ಜೊತೆಗೆ ಮಳೆ ಬಂದರೆ ಸೀದಾ ಮಳೆ ನೀರು ಅಡುಗೆ ಕೋಣೆ ಸೇರುತ್ತವೆ. ಆಗೆಲ್ಲಾ ಹೊರಗೇ ಅಡುಗೆ ತಯಾರಿಸುವ ಪರಿಸ್ಥಿತಿ ಇರುತ್ತದೆ ಎಂದು ಅಡುಗೆ ಸಹಾಯಕರು ಗೋಳಾಡುತ್ತಾರೆ. ಶಾಲೆಗೆ ಹೊಸದಾಗಿ ಕಾಂಪೌಂಡ್ ನಿರ್ಮಿಸಲಾಗಿದೆ. ಆದರೆ ಅದಕ್ಕೆ ಗೇಟ್ ಹಾಕಿಯೇ ಇಲ್ಲ. ರಾತ್ರಿ ಕಳೆದು ಬೆಳಗಾದರೆ ಪೋಲಿ ಹುಡುಗರು ಮಾಡಿಟ್ಟು ಹೋದ ಕಸವನ್ನು ದಿನವೂ ಸ್ವಚ್ಛ ಮಾಡಬೇಕಾಗಿದೆ. ಗುಟ್ಕಾ ಪಾಕೆಟ್, ಬೀಡಿ, ಸಿಗರೇಟ್ ತುಂಡುಗಳನ್ನು ಗುಡಿಸಿ ಹಾಕುವುದು ನಿತ್ಯದ ಕರ್ಮವಾಗಿದೆ. ಕಾಂಪೌoಡ್ ನಿರ್ಮಿಸಿದ ನಂತರ ಅದಕ್ಕೊಂದು ಗೇಟ್ ಅಳವಡಿಸಲು ಆಗಿಲ್ಲದಿರುವುದು ದುರಂತದ ಸಂಗತಿ. 11 ಶಿಕ್ಷಕರು ಮತ್ತು ಇಬ್ಬರು ಅತಿಥಿ ಶಿಕ್ಷಕರು ಇರುವ ಶತಮಾನದ ಶಾಲೆಯಲ್ಲಿ ಕೊಠಡಿಗಳದೇ ದೊಡ್ಡ ಸಮಸ್ಯೆ. ಶತಮಾನದ ಸಂಭ್ರಮದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು 6 ಕೊಠಡಿಗಳ ನಿರ್ಮಾಣದ ಭರವಸೆ ನೀಡಿದ್ದು ಆ ಭರವಸೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಬೇಕಾಗಿದೆ. ನೂರು ವರ್ಷ ಕಂಡ ಸರ್ಕಾರಿ ಶಾಲೆಗೆ ಕಾಯಕಲ್ಪ ತುಂಬುವ ತುರ್ತು ಅವಶ್ಯಕತೆ ಇದೆ.

ಶಾಲೆಯ ಅವ್ಯವಸ್ಥೆ ಅರಿವಿದ್ದರೂ ಗಮನ ಹರಿಸದ ಗ್ರಾಮಸ್ಥರು

ಸಾಮಾಜಿಕ ಕಾರ್ಯಕರ್ತ ಚಮನ್ ಷರೀಫ್ ಮಾತನಾಡಿ, ಶಾಲೆಗಳನ್ನು ಬಲಪಡಿಸುವ ಸಂಪೂರ್ಣ ಜವಾಬ್ದಾರಿಯೂ ಗ್ರಾಮ ಪಂಚಾಯಿತಿಯದ್ದು ಆಗಿರುತ್ತದೆ. ನಮ್ಮೂರಿನಲ್ಲಿ ಶಾಲೆಯತ್ತ ಗಮನಹರಿಸದಿರುವುದನ್ನು ಕಾಣಬಹುದಾಗಿದೆ. ಶಾಲೆಯ ಅವ್ಯವಸ್ಥೆಯ ಬಗ್ಗೆ ಅರಿವಿದ್ದರೂ ಸಹ ಸೊಲ್ಲು ಎತ್ತದ ಜನ ನಮ್ಮೂರಿನಲ್ಲಿದ್ದಾರೆ. ಜನರ ಅಸಡ್ಡೆಯೂ ಶಾಲೆಯ ಈ ಪರಿಸ್ಥಿತಿಗೆ ಕಾರಣವಾಗಿದೆ. ಶಾಲಾ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಮೈದಾನದಲ್ಲಿನ ಕೊಳಚೆ ನೀರು ಸರಾಗವಾಗಿ ಚರಂಡಿಗೆ ಹರಿಯುವ ವ್ಯವಸ್ಥೆ ಮಾಡಬೇಕಿದೆ. ತುರ್ತಾಗಿ ಒಂದು ವಿಶಾಲ ಅಡುಗೆ ಕೋಣೆ ನಿರ್ಮಾಣವಾಗಬೇಕಿದೆ. ಮೇಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ