ಕನಕಗಿರಿ ಜಾತ್ರೆಗೆ ಸಿದ್ಧಗೊಂಡ ರಥ

KannadaprabhaNewsNetwork | Published : Mar 21, 2025 12:35 AM

ಸಾರಾಂಶ

ಸಿರಗುಪ್ಪ ತಾಲೂಕಿನ ಕುಡದರಹಾಳು, ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರ, ಕನಕಗಿರಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಭಕ್ತರು ಪಾದಯಾತ್ರೆ ಮೂಲಕ ಕನಕಾಚಲ ಸನ್ನಿಧಾನಕ್ಕೆ ಬರುತ್ತಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ಪಾದಯಾತ್ರೆ ಬರುವ ಭಕ್ತರ ಸಂಖ್ಯೆಯಲ್ಲಿ ಅಧಿಕವಾಗಿದೆ.

ಎಂ. ಪ್ರಹ್ಲಾದ್

ಕನಕಗಿರಿ:

ಎರಡನೇ ತಿರುಪತಿ ಎಂಬ ಹೆಗ್ಗಳಿಕೆ ಪಾತ್ರವಾದ ಶ್ರೀಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆಗೆ ಕನಕಗಿರಿ ಸಜ್ಜುಗೊಂಡಿದ್ದು, ಸಿದ್ಧತೆಗಳು ಬರದಿಂದ ಸಾಗಿವೆ. ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.

ವಿದ್ಯುತ್ ದೀಪಾಲಂಕಾರದಿಂದ ದೇಗುಲದ ಗೋಪುರ, ಮಧ್ಯ ಮಂಟಪ, ಹೊರ-ಒಳ ಭಾಗಗಳು ಝಗಮಗಿಸುತ್ತಿವೆ. ಬಸ್ ನಿಲ್ದಾಣದಿಂದ ದೇಗುಲಕ್ಕೆ ಬರುವ ಮುಖ್ಯರಸ್ತೆ ಹಾಗೂ ರಾಜಬೀದಿಯುದ್ದಕ್ಕೂ ಇರುವ ಪಂಪಾಪತಿ, ಗಜಲಕ್ಷ್ಮೀ, ತೇರಿನ ಹನುಮಪ್ಪ, ರಾಮಲಿಂಗೇಶ್ವರ ಸೇರಿ ನಾನಾ ದೇಗುಲಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ದಾಸೋಹಕ್ಕೆ ಚಾಲನೆ:

ಪ್ರತಿ ವರ್ಷವೂ ಸಹ ಸಚ್ಚಿದಾನಂದ ಅವಧೂತರ ಮಠದಲ್ಲಿ ಎರಡು ದಿನ ನಡೆಯುವ ದಾಸೋಹಕ್ಕೆ ದಾಸಪ್ಪನವರಿಂದ ಶಂಖ, ಜಾಗಟೆ ಬಾರಿಸಿ ಪ್ರಸಾದ ಸ್ವೀಕರಿಸುವ ಮೂಲಕ ಚಾಲನೆ ಸಿಕ್ಕಿತು. ಜಾತ್ರೆಗೆ ಬಂದ ಸಾವಿರಾರು ಭಕ್ತರಿಗೆ ಹುಗ್ಗಿ, ಬದನೆಕಾಯಿ ಪಲ್ಲೆ ಹಾಗೂ ಅನ್ನ ಸಾಂಬರ ಸ್ವೀಕರಿಸಿದರು. ರೊಟ್ಟಿ, ದವಸ, ಧಾನ್ಯವನ್ನು ಸ್ಥಳೀಯರು ದೇಣಿಗೆ ನೀಡಿದರು.

ಹೆಚ್ಚಿದ ಪಾದಯಾತ್ರಿಕರ ಸಂಖ್ಯೆ:

ಸಿರಗುಪ್ಪ ತಾಲೂಕಿನ ಕುಡದರಹಾಳು, ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರ, ಕನಕಗಿರಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಭಕ್ತರು ಪಾದಯಾತ್ರೆ ಮೂಲಕ ಕನಕಾಚಲ ಸನ್ನಿಧಾನಕ್ಕೆ ಬರುತ್ತಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ಪಾದಯಾತ್ರೆ ಬರುವ ಭಕ್ತರ ಸಂಖ್ಯೆಯಲ್ಲಿ ಅಧಿಕವಾಗಿದೆ.

ದೀರ್ಘದಂಡ ನಮಸ್ಕಾರ:

ಜಿಲ್ಲೆ ಸೇರಿ ನೆರೆಯ ಜಿಲ್ಲೆಯ ಭಕ್ತರ ಇಷ್ಟಾರ್ಥಗಳು ಈಡೇರಿದ್ದರಿಂದ ದೇಗುಲದಲ್ಲಿ ನೂರಾರು ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ತಮ್ಮ ಹರಿಕೆ ತೀರಿಸಿ ಧನ್ಯತೆ ಮೆರೆದರು.

ರಥೋತ್ಸವಕ್ಕೆ ಅಲಂಕಾರ:

ಮೂಲಾ ನಕ್ಷತ್ರದಲ್ಲಿ ರಥೋತ್ಸವ ನಡೆಯಲಿದ್ದು, ದೇವಸ್ಥಾನ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ನಡುವೆ ರಥ ಕಟ್ಟುವ ಕೆಲಸಗಾರರು ತೇರಿಗೆ ತಳಿರು ತೋರಣಗಳಿಂದ ಶೃಂಗರೀಸುವ ಕೆಲಸ ನಡೆಸಿದ್ದು, ಭಕ್ತರಲ್ಲಿ ರಥೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಮಾ. ೨೧ರ ಸಂಜೆ ೪.೧೫ಕ್ಕೆ ರಥೋತ್ಸವ ಆರಂಭವಾಗಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

Share this article