ಸಿದ್ದಾಪುರ: ಜೂ.4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿಯ ಐಪಿಎಲ್ ವಿಜಯೋತ್ಸವದ ಸಂದರ್ಭ ಕಾಲ್ತುಳಿತಕ್ಕೆ ಬಲಿಯಾದ ಅಕ್ಷತಾ ಆಶಯ್ ಅಂಬಳ್ಳಿ (27) ಅವರ ಅಂತ್ಯಸಂಸ್ಕಾರ ಪಟ್ಟಣದ ಹೊಸೂರಿನ ಜಿಎಸ್‌ಬಿ ಸ್ಮಶಾನದಲ್ಲಿ ಗುರುವಾರ ನಡೆಯಿತು.
ಗುರುವಾರ ಬೆಳಿಗ್ಗೆ ಅಕ್ಷತಾ ಅಂಬಳ್ಳಿ ಅವರ ಪಾರ್ಥಿವ ಶರೀರವನ್ನು ಪಟ್ಟಣದ ರವೀಂದ್ರನಗರದ ಅವರ ಮೂಲ ಮನೆಗೆ ತರಲಾಯಿತು. ಅಂಬಳ್ಳಿ ಕುಟುಂಬದ ಹಾಗೂ ಮೃತರ ಸಂಬಂಧಿಕರು, ಆಪ್ತರು ಇದ್ದರು.
ಸರ್ಕಾರದ ಪರವಾಗಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ, ತಹಸೀಲದಾರ ಎಂ.ಆರ್. ಕುಲಕರ್ಣಿ ಅಧಿಕಾರಿಗಳು ಪಾಲ್ಗೊಂಡು ಅಕ್ಷತಾಗೆ ಅಂತಿಮ ಗೌರವ ಸಲ್ಲಿಸಿದರು. ಜನಪ್ರತಿನಿಧಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅಕ್ಷತಾ ಅವರ ಪತಿ ಆಶಯ್ ಅಂಬಳ್ಳಿ, ಆರ್ಸಿಬಿ ತಂಡ ಐಪಿಎಲ್ ನಲ್ಲಿ ಗೆದ್ದ ಸಂಭ್ರಮಾಚರಣೆಯನ್ನು ಬುಧವಾರ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದು ಆರ್ಸಿಬಿ ಇನ್ಸ್ಟಾಗ್ರಾಮ್ ಪೇಜ್ ನಿಂದ ತಿಳಿದು ಬಂತು. ನಾನು, ಪತ್ನಿ ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದು ಅರ್ಧ ದಿನದ ರಜೆ ಪಡೆದು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ತೆರಳಿದೆವು. ಅಲ್ಲಿ ತಲುಪಿದ ನಂತರ ನಮಗೆ ಪರೇಡ್ ನಡೆಯುತ್ತಿಲ್ಲ. ಕ್ರೀಡಾಂಗಣಕ್ಕೆ ತೆರಳಲು ಎಲ್ಲರಿಗೂ ಉಚಿತ ಅವಕಾಶವಿದೆ ಎಂದು ತಿಳಿದು ಬಂದಿತು.
ಅದರಂತೆ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂಬರ್ 17 ತೆರೆದುಕೊಂಡಿತು. ನಾವು ಕ್ರೀಡಾಂಗಣದ ಒಳಗಡೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದೆವು. ಜನ ಒಮ್ಮೆಲೇ ಗೇಟಿನಿಂದ ಒಳ ನುಗ್ಗಲು ಪ್ರಯತ್ನಿಸಿದರು. ಅದರಿಂದ ಕಾಲ್ತುಳಿತ ಆರಂಭಗೊಂಡಿತು. ನಾನು ಪಕ್ಕದಲ್ಲಿದ್ದ ಬ್ಯಾರಿಕೇಡ್‌ನ ಸಹಾಯ ಪಡೆದು ನಿಂತಿದ್ದೆ. ಪತ್ನಿಯ ಕೈಯನ್ನು ಸಹ ಹಿಡಿದುಕೊಂಡಿದ್ದೆ. ಆದರೆ ನೂಕು ನುಗ್ಗಲಿನಿಂದ ನಾನು ಮತ್ತು ನನ್ನ ಪತ್ನಿ ಕೆಳಗೆ ಬಿದ್ದೆವು. ನಾನು ಸಹಾಯಕ್ಕಾಗಿ ಅಂಗಲಾಚಿದೆ. ನನ್ನನ್ನು ಯಾರೋ ಪಕ್ಕಕ್ಕೆ ಎಳೆದೊಯ್ದರು. ಆದರೆ ಪತ್ನಿಯ ಸುಳಿವೇ ಸಿಗಲಿಲ್ಲ. ಪತ್ನಿಯನ್ನು ಹುಡುಕಲು ಬಹಳ ಪ್ರಯತ್ನಿಸಿದೆ. ಜನರನ್ನು, ಪೊಲೀಸರನ್ನು ಸಹ ಸಂಪರ್ಕಿಸಿದೆ. ಉತ್ತರ ಸಿಗಲಿಲ್ಲ. ನಂತರ ಸುತ್ತಮುತ್ತಲಿನ ಆಸ್ಪತ್ರೆಗಳನ್ನು ಸಂಪರ್ಕಿಸಿದೆ. ಕೊನೆಯಲ್ಲಿ ಬೋರಿಂಗ್ ಆಸ್ಪತ್ರೆಯಲ್ಲಿ ಪತ್ನಿಯ ಶವ ದೊರೆಯಿತು ಎಂದು ಘಟನೆಯನ್ನು ವಿವರಿಸಿದರು.