ಸೂಕ್ತ ತಯಾರಿ ಮಾಡಿಕೊಳ್ಳಬೇಕಿತ್ತು : ಬಿಸಿಸಿಐ

Published : Jun 05, 2025, 09:22 AM IST
RCB

ಸಾರಾಂಶ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತಕ್ಕೆ ಬಿಸಿಸಿಐ ದಿಗ್ಭ್ರಮೆ ವ್ಯಕ್ತಪಡಿಸಿದೆ. ಸಂಭ್ರಮಾಚರಣೆಗೂ ಮುನ್ನ ಆಯೋಜಕರು ಸೂಕ್ತ ಸಿದ್ಧತೆ ಮಾಡಬೇಕಿತ್ತು ಎಂದಿದೆ.

 ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತಕ್ಕೆ ಬಿಸಿಸಿಐ ದಿಗ್ಭ್ರಮೆ ವ್ಯಕ್ತಪಡಿಸಿದೆ. ಸಂಭ್ರಮಾಚರಣೆಗೂ ಮುನ್ನ ಆಯೋಜಕರು ಸೂಕ್ತ ಸಿದ್ಧತೆ ಮಾಡಬೇಕಿತ್ತು ಎಂದಿದೆ.

ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಪ್ರತಿಕ್ರಿಯಿಸಿದ್ದು, ‘ಈ ಘಟನೆ ನಡೆಯಬಾರದಿತ್ತು. ಜನರಲ್ಲಿ ಕ್ರಿಕೆಟ್‌ನ ಕ್ರೇಜ್‌ ಹೆಚ್ಚಿದೆ. ಹೀಗಾಗಿ ಆಯೋಜಕರು ಮೊದಲೇ ಸೂಕ್ತ ತಯಾರಿ ನಡೆಸಬೇಕಿತ್ತು. ಮೃತರ ಕುಟುಂಬಸ್ಥರಿಗೆ ಸಂತಾಪಗಳು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ’ ಎಂದು ಹಾರೈಸಿದ್ದಾರೆ.

‘ಕಳೆದ ವರ್ಷ ಕೋಲ್ಕತಾ ಐಪಿಎಲ್‌ ಟ್ರೋಫಿ ಗೆದ್ದಾಗಲೂ ಸಂಭ್ರಮಾಚರಣೆ ನಡೆಸಲಾಗಿತ್ತು. ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್‌ ಆದಾಗಲೂ ಸಂಭ್ರಮಿಸಲಾಗಿತ್ತು. ಮಂಗಳವಾರದ ಫೈನಲ್‌ ವೇಳೆ ಅಹಮದಾಬಾದ್‌ನಲ್ಲಿ 1.20 ಲಕ್ಷ ಜನ ಸೇರಿದ್ದರು. ಆದರೆ ಬೆಂಗಳೂರಿನಂತಹ ದುರ್ಘಟನೆ ನಡೆದಿಲ್ಲ. ಈ ರೀತಿ ಸಂಭ್ರಮಾಚರಣೆಗೂ ಮುನ್ನ ಸೂಕ್ತ ಭದ್ರತೆ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳಬೇಕಿತ್ತು’ ಎಂದಿದ್ದಾರೆ.

ಇದು ಬಿಸಿಸಿಐ ಕಾರ್‍ಯಕ್ರಮ ಅಲ್ಲ: ಐಪಿಎಲ್‌ ಮುಖ್ಯಸ್ಥ

ನವದೆಹಲಿ: ಬೆಂಗಳೂರಿನ ಘಟನೆ ಬಗ್ಗೆ ಐಪಿಎಲ್ ಮುಖ್ಯಸ್ಥ ಅರುಣ್‌ ಧುಮಾಲ್‌ ಪ್ರತಿಕ್ರಿಯಿಸಿದ್ದು, ಸಂಭ್ರಮಾಚರಣೆಗೆ ಮೊದಲೇ ಸಿದ್ಧತೆ ನಡೆಸಲಾಗಿತ್ತೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

‘ಈ ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಲಿದ್ದಾರೆ. ಇದು ಬಿಸಿಸಿಐ ಕಾರ್ಯಕ್ರಮ ಅಲ್ಲ. ಸಂಭ್ರಮಾಚರಣೆ ದುರಂತ ಅಂತ್ಯ ಕಂಡಿದ್ದು ಖೇದಕರ. ಜೀವ ಕಳೆದುಕೊಂಡವರ ಕುಟುಂಬಸ್ಥರಿಗೆ ಸಂತಾಪಗಳು’ ಮಾಧ್ಯಮಗಳಿಗೆ ತಿಳಿಸಿದ್ದಾರೆ. ‘ಘಟನೆ ಬಗ್ಗೆ ಆರ್‌ಸಿಬಿ ಫ್ರಾಂಚೈಸಿ ಜೊತೆ ಮಾತನಾಡಿದಾಗ, ಅವರಿಗೆ ಕ್ರೀಡಾಂಗಣದ ಹೊರಗಿನ ಪರಿಸ್ಥಿತಿ ಬಗ್ಗೆ ಗೊತ್ತಿರಲಿಲ್ಲ. ಅವರಿಗೆ ದುರಂತರ ಬಗ್ಗೆ ಮಾಹಿತಿ ನೀಡಿದಾಗ ಕಾರ್ಯಕ್ರಮ ಮೊಟಕುಗೊಳಿಸುವುದಾಗಿ ತಿಳಿಸಿದ್ದಾರೆ. ಧರ್ಮಶಾಲಾದಲ್ಲಿ ಪಂದ್ಯ ಅರ್ಧಕ್ಕೇ ಸ್ಥಗಿತಗೊಂಡಾಗ ಒಬ್ಬರಿಗೂ ಗಾಯವಾದಂತೆ ನೋಡಿಕೊಂಡಿದ್ದೇವೆ’ ಎಂದು ಅರುಣ್‌ ತಿಳಿಸಿದ್ದಾರೆ.

PREV
Read more Articles on

Recommended Stories

ಮಕ್ಕಳ ಕುಬ್ಜ ಬೆಳವಣಿಗೆ: 2 ಜಿಲ್ಲೆಯ ಸ್ಥಿತಿ ಕಳವಳ
ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ