ಬೆಂಗಳೂರು : ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತದಿಂದ ಮೃತಪಟ್ಟ ಮಗನ ಮುಖ ತೋರಿಸುವಂತೆ ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರೇ ವೈದ್ಯರನ್ನು ಅಂಗಾಲಾಚಿದ ಹೃದಯ ವಿದ್ರಾವಕ ಪ್ರಸಂಗ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದಾಗ ಪುತ್ರನ ಕಳೆದುಕೊಂಡು ರೋದಿಸುತ್ತಿದ್ದ ತಂದೆ, ‘ಒಂದು ಸಲವಾದರೂ ಮುಖ ತೋರಿಸಿ ಸರ್. ರಾತ್ರಿ ನೋಡಿದ್ದು ಸರ್ ಬೆಳಗ್ಗೆ ನೋಡಿಲ್ಲ. ಒಂದು ಸಲವಾದರೂ ತೋರಿಸಲು ಹೇಳಿ ಸರ್... ಎಲ್ಲಿದ್ದಾನೆ ತೋರಿಸಿ ಸರ್...’ ಎಂದು ಅಂಗಾಲಾಚಿ ಬೇಡಿಕೊಂಡರು.
ನನ್ನ ಮಗನಿಗೆ ಈ ಸ್ಥಿತಿ ಯಾಕೆ ಬಂತಪ್ಪಾ ದೇವರೇ ಎಂದು ನೋವಿನಿಂದ ತಂದೆ ಗೋಳಾಡುತ್ತಿದ್ದರು.
ಪುತ್ತೂರು ಮೂಲದ ವಿದ್ಯಾರ್ಥಿನಿ ಸಾವು
ಮಂಗಳೂರು: ಕಾಲೇಜಿಗೆ ತೆರಳಿದ್ದ ಚಿನ್ಮಯಿ ಶೆಟ್ಟಿ ತನ್ನ ಸ್ನೇಹಿತರ ಜೊತೆ ಆರ್‌ಸಿಬಿ ಗೆಲುವಿನ ಸಂಭ್ರಮ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಕಾಲು ತುಳಿತಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ಆಕೆಯ ಪೋಷಕರಿಗೆ ಕರೆ ಮಾಡಿ ತಿಳಿಸಲಾಗಿದೆ.
ಚಿನ್ಮಯಿ ಶೆಟ್ಟಿ (19) ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರು.
ಈಕೆ ತಂದೆ ಕರುಣಾಕರ ಶೆಟ್ಟಿ, ತಾಯಿ ಪೂಜಾ. ಓರ್ವ ಸಹೋದರ ಬ್ಯಾಂಕ್ ಉದ್ಯೋಗದಲ್ಲಿದ್ದಾರೆ. ತಂದೆ ಕರುಣಾಕರ ರೈ ಬೆಂಗಳೂರಿನ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾರೆ. ಪ್ರಸ್ತುತ ಈ ಕುಟುಂಬ ಬೆಂಗಳೂರಿನ ನಾರಾಯಣ ನಗರದಲ್ಲಿ ನೆಲೆಸಿದ್ದಾರೆ.
ಈಕೆ ಬೆಂಗಳೂರು ಜ್ಯೋತಿ ಕೇಂದ್ರೀಯ ವಿದ್ಯಾಲಯದ ಪ್ರಥಮ ವರ್ಷದ ಬಿಇ ವಿದ್ಯಾರ್ಥಿನಿ. ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದು ಓದಿನಲ್ಲೂ ಮುಂದೆ ಇದ್ದ ಈಕೆ ಕ್ರೀಡೆಯಲ್ಲೂ ಸಾಧಕಿ. ಯಕ್ಷ ತರಂಗ ಯಕ್ಷಗಾನ ತರಬೇತಿ ಸಂಸ್ಥೆಯ ವಿದ್ಯಾರ್ಥಿ.
ಮಂಡ್ಯದ ಯುವಕ ಬಲಿ
ಕೆ.ಆರ್.ಪೇಟೆ(ಮಂಡ್ಯ): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ ತಾಲೂಕಿನ ರಾಯಸಮುದ್ರ ಗ್ರಾಮದ ಯುವಕ ಮೃತಪಟ್ಟಿದ್ದಾರೆ. ಪೂರ್ಣಚಂದ್ರ(26) ಮೃತ ಯುವಕ. ಇವರು ಮೈಸೂರಿನ ಖಾಸಗಿ ಕಂಪನಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸಮಾಡುತ್ತಿದ್ದರು. ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಕಪ್ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯನ್ನು ಏರ್ಪಡಿಸಲಾಗಿತ್ತು. ಇದನ್ನು ಕಣ್ತುಂಬಿಕೊಳ್ಳಲು ಮೈಸೂರಿನಿಂದ ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಮೃತ ಯುವಕನ ತಂದೆ ಚಂದ್ರು ಮರುವನಹಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಪ್ ತುಳಿತಕ್ಕೆ ಕೋಲಾರದ ಸಹನಾ ಸಾವು
-ಎಂಜಿನಿಯರ್ ಆಗಿದ್ದ ಯುವತಿ
ಕೋಲಾರ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಐಪಿಎಲ್ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕೋಲಾರದ ಸಹನಾ (24) ಮೃತಪಟ್ಟಿದ್ದಾರೆ. ಸಹನಾ, ಮೂಲತಃ ಕೆಜಿಎಫ್ ತಾಲೂಕಿನ ಟಿ.ಗೊಲ್ಲಹಳ್ಳಿ ಪಂಚಾಯಿತಿಯ ಬಡಮಾಕನಹಳ್ಳಿ ಗ್ರಾಮದವರು. ಕೋಲಾರದ ವಿದ್ಯಾಜ್ಯೋತಿ ಶಾಲೆಯಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಮುಗಿಸಿ, ಖಾಸಗಿ ಸಂಸ್ಥೆಯಲ್ಲಿ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದರು. ತಂದೆ ಸುರೇಶ್ ಕುಮಾರ್ ಮತ್ತು ತಾಯಿ ಮಂಜುಳಾ ಇಬ್ಬರೂ ಸರ್ಕಾರಿ ಶಿಕ್ಷಕರಾಗಿದ್ದಾರೆ.